ಬ್ಯಾಡಗಿ: ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆಗೆ ಸೋಮವಾರ ದಾಖಲೆಯ 2.43 ಲಕ್ಷ ಮೆಣಸಿಕಾಯಿ ಚೀಲಗಳು ಆವಕಾಗಿದ್ದು, ಪ್ರಸಕ್ತ ವರ್ಷದಲ್ಲಿ ಇದು ಅತೀ ಹೆಚ್ಚು ಎನಿಸಿದೆ. ಆದರೂ ದರದಲ್ಲಿ ಮಾತ್ರ ಎಂದಿನಂತೆ ಸ್ಥಿರತೆ ಮುಂದುವರೆದಿದೆ.

ಸೋಮವಾರ ಬ್ಯಾಡಗಿ ಮಾರುಕಟ್ಟೆ ಅಕ್ಷರಶಃ ಮೆಣಸಿನಕಾಯಿ ಚೀಲಗಳಿಂದ ತುಂಬಿ ಹೋಗಿತ್ತು, ಎಲ್ಲಿ ಕಣ್ಣು ಹಾಯಿಸಿದರೂ ಸಾಗರದಂತೆ ಮೆಣಸಿನಕಾಯಿ ಚೀಲಗಳೇ ಕಂಡು ಬಂದಿದ್ದು, ಪ್ರಸಕ್ತ ವರ್ಷದ ದಾಖಲೆಯ ಒಟ್ಟು 2,43,160 ಚೀಲಗಳು ಮಾರಾಟಕ್ಕೆ ಲಭ್ಯವಿದ್ದವು. ಕಳೆದ ವರ್ಷ ಫೆ.4ರಂದು 4.09 ಲಕ್ಷ ಮೆಣಸಿಕಾಯಿ ಚೀಲಗಳು ಆವಕಾಗಿದ್ದು, ಮೆಣಸಿನಕಾಯಿ ಮಾರುಕಟ್ಟೆ ಆರಂಭವಾದಾಗಿನಿಂದ ಈವರೆಗಿನ ದಾಖಲೆ ಎನಿಸಿದೆ.

ವಿಶ್ವದಲ್ಲೇ ಅತೀ ಹೆಚ್ಚು ಮೆಣಸಿನಕಾಯಿ ಆವಕವಾಗುವ ದ್ವಿತೀಯ ಮಾರುಕಟ್ಟೆ ಎಂಬ ಖ್ಯಾತಿ ಪಡೆದಿರುವ ಬ್ಯಾಡಗಿ ಮಾರುಕಟ್ಟೆ ವಿಶ್ವದ ನಂ.1 ಸ್ಥಾನ ತಲುಪುವತ್ತ ದಾಪುಗಾಲು ಹಾಕುತ್ತಿದೆ, ಪ್ರಸಕ್ತ ವರ್ಷ ಇಲ್ಲಿಯವರೆಗೂ 1 ಲಕ್ಷದ ಆಸು ಪಾಸಿನಲ್ಲಿದ್ದ ಆವಕ 10 ಬಾರಿ ಲಕ್ಷದ ಗೆರೆಯನ್ನು ದಾಟಿದ್ದು ಮಾ.16ರಂದು ಮೊದಲ ಬಾರಿಗೆ 2,43 ಲಕ್ಷ ದಾಟಿದೆ.ದರದಲ್ಲಿ ಸ್ಥಿರತೆ: ಸೋಮವಾರ ಎರಡೂವರೆ ಲಕ್ಷ ಚೀಲ ಆವಕವಾಗಿದ್ದರೂ ಸಹ ಸರಾಸರಿ ದರದಲ್ಲಿ ಹೆಚ್ಚಿನ ವ್ಯತ್ಯಾಸ ಕಂಡು ಬಂದಿಲ್ಲ, ಗುಣಮಟ್ಟದ ಮೆಣಸಿನಕಾಯಿಗೆ ಅತ್ಯುತ್ತಮ ದರ ನೀಡುತ್ತ ಬಂದಿರುವ ವ್ಯಾಪಾರಸ್ಥರು ಸೋಮವಾರವೂ ಸಹ ಉತ್ತಮ ದರ ನೀಡಿದ ಪರಿಣಾಮ ಕಡ್ಡಿ, ಡಬ್ಬಿ ಗುಂಟೂರ ತಳಿ ಮೆಣಸಿನಕಾಯಿ ದರದಲ್ಲಿ ಸ್ಥಿರತೆ ಕಾಯ್ದುಕೊಂಡಿದೆ.ಸೋಮವಾರದ ಮಾರುಕಟ್ಟೆ ದರ: ಸೋಮವಾರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಡ್ಡಿ ಮೆಣಸಿನಕಾಯಿ ತಳಿ ಕನಿಷ್ಠ ₹ 4009 ಗರಿಷ್ಠ ₹ 58889 ಸರಾಸರಿ ₹ 47529, ಡಬ್ಬಿತಳಿ ಕನಿಷ್ಠ ₹ 5019, ಗರಿಷ್ಠ ₹ 62000 ಸರಾಸರಿ ₹ 49529, ಗುಂಟೂರು ಕನಿಷ್ಠ ₹ 1409 ಗರಿಷ್ಠ ₹ 17529 ಸರಾಸರಿ ₹ 13109 ಗಳಿಗೆ ಮಾರಾಟವಾಗಿವೆ.ರಸ್ತೆ ಮೇಲಿಟ್ಟು ಮಾರಾಟ

ಪ್ರಸಕ್ತ ವರ್ಷ ಮೊದಲ ಬಾರಿಗೆ ಎರಡೂವರೆ ಲಕ್ಷಕ್ಕೂ ಅಧಿಕ ಮೆಣಸಿನಕಾಯಿ ಆವಕವಾದ ಕಾರಣ ಎಲ್ಲಿ ನೋಡಿದರಲ್ಲಿ ಮೆಣಸಿನ ಕಂಪು ಮತ್ತು ಘಾಟು ಹೆಚ್ಚಾಗಿತ್ತು, ಮಾರುಕಟ್ಟೆಯಲ್ಲಿ ಕಾಲಿಡಲು ಸಹ ಜಾಗವಿಲ್ಲದಂತಾಗಿದ್ದು, ಕೆಲ ವರ್ತಕರು ರಸ್ತೆಗಳ ಮೇಲಿಟ್ಟು ಮೆಣಸಿನಕಾಯಿ ಮಾರಾಟ ಮಾಡಿದರು.