ಉಡುಪಿ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ. 50 ಮೀಸಲಾತಿ ನೀಡುವ ವಿಧೇಯಕ ಜಾರಿಗೊಳಿಸುವ ಮೊದಲು, ಈಗ ಜಾರಿಯಲ್ಲಿರುವ ಶೇ 33ನ್ನು ಸಂಪೂರ್ಣ ಜಾರಿಗೊಳಿಸಲಿ ಎಂದು ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಹೆಬ್ಬಾರ್ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳೆಯರಿಗೆ ಶೇ 33 ಮೀಸಲಾತಿಯಿಂತೆ ಲೋಕಸಭೆಯಲ್ಲಿರುವ 543 ಸದಸ್ಯ ಸ್ಥಾನಗಳಲ್ಲಿ 181 ಸ್ಥಾನಗಳನ್ನು ಮಹಿಳೆಯರಿಗೆ ನೀಡಬೇಕು, ಮೊದಲು ಬಿಜೆಪಿ ಈ ಮೀಸಲಾತಿಯನ್ನು ಜಾರಿಗೊಳಿಸಬೇಕು ಎಂದರು. ಈ ವಿಧೇಯಕ್ಕೆ ನಾರೀ ಶಕ್ತಿ ವಂದನಾ ಎಂದು ಕರೆಯುವುದನ್ನು ನಿಲ್ಲಿಸಬೇಕು, ಇದು ಬಿಜೆಪಿಯ ಪುರುಷ ಪ್ರಧಾನ ಮನಸ್ಥಿತಿಯನ್ನು ತೋರಿಸುತ್ತದೆ ಎಂದ ಅವರು, ಮಹಿಳೆಯರನ್ನು ಪೂಜಿಸುವುದು ಬೇಡ, ಅವರಿಗೆ ಸಿಗಬೇಕಾದ ಸಾಂವಿಧಾನಿಕ ಅಧಿಕಾರವನ್ನು ನಿರಾಕರಿಸಬೇಡಿ, ಪ್ರಾತಿನಿಧ್ಯ ಎನ್ನುವುದು ನೀವು ನೀಡುವ ಭಿಕ್ಷೆ ಅಥವಾ ಕೊಡುಗೆ ಅಲ್ಲ, ಅದು ನಮ್ಮ ಹಕ್ಕು ಎಂದವರು ಪ್ರತಿಪಾದಿಸಿದರು.

2008ರಲ್ಲಿ ಮತ್ತು 2010ರಲ್ಲಿ ಯು.ಪಿ.ಎ ಸರ್ಕಾರವು ಮಹಿಳಾ ಮೀಸಲಾತಿ ಮಸೂದೆ ಮಂಡನೆ ಮಾಡಿತ್ತು. ಆದರೆ ಆಗ ಅದನ್ನು ವಿರೋಧಿಸಿದ ಬಿಜೆಪಿ ಮಸೂದೆಯ ಸೋಲಿಗೆ ಕಾರಣರಾಗಿದ್ದರು. 2023ರಲ್ಲಿ ಕಾಂಗ್ರೆಸ್ ನೀಡಿದ ಬೆಂಬಲದಿಂದ ಮಹಿಳಾ ಶೇ 33 ಮೀಸಲಾತಿ ಮಸೂದೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಪಾಸಾಗಿದೆ ಎಂದ ಅವರು, ಈಗ ಕ್ಷೇತ್ರ ಪುನ‌ರ್ ವಿಂಗಡನೆಯ ಬಗ್ಗೆ ವಿಸ್ತ್ರತ ಚರ್ಚೆಗೆ ಅವಕಾಶ ನೀಡದೇ, ಅದನ್ನು ತರಾತುರಿಯಲ್ಲಿ ಜಾರಿಗೆ ತರಲು, ಮಹಿಳಾ ಮೀಸಲಾತಿ ಮಸೂದೆ ಜೊತೆಗಿಟ್ಟು ಜಾರಿಗೊಳಿಸಲೆತ್ನಿಸಿದ್ದ ಸರಿಯಲ್ಲ, ಇದಕ್ಕೆ ಕಾಂಗ್ರೆಸ್‌ನ ವಿರೋಧೆ ಎಂದರು.

ಮಹಿಳೆಯರನ್ನು ಮರಳು ಮಾಡುವ ತಂತ್ರ: ಬೇರೆ ಬೇರೆ ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿರುವ ಸಂದರ್ಭಗಳಲ್ಲಿ, ಮಹಿಳೆಯರನ್ನು ಭಾವನಾತ್ಮಕವಾಗಿ ಮರುಳು ಮಾಡಿ, ಅಧಿಕಾರ ಪಡೆಯುವುದಕ್ಕಾಗಿ ಮಹಿಳೆಯರನ್ನು ಬಳಸಿಕೊಳ್ಳುವ, ಕಾಂಗ್ರೆಸ್‌ ವಿರುದ್ಧ ಅವರನ್ನು ಎತ್ತಿ ಕಟ್ಟುವ, ಪ್ರಜಾಪ್ರಭುತ್ವ ಸಂವಿಧಾನ ವಿರೋಧಿ ಬಿ.ಜೆ.ಪಿ. ಮತ್ತು ಮೋದಿ ತಂಡಕ್ಕೆ ಲೋಕಸಭೆಯಲ್ಲಿ ಸೋಲಾಗಿದೆ ಎಂದರು.

ಕರ್ನಾಟಕ ರಾಜ್ಯ ಮಹಿಳಾ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಗೀತಾ ವಾಗ್ಲೆ. ಕಾಂಗ್ರೆಸ್ ಮಹಿಳಾ ಮುಖಂಡರಾದ ವೆರೋನಿಕಾ ಕರ್ನೆಲಿಯೋ, ಭಾನು ಭಾಸ್ಕರ್, ಅನಿತಾ ಡಿಸೋಜ, ಮೀನಾಕ್ಷಿ ಮಾಧವ ಬನ್ನಂಜೆ, ಶೋಭಾ ನಾಯಕ್‌ ಇದ್ದರು.