ದೊಡ್ಡಬಳ್ಳಾಪುರ: ಪುಸ್ತಕಗಳು ನಮ್ಮ ಬದುಕಿನ ದಾರಿದೀಪಗಳಾಗಿವೆ. ಮಹನೀಯರ ಜೀವನ ಚರಿತ್ರೆ, ಸಾಹಿತ್ಯ, ವಿಜ್ಞಾನ ಮತ್ತು ಇತಿಹಾಸದ ಪುಸ್ತಕಗಳು ನಮಗೆ ಜೀವನದಲ್ಲಿ ಸರಿಯಾದ ದಿಕ್ಕನ್ನು ತೋರಿಸುತ್ತವೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಮನೆಗೊಂದು ಗ್ರಂಥಾಲಯ ಜಾಗೃತ ಸಮಿತಿಯ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಂಚಾಲಕ ಗಂಗರಾಜ ಶಿರವಾರ ಹೇಳಿದರು.
ಅವರು ನಗರದ ವಹ್ನಿಗರಪೇಟೆಯ ಕೌಸಲ್ಯ ಹಾಗೂ ಸಿ.ನಟರಾಜ್ ನಾಗದಳ ಅವರ ನಿವಾಸದಲ್ಲಿ ಆಯೋಜಿಸಲಾಗಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕನ್ನಡ ಪುಸ್ತಕ ಪ್ರಾಧಿಕಾರದ ಮನೆಗೊಂದು ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮದಲ್ಲಿ ಮಾತನಾಡಿದರು.ಮಕ್ಕಳಲ್ಲಿ ಓದುವ ಸಂಸ್ಕೃತಿ ಬೆಳೆಸಿದರೆ ಜ್ಞಾನವಂತ ಮತ್ತು ಸಂಸ್ಕಾರವಂತ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ.ಇಂದಿನ ಮಕ್ಕಳಲ್ಲಿ ಪುಸ್ತಕ ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಮೊಬೈಲ್, ಟಿವಿ ಮತ್ತು ಸಾಮಾಜಿಕ ಜಾಲತಾಣಗಳ ಗೀಳಿಗೆ ಒಳಗಾಗಿ ಮಕ್ಕಳು ಪುಸ್ತಕಗಳಿಂದ ದೂರವಾಗುತ್ತಿದ್ದಾರೆ. ಆದರೆ ಪುಸ್ತಕ ಓದುವ ಹವ್ಯಾಸವು ಮಕ್ಕಳ ಜ್ಞಾನವನ್ನು ಹೆಚ್ಚಿಸುವುದಲ್ಲದೆ, ಅವರ ಚಿಂತನೆ, ಕಲ್ಪನೆ ಮತ್ತು ವ್ಯಕ್ತಿತ್ವವನ್ನು ರೂಪಿಸುತ್ತದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಗರಸಭಾ ಸದಸ್ಯ ಲಕ್ಷ್ಮೀಪತಿ, ನಮ್ಮ ಅಭ್ಯಾಸಗಳೇ ನಮ್ಮ ಜೀವನವನ್ನು ರೂಪಿಸುತ್ತವೆ. ಪುಸ್ತಕ ಓದುವ ಹವ್ಯಾಸವು ವ್ಯಕ್ತಿಯನ್ನು ಉತ್ತಮ ನಾಗರಿಕನನ್ನಾಗಿ ಬೆಳೆಸುತ್ತದೆ. ಈ ನಿಟ್ಟಿನಲ್ಲಿ ಪೋಷಕರು ಮಕ್ಕಳಲ್ಲಿ ಪುಸ್ತಕ ಪ್ರೀತಿ ಬೆಳೆಸಿಕೊಳ್ಳಲು ಹೆಚ್ಚು ಪ್ರೋತ್ಸಾಹ ನೀಡಬೇಕಾಗಿದೆ.ಓದು ಎನ್ನುವುದು ಕೇವಲ ಅಕ್ಷರ ಜ್ಞಾನವಲ್ಲ, ಅದು ದೊಡ್ಡ ಅರಿವು ಮತ್ತು ವ್ಯಕ್ತಿತ್ವ ನಿರ್ಮಾಣದ ಸಾಧನವಾಗಿದೆ ಎಂದರು.ಕನ್ನಡ ಜಾಗೃತ ಪರಿಷತ್ ಮಾಜಿ ಪ್ರಧಾನ ಕಾರ್ಯದರ್ಶಿ ಎಂ.ವಿ.ವೆಂಕಟೇಶ ಮೂರ್ತಿ ಮಾತನಾಡಿ, ಇಂದಿನ ದಿನಗಳಲ್ಲಿ ಮನುಷ್ಯನ ಕೈಯಲ್ಲಿ ಮೊಬೈಲ್ ಇದ್ದರೆ ಅದೇ ಪ್ರಪಂಚ ಎಂಬಂತಾಗಿದೆ. ಆದರೆ ಹಿಂದೆ ಓದುವ ಆಸಕ್ತಿ ಅಪಾರವಾಗಿದ್ದರೂ ಎಲ್ಲರಿಗೂ ಪುಸ್ತಕಗಳನ್ನು ಖರೀದಿಸುವಷ್ಟು ಆರ್ಥಿಕ ಸಾಮರ್ಥ್ಯ ಇರಲಿಲ್ಲ. ಹೀಗಾಗಿ ಹಲವರು ಸ್ನೇಹಿತರು ಹಾಗೂ ಪರಿಚಿತರ ಬಳಿಯಿಂದ ಪುಸ್ತಕಗಳನ್ನು ಪಡೆದು ರಾತ್ರಿಯಿಡೀ ಓದಿ ಬೆಳಿಗ್ಗೆ ಹಿಂದಿರುಗಿಸುತ್ತಿದ್ದರು. ಆ ಓದಿನ ಅಭ್ಯಾಸವೇ ಅವರಲ್ಲಿ ಧೈರ್ಯ, ಸ್ಥೈರ್ಯ ಮತ್ತು ಜೀವನದ ಸವಾಲುಗಳನ್ನು ಎದುರಿಸುವ ಶಕ್ತಿಯನ್ನು ಬೆಳೆಸಿತು. ಪುಸ್ತಕ ಓದಿದ್ದರಿಂದಲೇ ಅನೇಕರು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಯಿತು ಎಂದು ಹೇಳಿದರು.
ಸೈಕ್ಲಿಂಗ್ ಕ್ರೀಡಾಪಟು ಆರ್.ಪಿ.ರಘೋತ್ತಮ್ ಮಾತನಾಡಿ, ಇಂದಿನ ತಂತ್ರಜ್ಞಾನ ಯುಗದಲ್ಲಿ ಮಕ್ಕಳ ಉಜ್ವಲ ಭವಿಷ್ಯ ರೂಪಿಸಲು ಪ್ರತಿ ಮನೆಯಲ್ಲಿ ಸಣ್ಣದಾದರೂ ಗ್ರಂಥಾಲಯ ಅವಶ್ಯಕವಾಗಿದೆ. ಪುಸ್ತಕ ಓದುವ ಅಭ್ಯಾಸ ಮಕ್ಕಳಲ್ಲಿ ಜ್ಞಾನ, ಚಿಂತನೆ ಹಾಗೂ ಸಂಸ್ಕಾರವನ್ನು ಬೆಳೆಸುತ್ತದೆ. ಓದಿನ ಮೂಲಕ ಜಗತ್ತಿನ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಾಮರ್ಥ್ಯ ವ್ಯಕ್ತಿಯಲ್ಲಿ ಬೆಳೆಯುತ್ತದೆ ಎಂದು ತಿಳಿಸಿದರು.
ಗ್ರಂಥಾಲಯ ಜಾಗೃತ ಸಮಿತಿ ಸದಸ್ಯರಾದ ಪ್ರಮೀಳಾ ಮಹಾದೇವ್, ರಬ್ಬನಹಳ್ಳಿ ಕೆಂಪಣ್ಣ, ನೆಲಮಂಗಲದ ಗೌಹರ್ ಜಾನ್, ಜಿಲ್ಲಾ ಕಸಾಪ ಮಾಜಿ ಕೋಶಾಧ್ಯಕ್ಷ ನಂ.ಮಹಾದೇವ್, ನಾಗದಳದ ನುನ್ನ ನಾಗರಾಜು, ಯುವ ಸಂಚಲನದ ಚಿದಾನಂದ್, ಗಿರೀಶ್ ಭಾಗವಹಿಸಿದ್ದರು.
25ಕೆಡಿಬಿಪಿ1-ದೊಡ್ಡಬಳ್ಳಾಪುರದಲ್ಲಿ ಮನೆಗೊಂದು ಗ್ರಂಥಾಲಯ ಅನುಷ್ಠಾನ ಜಾಗೃತಿ ಕಾರ್ಯಕ್ರಮ ನಡೆಯಿತು.