ಬ್ಯಾನರ್ ಗಲಾಟೆ ಪ್ರಕರಣ ಕುರಿತು ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಲಾಗಿದ್ದು, ವಿನಾಕಾರಣ ಗಲಭೆ ಸೃಷ್ಟಿಸಿದ್ದನ್ನು ಖಂಡಿಸಿ ಬಳ್ಳಾರಿಯಲ್ಲಿ ಜ.17ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಜನಾರ್ದನ ರೆಡ್ಡಿ ತಿಳಿಸಿದ್ದಾರೆ.
ಬಳ್ಳಾರಿ : ಬ್ಯಾನರ್ ಗಲಾಟೆ ಪ್ರಕರಣ ಕುರಿತು ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಲಾಗಿದ್ದು, ವಿನಾಕಾರಣ ಗಲಭೆ ಸೃಷ್ಟಿಸಿದ್ದನ್ನು ಖಂಡಿಸಿ ಬಳ್ಳಾರಿಯಲ್ಲಿ ಜ.17ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಜನಾರ್ದನ ರೆಡ್ಡಿ ತಿಳಿಸಿದ್ದಾರೆ.
ನಗರದಲ್ಲಿ ನಡೆದ ಬ್ಯಾನರ್ ಗಲಾಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ ರೆಡ್ಡಿ ಹೇಗೆ ಮೃತಪಟ್ಟರು ಎಂಬ ಕುರಿತು ಜನಾರ್ದನ ರೆಡ್ಡಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದು, ಜತೆಗೆ ವಿಡಿಯೋ ತುಣುಕು ಪ್ರದರ್ಶಿಸುವ ಮೂಲಕ ಶಾಸಕ ಭರತ್ ರೆಡ್ಡಿಯ ಖಾಸಗಿ ಗನ್‌ಮ್ಯಾನ್ ಶೂಟ್ ಮಾಡುತ್ತಿರುವ ದೃಶ್ಯದ ಕುರಿತು ವಿವರಿಸಿದರು.
ಓಂಕಾರ ಎಂಬ ಯುವಕ ಮೇಲಿನಿಂದ ವಿಡಿಯೋ ಮಾಡಿದ್ದಾನೆ. ಒಟ್ಟು 4 ಜನ ವೀಡಿಯೋಗ್ರಾಫರ್‌ಗಳಿಂದ ಬ್ಯಾನರ್ ಗಲಾಟೆಯ ದೃಶ್ಯಾವಳಿ ಸೆರೆ ಹಿಡಿಯಲಾಗಿದೆ. ಕ್ಯಾಮೆರಾಮನ್ ಕಾಣುತ್ತಿದ್ದಂತೆಯೇ ಆತನ ಮೇಲೂ ಶೂಟ್ ಮಾಡಲು ಮುಂದಾದರು. ಕ್ಯಾಮೆರಾಮನ್‌ನನ್ನೇ ತೋರಿಸಿ ರೆಡ್ಡಿ ಮನೆಯ ಮೇಲಿಂದ ಗನ್‌ಮ್ಯಾನ್ ಒಬ್ಬರು ಶೂಟ್ ಮಾಡುತ್ತಿದ್ದಾರೆ ಎಂದು ಹಸಿ ಸುಳ್ಳನ್ನು ಪ್ರಚಾರ ಮಾಡುತ್ತಿದ್ದಾರೆ. ನನ್ನ ಮನೆಯ ಮೇಲೆ ರಾಜಶೇಖರ ರೆಡ್ಡಿ ಎಂಬ ಯುವಕ ಬಾಟಲ್ ಎಸೆಯುತ್ತಿದ್ದ. ಆಗ ಪೊಲೀಸರು ಆತನನ್ನು ಹೊಡೆಯಲು ಹೋಗುವಾಗ ಅದೇ ವೇಳೆ ಶೂಟ್ ನಡೆದಿದೆ. ಬೆನ್ನಿಗೆ ಗುಂಡು ಬೀಳುತ್ತಿದ್ದಂತೆಯೇ ಯುವಕ ಮೃತಪಟ್ಟಿದ್ದಾನೆ. ಗಲಾಟೆಯಲ್ಲಿ ಮಿಸ್‌ಫೈರ್ ಆಗಿಲ್ಲ. ಹತ್ಯೆ ಮಾಡಲೆಂದೇ ಮಾಡಿಕೊಂಡ ಪೂರ್ವಯೋಜಿತ ಸಂಚು ಎಂದು ತಿಳಿಸಿದರು.
ಚಾನಾಳ್ ಶೇಖರ್ ಹತ್ಯೆಗೆ ಸಂಚು:
ಗಲಾಟೆಯಲ್ಲಿ ಚಾನಾಳ್ ಶೇಖರ್ ಎಂಬ ಯುವಕನನ್ನು ಬಲಿ ಕೊಡಲು ಶಾಸಕ ಭರತ್ ರೆಡ್ಡಿ ಪ್ಲಾನ್ ಮಾಡಿದ್ದರು. ಲಿಂಗಾಯತ ಹಾಗೂ ರೆಡ್ಡಿ ಸಮುದಾಯ ನಮ್ಮ ವಿರುದ್ಧ ತಿರುಗಿ ಬೀಳಬೇಕು ಎಂಬ ಉದ್ದೇಶದಿಂದ ಹತ್ಯೆಗೆ ಪ್ಲಾನ್ ಮಾಡಿದ್ದಾರೆ. ಇಡೀ ಘಟನೆಗೆ ಭರತ್ ರೆಡ್ಡಿ ಹಾಗೂ ಸತೀಶ್ ರೆಡ್ಡಿ ಕಾರಣರಾಗಿದ್ದಾರೆ. ಎಎಸ್ಪಿ ರವಿಕುಮಾರ್, ಡಿವೈಎಸ್ಪಿ ನಂದಾ ಕುಮಾರ್ ಈ ಸಂಚಿನಲ್ಲಿ ಭಾಗಿಯಾಗಿದ್ದಾರೆ. ಮೂವರು ಪ್ಲಾನ್ ಮಾಡಿಕೊಂಡೇ ರಾತ್ರಿ 9 ಗಂಟೆಗೆ ನನ್ನ ಮನೆಯ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಗಲಭೆಯ ಹಿನ್ನೆಲೆಯಲ್ಲಿ ಸಾಕ್ಷ್ಯಧಾರಗಳು ಇರುವುದರಿಂದ ಕೂಡಲೇ ಶಾಸಕ ಭರತ್ ರೆಡ್ಡಿಯನ್ನು ಬಂಧಿಸಬೇಕು ಎಂದು ಜನಾರ್ದನ ರೆಡ್ಡಿ ಒತ್ತಾಯಿಸಿದರು.ಡಿಸಿಎಂ ಡಿ.ಕೆ.ಶಿವಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ, ಜನಾರ್ದನ ರೆಡ್ಡಿಗೆ ಗುಂಡು ಎಲ್ಲಿ ಬಿತ್ತು? ತಲೆಗೆ ಬಿತ್ತಾ, ಮೈಗೆ ಬಿತ್ತಾ ಎಂದು ವ್ಯಂಗ್ಯವಾಡಿದ್ದಾರೆ. ಇದು ದುರಂಹಕಾರದ ಮಾತು. ಶಿವಕುಮಾರ್‌ಗೆ ದುರ್ಯೋಧನನ ದುರಹಂಕಾರ ಬಂದಿದೆ. ಇಂತಹ ವ್ಯಕ್ತಿ ಸಿಎಂ ಆದರೆ ರಾಜ್ಯದ ಗತಿ ಏನು? ಎಂದು ಪ್ರಶ್ನಿಸಿದರು.
ಸತೀಶ್ ರೆಡ್ಡಿಯನ್ನು ಈವರೆಗೆ ಬಂಧಿಸದೆ, ಬೆಂಗಳೂರಿನಲ್ಲಿ ರಾಜಾತಿಥ್ಯ
ಮಾಜಿ ಸಚಿವ ಶ್ರೀರಾಮುಲು ಮಾತನಾಡಿ, ಬ್ಯಾನರ್ ಗಲಭೆಯ ಪ್ರಮುಖ ಆರೋಪಿ ಸತೀಶ್ ರೆಡ್ಡಿಯನ್ನು ಈವರೆಗೆ ಬಂಧಿಸದೆ, ಬೆಂಗಳೂರಿನಲ್ಲಿ ರಾಜಾತಿಥ್ಯ ನೀಡುತ್ತಿದ್ದಾರೆ. ಶಾಸಕರನ್ನು ಬಂಧಿಸಿದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ ಎಂಬ ಕಾರಣಕ್ಕಾಗಿ ಬಂಧಿಸಲಾಗುತ್ತಿಲ್ಲ. ಶಾಸಕ ಸೇರಿದಂತೆ ಪ್ರಕರಣದಲ್ಲಿರುವ ಹಿಂಬಾಲಕರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಶಾಸಕ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು, ನಾವು ದಾಳಿ ಮಾಡಿಲ್ಲ. ಮೊದಲು ಅವರೇ ದಾಳಿ ನಡೆಸಿದ್ದಾರೆ. ಶ್ರೀರಾಮುಲು, ರೆಡ್ಡಿ ಮೇಲೆ ದಾಳಿಯಾಗಿದೆ ಎಂದು ತಿಳಿಯುತ್ತಿದ್ದಂತೆಯೇ ಮಹಿಳೆಯರು ಖಾರದ ಪುಡಿ ತಂದಿದ್ದಾರೆ. ನಾವಾಗಿಯೇ ಭರತ್ ರೆಡ್ಡಿಯ ಮನೆಯ ಮುಂದೆ ಹೋಗಿ ಜಗಳ ಮಾಡಿಲ್ಲ. ಅವರಾಗಿಯೇ ನಮ್ಮ ಮನೆಯ ಮುಂದೆ ಬಂದು ಗಲಾಟೆ ಎಬ್ಬಿಸಿದ್ದಾರೆ. ಮನೆಯ ಮುಂದೆ ಬಂದು ಗುಂಡು ಹಾರಿಸಿದರೂ ಬಾಟಲ್, ಕಲ್ಲು ತೂರಿದರೂ ಸುಮ್ಮನಿರಬೇಕಾ? ಎಂದು ಪ್ರಶ್ನಿಸಿದರು.

