ಕನ್ನಡಪ್ರಭ ವಾರ್ತೆ ಬೈಲಹೊಂಗಲ

ತಾಲೂಕಿನ ಸಂಗೊಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆಯಾಗದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಗ್ರಾಮಸ್ಥರು ಹಾಗೂ ರೈತರು ಶನಿವಾರ ಸಂಗೊಳ್ಳಿ ಹೆಸ್ಕಾಂ ಶಾಖೆಗೆ ಮುತ್ತಿಗೆ ಹಾಕಿ, ಸಿಬ್ಬಂದಿಯನ್ನು ಹೊರಗಡೆ ಕಳುಹಿಸಿ ಕಚೇರಿ ಗೇಟ್‌ಗೆ ಕೀಲಿ ಜಡಿದು ಇಡೀ ದಿನಪೂರ್ತಿ ಪ್ರತಿಭಟನೆ ನಡೆಸಿದರು.

ಈ ವೇಳೆ ರೈತರು ಕಚೇರಿ ಮುಂಭಾಗದಲ್ಲೇ ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಮುಂಜಾನೆ 8 ರಿಂದ ರಾತ್ರಿ 8ರವರೆಗೆ ಸ್ಥಳ ಬಿಟ್ಟು ಕದಲದೆ ಪ್ರತಿಭಟನೆ ಮುಂದುವರಿಸಿದರು.

ಈ ವೇಳೆ ಬಸವರಾಜ ಅಕ್ಕೊಳ್ಳಿ, ಬಸವರಾಜ ಆನೇಮಠ, ಮಡಿವಾಳಪ್ಪ ಉರಬಿನ ಹಾಗೂ ವಕೀಲ ಉಮೇಶ ಲಾಳ ಮಾತನಾಡಿ, ವಿದ್ಯುತ್ ಸರಬರಾಜು ಅಸಮರ್ಪಕವಾಗಿರುವುದರಿಂದ ಬೆಳೆಗಳಿಗೆ ನೀರುಣಿಸಲು ಸಾಧ್ಯವಾಗುತ್ತಿಲ್ಲ. ಕೇವಲ ಅರ್ಧಗಂಟೆ ಮಾತ್ರ ವಿದ್ಯುತ್ ನೀಡಲಾಗುತ್ತಿದೆ. ಇದರಿಂದ ಬೆಳೆಗಳು ಒಣಗುತ್ತಿವೆ. ಈ ಹಾನಿಗೆ ಹೊಣೆ ಯಾರು? ಎಂದು ಪ್ರಶ್ನಿಸಿದರು.

ರೈತರ ಹಿತಕ್ಕಾಗಿ ಕಾರ್ಯನಿರ್ವಹಿಸಬೇಕಾದ ಹೆಸ್ಕಾಂ ನಿರ್ಲಕ್ಷ್ಯ ತೋರಿಸುತ್ತಿದೆ. ಮೇಲಾಧಿಕಾರಿಗಳು ಸ್ಥಳಕ್ಕೆ ಬಂದು ಸಮರ್ಪಕ ವಿದ್ಯುತ್ ಪೂರೈಕೆ ಮಾಡುವ ಭರವಸೆ ನೀಡುವವರೆಗೆ ಪ್ರತಿಭಟನೆ ಮುಂದುವರಿಸಲಾಗುವುದು ಎಂದು ಎಚ್ಚರಿಸಿದರು.


ನಂತರ ಸ್ಥಳಕ್ಕೆ ಆಗಮಿಸಿದ ಸೆಕ್ಷನ್ ಆಫೀಸರ್ ಅರವಿಂದ ಆರೂರ ಹಾಗೂ ಮಾರುತಿ ಬೋವಿ ಅವರೊಂದಿಗೆ ರೈತರು ವಾಗ್ವಾದ ನಡೆಸಿದರು. ರೈತರು ವಿದ್ಯುತ್ ಬೇಕೇ ಬೇಕು ಎಂದು ಪಟ್ಟು ಹಿಡಿದ ಹಿನ್ನೆಲೆಯಲ್ಲಿ, ಬೆಳಗ್ಗೆ 6 ಗಂಟೆಯವರೆಗೆ ನಿರಂತರ ವಿದ್ಯುತ್ ಪೂರೈಕೆ ಮಾಡುವ ಭರವಸೆ ನೀಡಲಾಯಿತು.

ಇದರಿಂದ ರೈತರು ಪ್ರತಿಭಟನೆಯನ್ನು ಹಿಂತೆಗೆದುಕೊಂಡರು.

ಈ ಸಂದರ್ಭದಲ್ಲಿ ಸುರೇಶ ಕುರಿ, ಬಾಳಪ್ಪ ವಾರದ, ಚಂಬಣ್ಣ ಕೊಡೂಳ್ಳಿ, ಹೊನ್ನಪ್ಪ ಮಿಸಿಗೇರ, ರಾಯಪ್ಪ ಅಂಬಿಗೇರ, ಶಿವಾನಂದ ದುರಗುಂಟಿ, ರಾಜು ಕೊಡ್ಲಿ, ಜಗದೀಶ್ ಕೊಡೂಳ್ಳಿ, ವಿರೇಶ ಅರಳಿಕಟ್ಟಿ, ರಾಯಪ್ಪ ಹೆಗಡೆ, ಸೋಮನಿಂಗ ಬೆಟಗೇರಿ, ಅದೃಶಪ್ಪ ಕುರಿ, ಈರಣ್ಣ ಚಂದರಗಿ, ಗಂಗಾಧರ ಹಿರೇಮಠ, ನಾಗಪ್ಪ ವಾರದ, ನಿಂಗಪ್ಪ ಹಕ್ಕಿ, ಬಾಳಪ್ಪ ಪತ್ತಾರ, ಯಲ್ಲಪ್ಪ ಕುರಿ, ಪ್ರಕಾಶ ಕಂಬಿ ಸೇರಿ ಹಲವರು ಇದ್ದರು.