ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಬಾಗಲಕೋಟೆ ಬಿವಿವಿ ಸಂಘದ ಎಸ್. ನಿಜಲಿಂಗಪ್ಪ ಮೆಡಿಕಲ್ ಕಾಲೇಜಿನ ಕ್ಯಾಂಪಸ್‌ಗೆ ಅನಕೃತವಾಗಿ ನುಗ್ಗಿದ ಕೆಲವರು, ಬಿಜೆಪಿಗೆ ಮತ ಹಾಕುವವರು ಖಂಡಿತ ಜೈಲಿಗೆ ಹೋಗುತ್ತಾರೆ ಎಂದು ವಿದ್ಯಾರ್ಥಿಗಳಿಗೆ ಭಯ ಹುಟ್ಟಿಸುವ ಕರಪತ್ರ ಹಂಚುತ್ತಿರುವ ಆರೋಪ ಕೇಳಿ ಬಂದಿದೆ.

ಕಾಂಗ್ರೆಸ್ ಪಕ್ಷದ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (ಎನ್ಎಸ್‌ಯುಐ) ಹೆಸರಿನಲ್ಲಿ ಕರಪತ್ರ ಮುದ್ರಿಸಿ, ವಿತರಣೆ ಮಾಡುತ್ತಿದ್ದಾರೆ. ಮೆಡಿಕಲ್ ಕಾಲೇಜಿಗೆ ನುಗ್ಗಿದ ಕೆಲವು ಯುವಕರು ಕೇಸರಿ ಶಾಲು ಹಾಕಿಕೊಂಡು ಹೋಗಿರುವುದು ಕಾಲೇಜಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಅನಧಿಕೃತವಾಗಿ ಕಾಲೇಜಿಗೆ ನುಗ್ಗಿ ಕೇಸರಿ ಶಾಲು ಹಾಕಿಕೊಂಡು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಬೆದರಿಕೆ ಕರಪತ್ರ ವಿತರಣೆ ಮಾಡುತ್ತಿದ್ದಾರೆ ಎಂದು ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದ್ದಲ್ಲದೇ ಅವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಇದರಿಂದ ಸಾಕಷ್ಟು ಗೊಂದಲ ವಾತಾವರಣ ನಿರ್ಮಾಣವಾಗಿದೆ.

ಕೇಸರಿ ಶಾಲು ಹಾಕಿಕೊಂಡು ಬಂದಿದ್ದ ಕಾಂಗ್ರೆಸ್‌ ಎನ್ಎಸ್‌ಯುಐ ಕಾರ್ಯಕರ್ತರು, ಯಾವುದೇ ಪರವಾನಗಿ ಇಲ್ಲದೆ ಕಾಲೇಜಿನ ಕ್ಯಾಂಪಸ್‌ ಗೆ ನುಗ್ಗಿದ್ದರು. ಇದನ್ನು ಕಂಡ ಸಿಬ್ಬಂದಿ ಹಾಗೂ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಬಿಜೆಪಿ ಕಾರ್ಯಕರ್ತರು ಅವರನ್ನು ಹಿಡಿದು ಪೊಲೀಸರಿಗೆ ಮಾಹಿತಿ ನೀಡಿ ವಶಕ್ಕೆ ಒಪ್ಪಿಸಿದ್ದಾರೆ.


ವಿಷಯ ತಿಳಿಯುತ್ತಿದ್ದಂತೆಯೇ ಬಿಜೆಪಿ ಕಾರ್ಯಕರ್ತರು ಸಿಪಿಐ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಮತ್ತೊಂದೆಡೆ ಕಾಂಗ್ರೆಸ್ ಕಾರ್ಯಕರ್ತರು ಸ್ಥಳದಲ್ಲಿ ಜಮಾಯಿಸಿದ್ದಾರೆ. ಪರಸ್ಪರ ಆರೋಪ, ಪ್ರತ್ಯಾರೋಪಗಳ ಘೋಷಣೆ ಕೂಗುತ್ತಿದ್ದು, ಇದರಿಂದ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.ಸ್ಥಳಕ್ಕೆ ಆಗಮಿಸಿದ್ದ ಬಿಜೆಪಿ ಚುನಾವಣೆ ಉಸ್ತುವಾರಿ ಅರುಣ ಶಹಾಪುರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೊನ್ನೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಕಾಲೇಜಿನ ವಿದ್ಯಾರ್ಥಿಗಳು ವೋಟು ಹಾಕಿದರೆ ಒಳಗೆ ಹಾಕಿಸುವುದಾಗಿ ಹೇಳಿ ಭಯ ಹುಟ್ಟಿಸಿದ್ದರು. ಅವರ ಹೇಳಿಕೆಯನ್ನು ಕಾರ್ಯಕರ್ತರು ಫಾಲೋ ಮಾಡಿದ್ದಾರೆ. ಅಧಿಕಾರಿಗಳು ಸಹ ಕಾಂಗ್ರೆಸ್ ಏಜಂಟ್‌ರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಠಾಣೆಯಿಂದಲೇ ಫೇಸ್‌ಬುಕ್‌ ಲೈವ್‌ ?: ಕೇಸರಿ ಶಾಲು ಹಾಕಿಕೊಂಡು ಅನಧಿಕೃತವಾಗಿ ಕಾಲೇಜು ಕ್ಯಾಂಪಸ್ ಗೆ ನುಗ್ಗಿ ಕರಪತ್ರ ಹಂಚಿದ್ದನ್ನು ಸಮರ್ಥಿಸಿಕೊಂಡು ಆರೋಪಿಗಳು ಪೊಲೀಸ್ ಠಾಣೆಯಿಂದಲೇ ಫೆಸ್‌ಬುಕ್‌ ಲೈವ್‌ ನಲ್ಲಿ ಮಾತನಾಡಿದ್ದು ಅಚ್ಚರಿ ಮೂಡಿಸಿದೆ. ಯಾವು ಎನ್ಎಸ್‌ಯುಐ ಕಾರ್ಯಕರ್ತರು, ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರು ತಮ್ಮ ಕಾಲೇಜಿನ ವಿದ್ಯಾರ್ಥಿಗಳ ಮೇಲೆ ಒತ್ತಡ ಹಾಕಿ ಮತ ಹಾಕುವಂತೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಪೊಲೀಸ್ ಠಾಣೆಯಿಂದ ಫೇಸ್‌ಬುಕ್‌ ಲೈವ್ ಮಾಡಿದ್ದೇಗೆ? ಠಾಣೆಯಲ್ಲಿ ಇದಕ್ಕೆ ಅವಕಾಶ ಹೇಗೆ ಸಿಕ್ಕಿತು ಎನ್ನುವುದು ಅಚ್ಚರಿಗೆ ಕಾರಣವಾಗಿದೆ.

ಇನ್ನು ಘಟನೆ ಬಗ್ಗೆ ಜಿಲ್ಲಾ ಚುನಾವಣಾಧಿಕಾರಿ ಸಂಗಪ್ಪ ಅವರು ಮಾತನಾಡಿ, ಎಸ್ಪಿ ಸಿದ್ಧಾರ್ಥ ಗೋಯಲ್ ಅವರಿಗೆ ನಿಜಲಿಂಗಪ್ಪ ಮೆಡಿಕಲ್ ಕಾಲೇಜಿನ ಆವರಣದಲ್ಲಿ ಹಂಚಿಕೆ ಮಾಡಲಾದ ಕರಪತ್ರ ಕುರಿತು, ಕಾನೂನು ಉಲ್ಲಂಘನೆ ಮಾಡಿದ ಬಗ್ಗೆ ದೂರು ಬಂದಿದೆ. ತಕ್ಷಣವೇ ಅನುಪಾಲನಾ ವರದಿ ಸಲ್ಲಿಸುವಂತೆ ಹೇಳಿದ್ದಾರೆ.

ಸಂಬಂಧಿಸಿದ ವ್ಯಕ್ತಿಗಳು/ಸಂಸ್ಥೆಗಳ ವಿರುದ್ಧ ತಕ್ಷಣ ನಿಯಮಾನುಸಾರ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಬೇಕು. ಕರಪತ್ರ ಮುದ್ರಿಸಿದವರು, ಪ್ರಕಟಿಸಿದವರು ಹಾಗೂ ಹಂಚಿದವರು ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು. ವೈದ್ಯಕೀಯ ಕಾಲೇಜು ಹಾಗೂ ಸುತ್ತಮುತ್ತ ಪ್ರದೇಶದಲ್ಲಿ ಶಾಂತಿ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.