ಸಾರಾಂಶ
ಚಿತ್ರದುರ್ಗ: ಭದ್ರಾ ಮೇಲ್ದಂಡೆ ಕಾಮಗಾರಿ ಶೀಘ್ರ ಕಾರ್ಯಾನುಷ್ಠಾನಕ್ಕೆ ಆಗ್ರಹಿಸಿ ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಜ.23ರಂದು ನೀಡಿರುವ ಚಿತ್ರದುರ್ಗ ಬಂದ್‌ಗೆ ಭಾರತೀಯ ಜನತಾ ಪಕ್ಷದ ಜಿಲ್ಲಾ ಘಟಕ ಬೆಂಬಲ ವ್ಯಕ್ತಪಡಿಸಿದೆ.
ಭಾನುವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪಕ್ಷದ ರಾಜ್ಯ ವಕ್ತಾರ ಹಾಗೂ ವಿಪ ಸದಸ್ಯ ಕೆ.ಎಸ್.ನವೀನ್, ಬಂದ್ ಅಂಗವಾಗಿ ನಡೆಯುವ ಪ್ರತಿಭಟನಾ ಸಭೆ ಹಾಗೂ ಮೆರವಣಿಗೆಯಲ್ಲಿ ಪಕ್ಷದ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆಗೆ 2700 ಕೋಟಿ ರು. ನೀಡುವುದಾಗಿ ಹೇಳಿದ್ದರು. ಕೊಟ್ಟ ಮಾತನ್ನು ಹುಸಿಗೊಳಿಸಿದ್ದು, ಕಾಮಗಾರಿ ಕುಂಠಿತಗೊಳ್ಳಲು ಕಾರಣವಾಗಿದ್ದಾರೆ. ತುಂಗಾದಿಂದ ಭದ್ರಾದವರೆಗಿನ ಮೊದಲ ಹಂತದ ಕಾಮಗಾರಿ ಪೂರ್ಣವಾಗಿ ಸ್ಥಗಿತಗೊಂಡಿದೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ 2010ರಲ್ಲಿ ಯೋಜನೆಗೆ ಮಂಜೂರಾತಿ ನೀಡಿ ಅನುದಾನ ಬಿಡುಗಡೆ ಮಾಡಿದ್ದರು. 2013ರಿಂದ 2018ರವರೆಗಿನ ಕಾಂಗ್ರೆಸ್ ಆಡಳಿತದಲ್ಲಿ ಭದ್ರಾ ಕಾಮಗಾರಿ ನೆನೆಗುದಿಗೆ ಬಿದ್ದಿತು. ನಿರೀಕ್ಷಿತ ಪ್ರಮಾಣದಲ್ಲಿ ಅನುದಾನ ವ್ಯಯ ಮಾಡಲಿಲ್ಲವೆಂದು ಆರೋಪಿಸಿದರು.
ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾಮಗಾರಿಗೆ ಚುರುಕಿನ ವೇಗ ನೀಡಲಾಗಿತ್ತು. ಅಜ್ಜಂಪುರ ಬಳಿ ಸ್ಥಗಿತಗೊಂಡಿದ್ದ ರೈಲ್ವೆ ಅಂಡರ್ ಪಾಸ್ ಕಾಮಗಾರಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಖುದ್ದು ಆಸಕ್ತಿವಹಿಸಿ ಹಗಲು ರಾತ್ರಿ ಕೆಲಸ ಮಾಡಿಸಿ ಪೂರ್ಣಗೊಳಿಸಿದ್ದರು. ಇದಕ್ಕಾಗಿ ಪ್ರತ್ಯೇಕ ರೈಲು ಹಳಿ ಅಳವಡಿಸಲಾಗಿತ್ತು. ಇದರಿಂದಾಗಿ ಭದ್ರೆ ನೀರು ಲಿಫ್ಟ್ ಮಾಡಿದ್ದರಿಂದ ವಿವಿ ಸಾಗರ ಜಲಾಶಯ ಭರ್ತಿಯಾಗಿತ್ತು. 80 ವರ್ಷಗಳ ನಂತರ ಕೋಡಿ ಬೀಳಲು ಕಾರಣವಾಗಿತ್ತೆಂದು ನವೀನ್ ಹೇಳಿದರು.2023ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಭದ್ರಾ ಕಾಮಗಾರಿ ಪೂರ್ಣಗೊಳ್ಳುತ್ತದೆ ಎಂದು ಜನತೆ ನಂಬಿದ್ದರು. ಅಧಿಕಾರಕ್ಕೆ ಬರುವ ಮುನ್ನ ಹೇಗಿತ್ತೋ ಈಗ ಅದೇ ಪರಿಸ್ಥಿತಿ ಇದೆ. ಅನುದಾನ ಬಿಡುಗಡೆ ಮಾಡಲಾಗಿಲ್ಲ. ಬಜೆಟ್‌ನಲ್ಲಿ ಮೀಸಲಿಟ್ಟಿದ್ದ 2300 ಕೋಟಿ ರು. ಅನುದಾನದ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಕಾಮಗಾರಿ ಪೂರ್ಣಗೊಳಿಸವ ಆಸಕ್ತಿ ಯಾರಿಗೂ ಇಲ್ಲವೆಂದರು.
ಕೇಂದ್ರ ಸರ್ಕಾರ ಕಳೆದ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆಗೆ 5300 ಕೋಟಿ ರು. ಅನುದಾನ ಒದಗಿಸುವ ಘೋಷಣೆ ಮಾಡಿತ್ತು. ಬಜೆಟ್ ಘೋಷಣೆ ಇಂದಲ್ಲಾ ನಾಳೆ ಬರುತ್ತದೆ. ಪ್ರಧಾನ ಮಂತ್ರಿ ಕೃಷಿ ಸಂಚಾಯಿನಿ ಯೋಜನೆಯಡಿ ಅನುದಾನ ಬಿಡುಗಡೆ ಮಾಡುತ್ತದೆ. ಕಾಲುವೆ ನಿರ್ಮಾಣಕ್ಕೆ ಈ ಅನುದಾನ ಬಳಕೆ ಮಾಡಿಕೊಳ್ಳಲು ಬರುವುದಿಲ್ಲ. ರೈತರ ಜಮೀನುಗಳಿಗೆ ನೀರು ಒದಗಿಸಲು ಹಣ ನೆರವಾಗುತ್ತದೆ. ಡ್ರಿಪ್ ಸೇರಿ ಇತರೆ ಕೆಲಸಗಳಿಗೆ ಈ ಅನುದಾನ ಮೀಸಲು. ರಾಜ್ಯ ಸರ್ಕಾರ ಮೊದಲು ಕಾಲುವೆ ನಿರ್ಮಾಣದ ಕಾಮಗಾರಿ ಪೂರ್ಣಗೊಳಿಸಲಿ. ಕೇಂದ್ರ ಸರ್ಕಾರದ ಅನುದಾನದ ಬಗ್ಗೆ ಅನುಮಾನ ಇಟ್ಟುಕೊಳ್ಳುವುದು ಬೇಡ. ಕೇಂದ್ರದ ನೆರವು ವಿಚಾರದಲ್ಲಿ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಜಿಲ್ಲೆಯ ಜನರ ದಿಕ್ಕು ತಪ್ಪಿಸುವುದು ಬೇಡವೆಂದರು.ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಮುರುಳಿ, ಯುವ ಮುಖಂಡ ಜಿ.ಎಸ್.ಅನಿತ್ ಕುಮಾರ್, ದಗ್ಗೆ ಶಿವಪ್ರಕಾಶ್, ನಾಗರಾಜ ಬೇದ್ರೆ ಸುದ್ದಿ ಗೋಷ್ಠಿಯಲ್ಲಿ ಇದ್ದರು.