ದಾವಣಗೆರೆ ದಕ್ಷಿಣದಲ್ಲಿ ಐತಿಹಾಸಿಕ ಚುನಾವಣೆ ನಡೆದಿದ್ದು, ಬಿಜೆಪಿಯ ಎಲ್ಲ ರಾಜ್ಯ, ಜಿಲ್ಲಾ ಮುಖಂಡರು, ಸಮಸ್ತ ಕಾರ್ಯಕರ್ತರ ಒಗ್ಗಟ್ಟು, ಸಂಘಟಿತ ಪ್ರಯತ್ನದ ಫಲವಾಗಿ ಇಲ್ಲಿನ ಉಪ ಚುನಾವಣೆಯಲ್ಲಿ ಶೇ.100ಕ್ಕೆ ನೂರರಷ್ಟು ಬಿಜೆಪಿಯೇ ಜಯ ಸಾಧಿಸಲಿದೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ ಹೇಳಿದ್ದಾರೆ.

- ಬಿಜೆಪಿಯಲ್ಲಿ ಪ್ರತಿ ಕ್ಷೇತ್ರದಲ್ಲೂ ಆಕಾಂಕ್ಷಿಗಳ ಪಡೆ ಇದೆ: ಸ್ವಾಭಿಮಾನಿ ಬಳಗ ಜಿ.ಬಿ.ವಿನಯಕುಮಾರ್‌ಗೆ ಟಾಂಗ್‌ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ದಕ್ಷಿಣದಲ್ಲಿ ಐತಿಹಾಸಿಕ ಚುನಾವಣೆ ನಡೆದಿದ್ದು, ಬಿಜೆಪಿಯ ಎಲ್ಲ ರಾಜ್ಯ, ಜಿಲ್ಲಾ ಮುಖಂಡರು, ಸಮಸ್ತ ಕಾರ್ಯಕರ್ತರ ಒಗ್ಗಟ್ಟು, ಸಂಘಟಿತ ಪ್ರಯತ್ನದ ಫಲವಾಗಿ ಇಲ್ಲಿನ ಉಪ ಚುನಾವಣೆಯಲ್ಲಿ ಶೇ.100ಕ್ಕೆ ನೂರರಷ್ಟು ಬಿಜೆಪಿಯೇ ಜಯ ಸಾಧಿಸಲಿದೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ ಹೇಳಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣದಲ್ಲಿ ಇದೇ ಮೊದಲ ಸಲ ಬಿಜೆಪಿ ಜಯ ಸಾಧಿಸಲಿದ್ದು, ನಮ್ಮ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ಗೆಲುವು ಸಾಧಿಸುವುದು ಶತಃಸಿದ್ಧವಾಗಿದೆ. ಈಗಾಗಲೇ ಕಾಂಗ್ರೆಸ್ಸಿನವರ ನಡೆ, ನುಡಿ, ವರ್ತನೆಗಳೇ ಬಿಜೆಪಿ ಗೆದ್ದಿರುವುದನ್ನು ಪುಷ್ಟೀಕರಿಸುತ್ತಿವೆ ಎಂದರು.

ದಕ್ಷಿಣ ಉಪ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ರಾಜ್ಯ ಮತ್ತು ಜಿಲ್ಲಾ ನಾಯಕರು, ಉಭಯ ಪಕ್ಷಗಳ ಮುಖಂಡರು, ಪದಾಧಿಕಾರಿಗಳು, ನಮ್ಮೆಲ್ಲಾ ಕಾರ್ಯಕರ್ತರು, ಅಭಿಮಾನಿಗಳು, ಹಿತೈಷಿಗಳು ಒಟ್ಟಾಗಿ, ಒಗ್ಗಟ್ಟಿನಿಂದ ಬಿಜೆಪಿ ಗೆಲುವಿಗಾಗಿ ಮಾಡಿದ ಪರಿಶ್ರಮಕ್ಕೆ ಮೇ 4ರಂದು ಉತ್ತಮ ಪ್ರತಿಫಲ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ದಾವಣಗೆರೆ ಉತ್ತರ, ಹೊನ್ನಾಳಿ ಆಕಾಂಕ್ಷಿಯೆಂದೆಲ್ಲಾ ಹೇಳುತ್ತಿರುವ ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ.ಬಿ. ವಿನಯಕುಮಾರ ಪಕ್ಷೇತರರಾಗಿ, ಸ್ವತಂತ್ರ ಅಭ್ಯರ್ಥಿಯಾಗಿ ಇವೆರಡೇ ಕ್ಷೇತ್ರವಲ್ಲ, ಯಾವುದೇ ಕ್ಷೇತ್ರದಲ್ಲಿ ಸ್ಪರ್ಧಿಸಬಹುದು. ಇನ್ನೂ ಬಿಜೆಪಿಗೆ ವಿನಯಕುಮಾರ ಸೇರಿಸಿಲ್ಲ. ಬಿಜೆಪಿ ಬಾವುಟವನ್ನೂ ಹಿಡಿದಿಲ್ಲ. ವಿನಯಕುಮಾರ ಭ್ರಮೆಯಿಂದ ಮೊದಲು ಹೊರಬರಬೇಕು ಎಂದು ಹೇಳಿದರು.

ಬಿಜೆಪಿಯಲ್ಲಿ ನಾಯಕರಿಗೆ ಕೊರತೆ ಇಲ್ಲ. ಎಲ್ಲ ಕ್ಷೇತ್ರದಲ್ಲೂ ಏಳೆಂಟು ಜನ ಸಮರ್ಥ ಅಭ್ಯರ್ಥಿಗಳಿದ್ದಾರೆ. ನಮ್ಮ ಪಕ್ಷದವರೇ ಅಲ್ಲದವರನ್ನು ಕರೆ ತಂದು, ಟಿಕೆಟ್ ಕೊಡುವಂತಹ ಸ್ಥಿತಿಯು ಬಿಜೆಪಿಗೆ ಬಂದಿಲ್ಲ. ಬರುವುದೂ ಇಲ್ಲ. ಹಿಂದೆ ಯಾವಾಗಲೋ ಅಂತಹ ಸ್ಥಿತಿ ಇತ್ತು. ಟಿಕೆಟ್ ಕೊಡುತ್ತೇವೆಂದರೂ ಅಭ್ಯರ್ಥಿಗಳು ಇರುತ್ತಿರಲಿಲ್ಲ. ಈಗ ಅಂತಹ ಸ್ಥಿತಿ ಇಲ್ಲ. ಜಿಲ್ಲೆಯ ಪ್ರತಿ ಕ್ಷೇತ್ರದಲ್ಲೂ ಏಳೆಂಟು ಜನ ಆಕಾಂಕ್ಷಿಗಳಿದ್ದಾರೆ ಎಂದು ಅವರು ತಿಳಿಸಿದರು.

ವಿನಯಕುಮಾರ ನನ್ನ ಸ್ನೇಹಿತರಾಗಿದ್ದು, ಇನ್ನೂ ರಾಜಕೀಯ ಪ್ರಬುದ್ಧತೆ ಅಷ್ಟಾಗಿ ಇಲ್ಲವೆನಿಸುತ್ತದೆ. ಹಾಗಾಗಿ, ಮುಂಚೆ ದಾವಣಗೆರೆ ಉತ್ತರ, ಹರಿಹರ, ಹರಪನಹಳ್ಳಿ, ಹೊನ್ನಾಳಿ ಎನ್ನುತ್ತಿದ್ದರು. ಈಗ ಉತ್ತರ, ಹೊನ್ನಾಳಿ ಎನ್ನುತ್ತಿದ್ದಾರೆ. ಮತ್ತೊಮ್ಮೆ ತಾವು ಲೋಕಸಭಾ ಕ್ಷೇತ್ರದ ಆಕಾಂಕ್ಷಿಯೆನ್ನುತ್ತಾರೆ. ಇನ್ನೊಂದು ವಿಧಾನಸಭೆ ಚುನಾವಣೆಗೆ ನಿಲ್ಲುತ್ತೇನೆ ಎನ್ನುತ್ತಾರೆ. ಮೊದಲು ಯಾವ ಕ್ಷೇತ್ರ, ಯಾವ ಚುನಾವಣೆಗೆ ಸ್ಪರ್ಧಿಸಬೇಕೆಂಬುದನ್ನು ವಿನಯ್ ತಮಗೆ ತಾವೇ ಖಚಿತಪಡಿಸಿಕೊಳ್ಳಲಿ ಎಂದು ಸಲಹೆ ನೀಡಿದರು.

ಅಲ್ಲದೇ, ವಿನಯ್ ಅಷ್ಟೊಂದು ಸ್ಪೀಡ್ ಸಹ ಒಳ್ಳೆಯದಲ್ಲ. ಹೇಳಿಕೆಗಳ ಮೂಲಕ ನಾಯಕರಲ್ಲೇ ಗೊಂದಲ ಮೂಡಿಸುವುದನ್ನು ಬಿಡಲಿ. ಜಿ.ಬಿ.ವಿನಯಕುಮಾರ ಹಿಂದೆ ಯಾರಿದ್ದಾರೆಂಬುದು ನಮಗೂ ಗೊತ್ತಿದೆ. ತಮ್ಮ ಹಿಂದೆ ಯಾರಿದ್ದಾರೆ ಎಂಬುದನ್ನು ಸ್ವತಃ ವಿನಯಕುಮಾರ ಹೇಳುವಂತೆ ಕಾಲವೇ ಉತ್ತರ ಕೊಡಲಿದೆ. ಬಿಜೆಪಿ ಎಂದೆಂದಿಗೂ ಪಕ್ಷವನ್ನು ಕಟ್ಟಿ, ಬೆಳೆಸಿದವರನ್ನು ಮರೆಯುವುದಿಲ್ಲ. ಮೋಸ ಮಾಡುವುದಿಲ್ಲ. ಒಂದಲ್ಲ ಒಂದು ರೀತಿ ಅವಕಾಶ, ಸ್ಥಾನಮಾನ ನೀಡುವ ಪಕ್ಷವಾಗಿದೆ. ಅದಕ್ಕೆ ಶ್ರೀನಿವಾಸ ದಾಸಕರಿಯಪ್ಪ ಸಾಕ್ಷಿ ಎಂದು ಹೇಳಿದರು.

ಪಕ್ಷದ ಜಿಲ್ಲಾ ಉಪಾಧ್ಯಕ್ಷ ಧನಂಜಯ ಕಡ್ಲೇಬಾಳು ಮಾತನಾಡಿ, ಜಿ.ಬಿ. ವಿನಯಕುಮಾರ ತಮ್ಮ ಹಿಂದೆ ಹಿಂದೆ ರಾಷ್ಟ್ರೀಯ, ರಾಜ್ಯ ಮುಖಂಡರಿದ್ದಾರೆಂದು ಹೇಳಿರುವುದು ಖಂಡನೀಯ. ನಮ್ಮ ಜಿಲ್ಲೆಯವರ ಬಗ್ಗೆ ವಿನಯಕುಮಾರ ಮಾತನಾಡಲಿ. ರಾಜ್ಯ, ರಾಷ್ಟ್ರೀಯ ನಾಯಕರ ಬಗ್ಗೆ ಮಾತನಾಡುವುದು ಬೇಡ. ನಿಮ್ಮ ಸಾಮಾಜಿಕ ಸೇವೆಗೆ ನಮ್ಮ ಸಹಕಾರವಿದೆ. ಅಲ್ಲದೇ, ನಿಮ್ಮ, ನಮ್ಮ ಕಲ್ಯಾಣ ಗುಣಗಳು ನಾಯಕರಿಗೂ ಗೊತ್ತಿವೆ. ಮುಖಂಡರು, ಕಾರ್ಯಕರ್ತರು, ಜನರಲ್ಲಿ ಗೊಂದಲ ಮೂಡಿಸುವ ಕೆಲಸ ಮಾಡಬೇಡಿ ಎಂದು ಸಲಹೆ ನೀಡಿದರು.

ಜಿಲ್ಲಾ ವಕ್ತಾರ ಬಿ.ಎಂ‌. ಸತೀಶ ಕೊಳೇನಹಳ್ಳಿ ಮಾತನಾಡಿ, ತಾವು ಅಹಿಂದ ನಾಯಕರೆಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ದಾವಣಗೆರೆ ದಕ್ಷಿಣ ಕ್ಷೇತ್ರದ ವಿಷಯದಲ್ಲಿ ಅಲ್ಪಸಂಖ್ಯಾತ ಮುಖಂಡರನ್ನೇ ತೆಗೆದು ಹಾಕಿದರೂ ಸುಮ್ಮನೇ ಇದ್ದಾರೆ. ಅಹಿಂದ ಬರೀ ಅಧಿಕಾರಕ್ಕೆ ಮಾತ್ರ ಎಂಬುದು ಇದರಿಂದ ಗೊತ್ತಾಗುತ್ತಿದೆ. ತಮ್ಮ ಸ್ವಾರ್ಥಕ್ಕಾಗಿ ಅಲ್ಪಸಂಖ್ಯಾತ ಮುಖಂಡರ ತಲೆದಂಡ ಮಾಡುವ ಕೆಲಸ ಕಾಂಗ್ರೆಸ್ಸಿನಲ್ಲ ಶುರುವಾಗಿದೆ. ಅಲ್ಪಸಂಖ್ಯಾತ ಮುಸ್ಲಿಮರು ಕಾಂಗ್ರೆಸ್ಸಿನ ಇಂತಹ ಅವಕಾಶವಾದಿ ರಾಜಕಾರಣದ ಬಗ್ಗೆ ಜಾಗ್ರತೆ ವಹಿಸಲಿ ಎಂದರು.

ಪಕ್ಷದ ಮುಖಂಡರಾದ ದಾಮ್ಕೋಸ್ ಅಧ್ಯಕ್ಷ ಬಾತಿ ಬಿ.ಕೆ. ಶಿವಕುಮಾರ, ತಾರೇಶ ನಾಯ್ಕ, ಎನ್.ಎಚ್.ಹಾಲೇಶ ನಾಯ್ಕ, ಜಿ.ಶ್ರೀನಿವಾಸ, ನಿಟುವಳ್ಳಿ ಕೊಟ್ರೇಶ ಗೌಡ, ಇ.ವಿ.ಜಯರುದ್ರಪ್ಪ, ಗುತ್ತೂರು ಮಂಜುನಾಥ, ರಾಜು ತೋಟಪ್ಪನವರ್ ಇತರರು ಇದ್ದರು.

- - -

-16ಕೆಡಿವಿಜಿ7.ಜೆಪಿಜಿ: ದಾವಣಗೆರೆಯಲ್ಲಿ ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.