ಕನ್ನಡಪ್ರಭ ವಾರ್ತೆ, ತುಮಕೂರು
ನಾವು ಕೃತಕ ಬುದ್ಧಿಮತ್ತೆ ಮತ್ತು ಯಂತ್ರಾನುವಾದದ ಕಾಲಘಟ್ಟದಲ್ಲಿದ್ದೇವೆ. ತಂತ್ರಜ್ಞಾನವನ್ನು ಬಳಸಿ ಅನುವಾದ ಮಾಡಿದರೂ ಅದನ್ನು ಪರಿಷ್ಕರಿಸುವುದು ಅತ್ಯಗತ್ಯ. ಅನುವಾದಕ್ಕೆ ತಂತ್ರಜ್ಞಾನ ಪೂರಕವೇ ಹೊರತು ಪರ್ಯಾಯವಲ್ಲ ಎಂದು ಹಿರಿಯ ವಿದ್ವಾಂಸ ಡಾ. ಬಿ. ಜನಾರ್ಧನ ಭಟ್ ಅಭಿಪ್ರಾಯಪಟ್ಟರು.ರಾಷ್ಟ್ರೀಯ ಅನುವಾದ ಮಿಷನ್, ಭಾರತೀಯ ಭಾಷೆಗಳ ಸಂಸ್ಥಾನ ಹಾಗೂ ತುಮಕೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಜಂಟಿಯಾಗಿ ಹಮ್ಮಿಕೊಂಡಿದ್ದ ಮೂರು ದಿನಗಳ ಅನುವಾದ ಕೌಶಲ್ಯಾಭಿವೃದ್ಧಿ ಕಾರ್ಯಾಗಾರವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಮಾನವ ಅನುವಾದಕರಿಗೆ ಬೇಡಿಕೆ ಅಥವಾ ಕೆಲಸ ಇಲ್ಲದೇ ಹೋಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆಯಾದರೂ, ಅಂಕಿ-ಅಂಶಗಳ ಪ್ರಕಾರ ಅನುವಾದಕರಿಗೆ ಉದ್ಯೋಗಾವಕಾಶಗಳು ಹೆಚ್ಚಾಗಿವೆ. ಅನುವಾದ ಕೇವಲ ಭಾಷಾ ಪಂಡಿತರಿಗೆ ಮಾತ್ರ ಸೀಮಿತವಾದುದಲ್ಲ. ಪ್ರಸ್ತುತ ದಿನಗಳಲ್ಲಿ ಎಲ್ಲ ವಲಯಗಳಲ್ಲೂ ಅನುವಾದದ ಅಗತ್ಯವಿರುವುದರಿಂದ, ಆಯಾ ಕ್ಷೇತ್ರಗಳ ಪರಿಣಿತರು ಅನುವಾದ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವುದು ಮುಖ್ಯವಾಗಿದೆ. ಆಕರ ಪಠ್ಯ ಮತ್ತು ಸ್ವೀಕಾರ ಪಠ್ಯಗಳ ಸೂಕ್ತ ಬಳಕೆಯನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡುವುದೇ ಈ ಕಾರ್ಯಾಗಾರದ ಪ್ರಮುಖ ಉದ್ದೇಶ ಎಂದರು.ಅನುವಾದ ಮಾಡುವಾಗ ಪಾರಿಭಾಷಿಕ ಮತ್ತು ಸ್ಥಳೀಯ ಭಾಷಾ ಸೊಗಡನ್ನು ಗಮನದಲ್ಲಿಟ್ಟುಕೊಳ್ಳಬೇಕು ಹಾಗೂ ಕ್ಲಿಷ್ಟ ಪದಗಳಿಗೆ ಸೂಕ್ತ ವಿವರಣೆ ನೀಡಬೇಕಾಗುತ್ತದೆ. ನಮ್ಮ ಭಾಷೆಯಿಂದ ಮತ್ತೊಂದು ಭಾಷೆಗೆ ಇದ್ದದ್ದನ್ನು ಇದ್ದ ಹಾಗೆಯೇ ತರ್ಜುಮೆ ಮಾಡುವುದು ಕಷ್ಟಸಾಧ್ಯ, ಆದರೆ ಅನ್ಯಭಾಷೆಯಿಂದ ನಮ್ಮ ಭಾಷೆಗೆ ಅದೇ ರೂಪದಲ್ಲಿ ತರುವುದು ಸುಲಭವಾಗುತ್ತದೆ ಎಂದರು.
ತುಮಕೂರು ವಿವಿ ಕಲಾ ನಿಕಾಯದ ಡೀನ್ ಪ್ರೊ. ಕೆ. ಜಿ. ಪರಶುರಾಮ ಮಾತನಾಡಿ, ಅನುವಾದ ಎಂದರೆ ಅದರಲ್ಲಿನ ಭಾವನೆಗಳನ್ನು ಸರಿಯಾಗಿ ಅರ್ಥೈಸಿಕೊಂಡು ಅದಕ್ಕೆ ಹೊಸ ರೂಪವನ್ನು ನೀಡುವುದಾಗಿದೆ. ತಂತ್ರಜ್ಞಾನದ ಮೂಲಕ ನಾವು ಪಾರಿಭಾಷಿಕ ಪದಗಳನ್ನು ಬಳಸಿಕೊಳ್ಳಬಹುದೇ ಹೊರತು, ಕೇವಲ ತಂತ್ರಜ್ಞಾನವೇ ಪಾರಿಭಾಷಿಕ ಪದಗಳನ್ನು ಸೃಷ್ಟಿಸಲು ಸಾಧ್ಯವಿಲ್ಲ ಎಂದರು.
ಅಧ್ಯಕ್ಷತೆ ವಹಿಸಿದ್ದ ಪರೀಕ್ಷಾಂಗ ಕುಲಸಚಿವ ಪ್ರೊ. ಮೋಹನ ಎಚ್. ಎಸ್. ಮಾತನಾಡಿ, ಭಾಷೆ ಎಂಬುದು ಕೇವಲ ಸಂವಹನದ ವಾಹಕವಲ್ಲ, ಅದೊಂದು ಸಾಂಸ್ಕೃತಿಕ ಜಗತ್ತು. ಅದನ್ನು ಓದಿ ಆಳವಾಗಿ ಅರ್ಥೈಸಿಕೊಳ್ಳಲು ಅನುವಾದದ ನೆರವು ಬೇಕೇ ಬೇಕು. ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಹೆಚ್ಚಾಗಬೇಕು ಮತ್ತು ಸಾಹಿತ್ಯದ ಬಗೆಗಿನ ಆಲೋಚನಾ ಕ್ರಮಗಳು ಬದಲಾಗಬೇಕು ಎಂದರು.
ರಾಷ್ಟ್ರೀಯ ಅನುವಾದ ಮಿಷನ್ ಅಧಿಕಾರಿ ಡಾ. ತಾರೀಖ್ ಖಾನ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಂಯೋಜಕ ಡಾ. ಸಿಬಂತಿ ಪದ್ಮನಾಭ ಕೆ. ವಿ. ಸ್ವಾಗತಿಸಿದರು. ಎನ್‌ಟಿಎಂ ಸಂಪನ್ಮೂಲ ವ್ಯಕ್ತಿ ಡಾ. ಛಾಯಾದೇವಿ ವಂದಿಸಿದರು. ಹಿರಿಯ ವಿದ್ವಾಂಸರಾದ ಡಾ. ಎಸ್. ಪಿ. ಪದ್ಮಪ್ರಸಾದ್, ಡಾ. ಮಂಗಳಾಗೌರಿ ಎಂ, ಹಾಗೂ ಪ್ರಭಾಸ್ ಪಂಡಿತ್ ಟಿ.ಎಸ್. ಮೊದಲನೇ ದಿನದ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ವಿವಿಧ ಸಂಪನ್ಮೂಲ ವ್ಯಕ್ತಿಗಳು ಮುಂದಿನ ಎರಡು ದಿನ ಗೋಷ್ಠಿಗಳನ್ನು ನಡೆಸಿಕೊಡಲಿದ್ದಾರೆ.