ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ವರ್ಷ ಯಾವುದೇ ಮಂಕಿಪಾಕ್ಸ್, ನಿಫಾ ಪ್ರಕರಣಗಳು ಕಂಡುಬಂದಿಲ್ಲ. ಆದರೆ ಸಾರ್ವಜನಿಕರು ಆರೋಗ್ಯದ ಬಗ್ಗೆ ನಿಗಾ ವಹಿಸಬೇಕು ಎಂದು ದ.ಕ. ಜಿಲ್ಲಾ ಆರೋಗ್ಯಾಕಾರಿ ಡಾ. ಎಚ್.ಆರ್. ತಿಮ್ಮಯ್ಯ ಹೇಳಿದರು.ಶುಕ್ರವಾರ ತಮ್ಮ ಇಲಾಖಾ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂಡುಬಿದಿರೆಯ ನೆಲ್ಲಿಕಾರು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರಿಗೆ ಕೆಲವು ದಿನಗಳ ಹಿಂದೆ ಕಾಲರಾ ರೋಗ ದೃಢಪಟ್ಟಿದ್ದು, ಸದ್ಯ ಚೇತರಿಕೆ ಕಂಡಿದ್ದಾರೆ. ಉಡುಪಿ ಜಿಲ್ಲೆಯ ಹೋಟೆಲ್‌ವೊಂದರಲ್ಲಿ ಆಹಾರ ತಿಂದ ವ್ಯಕ್ತಿಯಲ್ಲಿ ಕಾಲರಾ ಕಾಣಿಸಿಕೊಂಡಿತ್ತು. ಸದ್ಯ ಆತಂಕದ ಲಕ್ಷಣವಿಲ್ಲ. ಆ ಹೋಟೆಲ್ ಅನ್ನೂ ನಿಗಾವಣೆಯಲ್ಲಿರಿಸಿದ್ದೇವೆ ಎಂದರು.
ಸಾಂಕ್ರಾಮಿಕ ರೋಗಗಳ ಬಗ್ಗೆ ನಿಗಾ ವಹಿಸುವಂತೆ ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ಸೂಚನೆ ನೀಡಲಾಗಿದೆ. ಕಾಲರಾ ತಡೆಯುವ ಉದ್ದೇಶಕ್ಕೆ ಹೋಟೆಲ್ ಮಾಲೀಕರ ಸಂಘದ ಸಭೆ ನಡೆಸಿದ್ದು, ಗ್ರಾಹಕರಿಗೆ ಶುದ್ಧ ಬಿಸಿ, ಆರಿಸಿದ ಕುಡಿಯುವ ನೀರು ಸಹಿತ ಶುಚಿ ಆಹಾರ ನೀಡುವಂತೆ, ಗ್ರಾಹಕರ ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆ ವಹಿಸಲು ಸೂಚನೆ ನೀಡಲಾಗಿದೆ. ಜಿ.ಪಂ. ಸಿಇಒ ಅವರ ಅಧ್ಯಕ್ಷತೆಯಲ್ಲಿ ಟಾಸ್ಕ್‌ಫೋರ್ಸ್ ಸಭೆ ನಡೆದಿದೆ. ವಿವಿಧ ಇಲಾಖೆಗಳ ಅಕಾರಿಗಳು ಭಾಗವಹಿಸಿದ್ದು, ಜಿಲ್ಲೆಯ ಎಲ್ಲ ಓವರ್ ಹೆಡ್ ಟ್ಯಾಂಕ್‌ನ್ನು ಮೂರು ತಿಂಗಳೊಳಿಗೊಮ್ಮೆ ಸ್ವಚ್ಛಗೊಳಿಸುವಂತೆ ಸೂಚಿಸಿದ್ದಾರೆ ಎಂದರು.ಕಾಲರಾ ರೋಗಕ್ಕೆ ತುತ್ತಾದ ಸಂದರ್ಭದಲ್ಲಿ ಅತೀಸಾರ ನಿರ್ಜಲೀಕರಣಕ್ಕೆ ಕಾರಣವಾಗುತ್ತಿದೆ. ವಾಂತಿ ಭೇದಿ ಕಾಣಿಸಿಕೊಂಡು ಕೂಡಲೇ ವೈದ್ಯರನ್ನು ಭೇಟಿಯಾಗಬೇಕು. ಹಣ್ಣು ತರಕಾರಿಗಳನ್ನು ಚೆನ್ನಾಗಿ ತೊಳೆದು ತಿನ್ನಬೇಕು. ರಸ್ತೆ ಬದಿಯಲ್ಲಿ ಮಾರಾಟ ಮಾಡುವ ತಿನಿಸು ಹಾಗೂ ತಳ್ಳು ಗಾಡಿಯಲ್ಲಿ ಮಾರಾಟ ಮಾಡುವ ಆಹಾರ, ಹಣ್ಣು ಸೇವಿಸಬಾರದು. ಮಕ್ಕಳ ಕೈಗಳನ್ನು ಸ್ವಚ್ಛವಾಗಿ ತೊಳೆದು ಆಹಾರ ಉತ್ಪನ್ನಗಳನ್ನು ಬಳಸುವ ಬಗ್ಗೆ ಅರಿವು ಮೂಡಿಸಬೇಕು. ಕಾಲರಾ ಸೋಂಕು ಅತಿಸಾರ, ನಿರ್ಜಲೀಕರಣಕ್ಕೆ ಕಾರಣವಾಗಬಹುದು. ಸ್ವಚ್ಛತೆಗೆ ಆದ್ಯತೆ ಕಡಿಮೆ ಇರುವ ಸ್ಥಳಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ ಎಂದು ಅವರು ಹೇಳಿದರು.ಮಂಕಿಪಾಕ್ಸ್ ವೈರಸ್ ಲಕ್ಷಣ : ದ.ಕ. ಜಿಲ್ಲಾ ಸರ್ವೇಕ್ಷಣಾಕಾರಿ ಡಾ. ನವೀನ್ ಚಂದ್ರ ಕುಲಾಲ್ ಮಾತನಾಡಿ, ಕಣ್ಣು, ಬಾಯಿ, ಚರ್ಮ, ಮೂಗಿನಿಂದ ಸ್ರವಿಸುವ ದ್ರವ ಮತ್ತು ಉಸಿರಾಟದ ಮೂಲಕ ಮಂಕಿಪಾಕ್ಸ್ ವೈರಸ್ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಸಾಮಾನ್ಯವಾಗಿ ಈ ವೈರಲ್ ಸೋಂಕು ಗುದದ್ವಾರ, ಜನನಾಂಗ, ಎದೆ, ಮುಖ ಅಥವಾ ಬಾಯಿಯ ಮೇಲೆ ದದ್ದುಗಳಿಂದ ಪ್ರಾರಂಭವಾಗುತ್ತದೆ. ಅನಂತರ ದೇಹದ ಇತರ ಭಾಗಗಳಿಗೆ ವಿಸ್ತರಿಸಬಹುದು. ಜ್ವರ, ತಲೆನೋವು, ಊದಿಕೊಂಡ ದುಗ್ಧರಸ ಗ್ರಂಥಿಗಳು, ಸ್ನಾಯು ನೋವು ಅಥವಾ ಶೀತ ಇತರ ರೋಗಲಕ್ಷಣಗಳಾಗಿವೆ. ಸುಮಾರು ನಾಲ್ಕು ವಾರಗಳವರೆಗೆ ಕಾಡುವ ಈ ಸೋಂಕು ಕೀವು ತುಂಬಿದ ಚರ್ಮದ ದದ್ದುಗಳಿಗೆ ಕಾರಣವಾಗುತ್ತದೆ, ಇದು ತುಂಬಾ ನೋವಿನಿಂದ ಕೂಡಿರುತ್ತದೆ ಎಂದು ವಿವರಿಸಿದರು.ಜಿಲ್ಲಾ ಆರೋಗ್ಯ ಶಿಕ್ಷಣಾಕಾರಿ ಜ್ಯೋತಿ ಉಳೆಪಾಡಿ, ತಾಲೂಕು ಆರೋಗ್ಯಾಕಾರಿ ಡಾ. ಸುಜಯ ಭಂಡಾರಿ ಇದ್ದರು.ದ.ಕ.ದಲ್ಲಿ ಮಂಕಿಪಾಕ್ಸ್ ಕೇಸ್ ಇಲ್ಲ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸದ್ಯ ಯಾವುದೇ ಮಂಕಿ ಪಾಕ್ಸ್ ಪ್ರಕರಣ ಕಂಡುಬಂದಿಲ್ಲ. ಆಫ್ರಿಕನ್ ದೇಶಗಳಿಂದ ಬರುವ ಪ್ರಯಾಣಿಕರನ್ನು ಮಂಗಳೂರು ವಿಮಾನ ನಿಲ್ದಾಣ ಮತ್ತು ನವ ಮಂಗಳೂರು ಬಂದರಿನಲ್ಲಿ ಸರ್ವೇಕ್ಷಣೆ ನಡೆಸಲಾಗುತ್ತಿದೆ. ಮಂಕಿ ಪಾಕ್ಸ್ ಸಿಡುಬು ರೋಗವನ್ನು ಹೋಲುತ್ತದೆ. ಇದಕ್ಕೆ ನಿರ್ದಿಷ್ಟವಾಗಿ ಯಾವುದೇ ಚಿಕಿತ್ಸೆಗಳಿಲ್ಲ. ರೋಗ ನಿರೋಧಕ ಶಕ್ತಿ ಹೊಂದಿದ್ದರೆ, ಚರ್ಮ ರೋಗವನ್ನು ಹೊಂದಿಲ್ಲದಿದ್ದರೆ ನೋವು ನಿವಾರಣೆ ಸೇರಿದಂತೆ ಸೂಕ್ತವಾದ ವೃತ್ತಿಪರ ಆರೈಕೆಯಿಂದ ಚೇತರಿಸಿಕೊಳ್ಳಬಹುದು ಎಂದು ಡಾ. ತಿಮ್ಮಯ್ಯ ತಿಳಿಸಿದರು.