ಕನ್ನಡಪ್ರಭ ವಾರ್ತೆ ವಿಜಯಪುರ

ಲಿಂಗಸುಗೂರು ಸಿದ್ರಾಮಪ್ಪ ಹೆಸರಿನಲ್ಲಿ ಅವರ ಪುತ್ರ ಶಿವರಾಜ ಕೆಂಭಾವಿಯವರು ಹೊಸದಾಗಿ ಸ್ಥಾಪನೆ ಮಾಡಿರುವ ಲಿಂಗಸುಗೂರು ಸಿದ್ರಾಮಪ್ಪ ಪ್ರಶಸ್ತಿಗೆ ವಿಜಯಪುರ ಜಿಲ್ಲೆಯ ಏಷ್ಯಾ ನೆಟ್ ಸುವರ್ಣ ನ್ಯೂಸ್ ಟಿವಿ ಜಿಲ್ಲಾ ಹಿರಿಯ ವರದಿಗಾರ ಷಡಕ್ಷರಿ ಬಸವರಾಜು ಕಂಪೂನವರ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮತ್ತು ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬೀದರ್‌ನಲ್ಲಿ ಏ.೧೧ ಮತ್ತು ೧೨ ರಂದು ನಡೆಯಲಿರುವ ೪೦ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು.ಕಳೆದ 8 ವರ್ಷದಿಂದ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ:

೧೯೮೯ರ ಆಗಸ್ಟ್ ೧ ರಂದು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮದಲ್ಲಿ ಬಸವರಾಜ್ ಶಿವಲಿಂಗಪ್ಪ ಕಂಪೂನವರ-ಮಹಾನಂದ ದಂಪತಿಯ ಹೆಮ್ಮೆಯ ಪುತ್ರರಾಗಿ ಜನಿಸಿದ್ದಾರೆ. ಸಂಕೋನಟ್ಟಿಯ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ವರ್ಧಮಾನ ಶಿಕ್ಷಣ ಸಂಸ್ಥೆಯಲ್ಲಿ ಪ್ರೌಢ ಶಿಕ್ಷಣ ಪೂರ್ಣಗೊಳಿಸಿದ್ದಾರೆ. ಅಥಣಿಯ ಜೆ.ಎ.ಕಾಲೇಜಿನಲ್ಲಿ ಪಿಯುಸಿ ಹಾಗೂ ಕೆ.ಎ.ಲೋಕಾಪುರೆ ಡಿಗ್ರಿ ಕಾಲೇಜಿನಲ್ಲಿ ಬಿ.ಎ (ಎಲ್‌ಎಲ್‌ಬಿ) ಪದವಿ ಪಡೆದಿದ್ದಾರೆ. ೨೦೦೫-೦೬ರಲ್ಲಿ ವಿದ್ಯಾರ್ಥಿ ದೆಶೆಯಲ್ಲೇ ಪತ್ರಿಕೋದ್ಯಮ ಪ್ರವೇಶಿಸಿದ್ದು, ಅಥಣಿ ದರ್ಶನ ವಾರಪತ್ರಿಕೆಯಲ್ಲಿ ವರದಿಗಾರರಾಗಿ ವೃತ್ತಿ ಆರಂಭಿಸಿದ್ದಾರೆ. ನಂತರ SSCN NEWS, ATN NEWS, ಕಸ್ತೂರಿ ನ್ಯೂಸ್ ೨೪, ಪ್ರಜಾ ಟಿವಿ ಸೇರಿದಂತೆ ವಿವಿಧ ಮಾಧ್ಯಮಗಳಲ್ಲಿ ಸೇವೆ ಸಲ್ಲಿಸಿ ೨೦೧೮ರಿಂದ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ನಿರಂತರವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಧೈರ್ಯ, ನಿಷ್ಠೆ ಮತ್ತು ಸಾಮಾಜಿಕ ಕಾಳಜಿಯೊಂದಿಗೆ ಪತ್ರಿಕೋದ್ಯಮದಲ್ಲಿ ಮುಂದುವರೆದಿರುವ ಷಡಕ್ಷರಿ ಕಂಪೂನವರ್ ಅವರು ಯುವ ಪತ್ರಕರ್ತರಿಗೆ ಮಾದರಿಯಾಗಿದ್ದಾರೆ.ಗ್ರಾಮೀಣ ಹಿನ್ನೆಲೆಯಲ್ಲಿ ಹುಟ್ಟಿ, ಕಠಿಣ ಪರಿಶ್ರಮದಿಂದ ಮಾಧ್ಯಮ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿಕೊಂಡಿರುವುದರಿಂದಲೇ ರಾಜ್ಯದ ಗಮನ ಸೆಳೆಯುವ ತನಿಖಾ ಪತ್ರಕರ್ತರಾಗಿ ಹೊರಹೊಮ್ಮಿದ್ದಾರೆ. ವಿದ್ಯಾರ್ಥಿ ದೆಶೆಯಲ್ಲೇ ಪತ್ರಿಕೋದ್ಯಮದತ್ತ ಆಕರ್ಷಿತರಾಗಿ ಹಂತ, ಹಂತವಾಗಿ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿ ಪ್ರತಿಯೊಂದು ಹಂತದಲ್ಲೂ ತಮ್ಮ ಪ್ರತಿಭೆ ಮತ್ತು ತೀಕ್ಷಣತೆಯನ್ನು ಸಾಬೀತುಪಡಿಸಿದ್ದಾರೆ.

ರಾಜ್ಯದ ಮಟ್ಟದಲ್ಲಿ ಗಮನ ಸೆಳೆದ ತನಿಖಾ ವರದಿಗಳು:


ವಿಶೇಷವಾಗಿ ಸ್ಟಿಂಗ್ ಆಪರೇಷನ್‌ಗಳು ಹಾಗೂ ಸಾಮಾಜಿಕ ಸಮಸ್ಯೆಗಳ ಕುರಿತ ಆಳವಾದ ವರದಿಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದ್ದಾರೆ. ಅಮೋನಿಯಂ ನೈಟ್ರೇಟ್ ಕಳ್ಳ ಮಾರಾಟ ದಂಧೆ, ನಕಲಿ ಆಧಾರ್, ಪಾನ್‌ಕಾರ್ಡ್ ಜಾಲ, ಅಕ್ರಮ ಗರ್ಭಪಾತ ದಂಧೆ, ಡ್ರಗ್ಸ್ ಮತ್ತು ಕಂಟ್ರಿ ಪಿಸ್ತೂಲ್ ಮಾರಾಟ ಸೇರಿದಂತೆ ಹಲವು ಗಂಭೀರ ಪ್ರಕರಣಗಳನ್ನು ಸ್ಟಿಂಗ್ ಆಪರೇಷನ್ ಮೂಲಕ ಬಯಲಿಗೆಳೆದಿದ್ದಾರೆ. ವರದಿಗಳ ಪರಿಣಾಮವಾಗಿ ಹಲವು ಸರ್ಕಾರಿ ಕ್ರಮಗಳು ಜಾರಿಯಾಗಿದ್ದು, ಜನಜೀವನಕ್ಕೆ ಸಹಾಯವಾಗಿದೆ. ಮಹಾರಾಷ್ಟ್ರದ ಕಾಮಾಟಿಪುರಗಳಲ್ಲಿ ಕನ್ನಡ ಯುವತಿಯರ ಸಂಕಷ್ಟವನ್ನು ಹೊರಗೆ ತಂದ ವರದಿ ಹಾಗೂ ಪ್ರಜಾ ಟಿವಿಯಲ್ಲಿ ಭೀಮಾತೀರದ ಹಂತಕರು ಕುರಿತ ೨೫ ಎಪಿಸೋಡ್ ಸರಣಿ ವಿಶೇಷ ಮೆಚ್ಚುಗೆ ಪಡೆದಿವೆ. ಕೋವಿಡ್ ಸಮಯದಲ್ಲಿ ಗಡಿ ಕಳ್ಳಾಟ ಬಯಲು, ಪ್ರವಾಹದ ಸಂದರ್ಭಗಳಲ್ಲಿ ನೆರವು ಕಾರ್ಯ, ಅಪಹರಣ ಪ್ರಕರಣದಲ್ಲಿ ಜೀವ ರಕ್ಷಣೆ ಸೇರಿದಂತೆ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಾಧನೆಗೆ ಒಲಿದ ಪ್ರಶಸ್ತಿಗಳು:

೨೦೨೨ ಮತ್ತು ೨೦೨೩ರಲ್ಲಿ ಟಿಎನ್‌ಐಟಿ ಮೀಡಿಯಾ ಅವಾರ್ಡ್, ಏಷ್ಯಾನೆಟ್ ಸುವರ್ಣ ನ್ಯೂಸ್ ಉತ್ತಮ ಜಿಲ್ಲಾ ವರದಿಗಾರ ಪ್ರಶಸ್ತಿ, ೨೦೧೯ರಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಪ್ರಶಸ್ತಿ ಹಾಗೂ ೨೦೧೮ರಲ್ಲಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪ್ರಶಸ್ತಿ ಲಭಿಸಿದೆ.