ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವುದರ ಮೂಲಕ ಮುಂದಿನ ಸಾರ್ವತ್ರಿಕ ಚುನಾವಣೆಗೆ ಮುನ್ನುಡಿ ಬರೆಯಲಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿ ಪರ ಒಳ್ಳೆಯ ವಾತಾವರಣವಿದ್ದು, ಉಪಚುನಾವಣೆ ಮೂಲಕ ರಾಜ್ಯಕ್ಕೆ ಹೊಸ ದಿಕ್ಸೂಚಿ ಸಿಗಲಿದೆ ಎಂದು ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್ ಹೇಳಿದರು.ಉಪಚುನಾವಣೆ ನಿಮಿತ್ತ ನವನಗರದ ವಾರ್ಡ್ ನಂ.33ರಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರ ಪರ ಮತಯಾಚನೆ ಮಾಡಿ ಮಾತನಾಡಿದ ಅವರು, ಬಿಜೆಪಿ ಅಭಿವೃದ್ಧಿ ಕಾರ್ಯಗಳ ಅರಿವು ಈ ಕ್ಷೇತ್ರದ ಜನರಿಗಿದೆ. ಮೂರು ವರ್ಷಗಳ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಆರೋಪ ಮಾಡುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಮುಸ್ಲಿಂ ಅತಿಯಾದ ಒಲೈಕೆಯಿಂದ ಅಶಾಂತಿ ಸೃಷ್ಟಿ, ಶಿವಾಜಿ ಮೆರವಣಿಗೆ, ಗಣೇಶ ಮೆರವಣಿಗೆಗಳ ಮೇಲೆ ಕಲ್ಲು ತೂರಾಟಗಳು ಕಾಂಗ್ರೆಸ್ ನೀತಿಗೆ ಕಾರಣವಾಗಿವೆ ಎಂದು ದೂರಿದರು.ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಮಾತನಾಡಿ, ಭ್ರಷ್ಟ ಆಡಳಿತ ಇಷ್ಟವಿಲ್ಲ ಎಂಬ ಸಂದೇಶವನ್ನು ಸರ್ಕಾರಕ್ಕೆ ಕೊಡಲು ಜನರು ಮುಂದಾಗಿದ್ದಾರೆ. ಗ್ಯಾರಂಟಿಗಳಿಗೆ ಎಸ್‌ಸಿಪಿ, ಟಿಎಸ್‌ಪಿ ಅನುದಾನ ಬಳಕೆಯಾಗಬೇಕಿತ್ತಾ? ದಲಿತರ ಮೇಲೆ ಕಾಳಜಿ ಇದ್ದಿದ್ದರೆ ಅವರ ಹಣವನ್ನು ಗ್ಯಾರಂಟಿಗಳಿಗೆ ಬಳಕೆ ಮಾಡಿದ್ದು ಯಾಕೆ? ಅಲ್ಪಸಂಖ್ಯಾತರ ಹಣವನ್ನು ಏಕೆ ಬಳಕೆ ಮಾಡಿಕೊಳ್ಳಲಿಲ್ಲ. ಅಲ್ಪಸಂಖ್ಯಾತರಿಗೆ ಹತ್ತು ಸಾವಿರ ಕೋಟಿ ಕೊಟ್ಟ ಸಿದ್ದರಾಮಯ್ಯ ಹಿಂದೂಗಳ ಕಲ್ಯಾಣಕ್ಕೆ ಎಷ್ಟು ಕೋಟಿ ಕೊಟ್ಟಿದ್ದಾರೆ ಎಂದು ಸರ್ಕಾರದ ವಿರುದ್ಧ ಪ್ರಶ್ನೆಗಳ ಸುರಿಮಳೆಗೈದರು.
ಕಳ್ಳೆತ್ತು ವಾಲ್ಮೀಕಿ ನಿಗಮ, ಬೋವಿ ನಿಗಮದ ಹಣ ನುಂಗಿ ಒಂದೂ ಅಭಿವೃದ್ಧಿ ಕೆಲಸ ಮಾಡದೇ ಸುಳ್ಳು ಹೇಳಿ ಕಾಲಹರಣ ಮಾಡಿತು. ಇದರ ಮೇಲೆಯೇ ದುಡಿಯೋ ಎತ್ತು ಯಾವುದು ಕಳ್ಳೆತ್ತು ಯಾವುದು ಎಂದು ಜನರಿಗೆ ಗೊತ್ತಾಗುತ್ತದೆ. ಕೇಂದ್ರವು ಅಕ್ಕಿ ಕೊಡದಿದ್ದರೆ ಇವರ ಹಣೆ ಬರಹ ಗೊತ್ತಾಗುತ್ತಿತ್ತು. ಮೋದಿ ಅವರು ಕೊಟ್ಟಿರುವುದನ್ನು ಕೇವಲ ಮುಟ್ಟಿ ಕೊಟ್ಟು ತಾವು ಕೊಟ್ಟಿದ್ದೇವೆ ಎಂದು ಬೀಗುತ್ತಾರೆ. ಇದು ಯಾವ ಸೀಮೆಯ ನ್ಯಾಯ? ಸಿದ್ದರಾಮಯ್ಯ ಸಾಲ ಮಾಡಿದ್ದು ಸುಳ್ಳಾ? ಸ್ವತಃ ಮುಖ್ಯಮಂತ್ರಿಗಳೇ ₹5 ಲಕ್ಷ ಕೋಟಿಗೂ ಅಧಿಕ ಸಾಲ ಮಾಡಿದ್ದಾರೆ ಎಂದರು.ಗ್ಯಾರಂಟಿ ನಾನು ಕೊಟ್ಟಿದ್ದು ಎಂದು ಹೇಳಿದ ಹಾಗೆ ಸಾಲ ನಾನೇ ಮಾಡಿದ್ದು ಎಂದು ಹೇಳಲಿ. ಬೆಲೆಗಳ ಹೆಚ್ಚಳದಿಂದ ₹20 ಬಾಂಡ್ ಪೇಪರ್ ಕೂಡ ಮಾಯ ಮಾಡಿದ್ದಾರೆ. ಜನ ಒತ್ತೆ ಇಟ್ಟ ತಮ್ಮ ಚಿನ್ನಕ್ಕೆ ಹಣ ಕಟ್ಟುವ ಸ್ಥಿತಿಗೆ ತಂದಿಟ್ಟಿದ್ದಾರೆ. ಬಾಗಲಕೋಟೆ ಹಿಂದುತ್ವ ಕೋಟೆ ಇಲ್ಲಿ ಬಿಜೆಪಿ ಗೆಲ್ಲಬೇಕು ಎಂದು ಹೇಳಿದರು.
ವೀರಣ್ಣ ಚರಂತಿಮಠ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು. ಈ ವೇಳೆ ವಿಧಾನ ಪರಿಷತ್ ಸದಸ್ಯರಾದ ಪಿ.ಎಚ್. ಪೂಜಾರ, ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಸೇರಿದಂತೆ ಸಾವಿರಾರು ಜನ ಕಾರ್ಯಕರ್ತರು ಭಾಗವಹಿಸಿದ್ದರು.