ಕನ್ನಡಪ್ರಭ ವಾರ್ತೆ ಹಾಸನ
ಕಾರ್ಪೊರೇಟ್ ಹಿತಾಸಕ್ತಿಗಳಿಗಾಗಿ ಕೆಲಸ ಮಾಡುವ ಇಂದಿನ ಮಾಧ್ಯಮ ರಂಗದ ಮಧ್ಯೆ, ಯಾವುದೇ ವಾಣಿಜ್ಯ ಜಾಹೀರಾತುಗಳಿಲ್ಲದೆ, ಕೇವಲ ಓದುಗರ ಪ್ರೀತಿ, ಬೆಂಬಲವನ್ನೇ ಬಂಡವಾಳವಾಗಿಸಿಕೊಂಡು ಕಾಲು ಶತಮಾನ ಪೂರೈಸಿರುವ ''''ಟೀಚರ್'''' ಪತ್ರಿಕೆ ಕೇವಲ ಪ್ರಕಟಣೆಯಲ್ಲ; ಅದು ಸಮಾಜದ ಪ್ರಜಾಸತ್ತಾತ್ಮಕ ಆಶಯಗಳನ್ನು ಜಾಗೃತಗೊಳಿಸುವ ಜೈವಿಕ ಸ್ಮೃತಿ ಎಂದು ''''ಟೀಚರ್'''' ಮಾಸಪತ್ರಿಕೆಯ ಸಂಪಾದಕ ಉದಯ್ ಗಾಂವ್ಕರ್ ಅವರು ಮಾರ್ಮಿಕವಾಗಿ ನುಡಿದರು.ಭಾರತ ಜ್ಞಾನ ವಿಜ್ಞಾನ ಸಮಿತಿ ಹಾಸನ ಜಿಲ್ಲಾ ಸಮಿತಿಯ ವತಿಯಿಂದ ನಗರದ ಐ.ಎ.ಪಿ ಭವನದಲ್ಲಿ ಆಯೋಜಿಸಲಾಗಿದ್ದ ''''ಟೀಚರ್'''' ಪತ್ರಿಕೆಯ 25ನೇ ವರ್ಷದ ಬೆಳ್ಳಿಹಬ್ಬದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಓದುಗರ-ಚಂದಾದಾರರ-ಹಿತೈಷಿಗಳ ಸಮಾವೇಶದಲ್ಲಿ ಅವರು ಪ್ರದಾನ (ಸಂಪಾದಕೀಯ) ಭಾಷಣ ಮಾಡುತ್ತಾ, ಕನ್ನಡದಲ್ಲಿ ವಿಜ್ಞಾನ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ದೀರ್ಘಕಾಲ ನಡೆದುಬಂದಿರುವ ಏಕೈಕ ಜನಪರ ಪತ್ರಿಕೆ ನಮ್ಮದು. ಪ್ರಿಂಟ್ ಮಾಧ್ಯಮಗಳು ಇಂದು ಕೇವಲ ಓದುಗರ ಚಂದಾದಿಂದ ನಡೆಯುವುದು ಕಟು ವಾಸ್ತವ. ಈ ಪತ್ರಿಕೆಯ ಪ್ರತಿ ಪ್ರತಿಯೂ ನಿಮ್ಮ ಕೈ ಸೇರುವಾಗ ನಮಗೆ ಕನಿಷ್ಠ 20 ರುಪಾಯಿಗಳ ನಷ್ಟವಾಗುತ್ತದೆ. ಆ ಹೊರೆಯನ್ನು ಸರಿದೂಗಿಸಲಾಗದೆ 22 ಅಥವಾ 23ನೇ ವರ್ಷದಲ್ಲಿ ಪತ್ರಿಕೆಯನ್ನೇ ನಿಲ್ಲಿಸಿಬಿಡುವ ಆಲೋಚನೆ ನಡೆದಿತ್ತು. ಆದರೆ, ಹಾಸನದಲ್ಲಿ ನಡೆದ ಆ ನಿರ್ಣಾಯಕ ಸಭೆಯಲ್ಲೇ ಕಾಲದ ಅನಿವಾರ್ಯತೆಯಾಗಿ ನಾನು ''''''''ಆಕಸ್ಮಿಕ ಸಂಪಾದಕನಾದೆ " ಎಂದು ನೆನಪಿಸಿಕೊಂಡರು.ಚಾರ್ಲ್ಸ್ ಡಾರ್ವಿನ್ ಅವರ ಜೀವವೈವಿಧ್ಯದ ಸಿದ್ಧಾಂತದ ''''''''ಮಾರ್ಮೊಸೆಟ್'''''''' ಮಂಗಗಳ ಉದಾಹರಣೆಯನ್ನು ನೀಡುತ್ತಾ, "ತಂಡದ ಉಳಿವಿಗೆ ಒಂಟಿ ಮಂಗ ಅಪಾಯದ ಎಚ್ಚರಿಕೆ ನೀಡಿ ತನ್ನ ಪ್ರಾಣ ತ್ಯಾಗ ಮಾಡುವಂತೆ, ''''ಟೀಚರ್'''' ಪತ್ರಿಕೆಯು ಸಮಾಜದ ತಳಮಟ್ಟದ ಬಡವರ ಬದುಕನ್ನು ರಕ್ಷಿಸಲು, ಪ್ರಜಾಪ್ರಭುತ್ವದ ಆಶಯಗಳನ್ನು ಜಾಗೃತಗೊಳಿಸಲು ಅಪಾಯವನ್ನು ಮೈಮೇಲೆ ಎಳೆದುಕೊಂಡು ಕೆಲಸ ಮಾಡುತ್ತಿದೆ. ಇಂದಿನ ವ್ಯವಸ್ಥೆಯು ಅನ್ನ, ನೀರಿಗಿಂತ ''''ಒಟಿಪಿ'''' ಮುಖ್ಯ ಎನ್ನುವ ಮಟ್ಟಿಗೆ ಬಡವರ ಬದುಕನ್ನು ಬದಲಾಯಿಸಿದೆ. ಸರ್ಕಾರಗಳು ಕೇವಲ ಮೇಲ್ಮೈ ಬದಲಾವಣೆಯ ಭ್ರಮೆ ಸೃಷ್ಟಿಸುತ್ತಿರುವಾಗ, ಇಂತಹ ಜ್ವಲಂತ ಸಮಸ್ಯೆಗಳನ್ನು ಜನರ ಸ್ಮೃತಿಯಲ್ಲಿ ಉಳಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ ಎಂದರು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷರಾದ ಕೆ. ಎಂ. ಶ್ರೀನಿವಾಸ್ ಅವರು, ಬಿಜಿವಿಎಸ್ ಸಮಾಜದಲ್ಲಿ ಮರೆತು ಮಲಗಿರುವ ಜನಸಾಮಾನ್ಯರ ಪ್ರಜ್ಞೆಯನ್ನು ಬಡಿದೆಬ್ಬಿಸುವ ಮಹತ್ತರ ಕೆಲಸ ಮಾಡುತ್ತಿದೆ. ನಮ್ಮ ವೈಚಾರಿಕ ಸಿದ್ಧಾಂತದಿಂದ ನಮಗೆ ಯಾವುದೇ ವೈಯಕ್ತಿಕ ಅಥವಾ ಆರ್ಥಿಕ ಲಾಭ ಬೇಕಾಗಿಲ್ಲ; ಜನರ ಮನಸ್ಥಿತಿಯನ್ನು ಸರಿಪಡಿಸುವುದಷ್ಟೇ ನಮ್ಮ ಗುರಿ. ಶಿಕ್ಷಕನಾದವನು ಕೇವಲ ತರಗತಿಯ ಕೋಣೆಗೆ ಸೀಮಿತವಾಗದೆ, ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳನ್ನು ತುಂಬಿ ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕು ಎಂದು ಕರೆ ನೀಡಿದರು. ಬಿಜಿವಿಎಸ್ ರಾಜ್ಯ ಕಾರ್ಯದರ್ಶಿ ಟಿ.ಎ. ಪ್ರಶಾಂತಬಾಬು ಮಾತನಾಡಿದರು.
ಸಮಾರೋಪ ಭಾಷಣ ಮಾಡಿದ ಪತ್ರಿಕೆಯ ಸಹ-ಸಂಪಾದಕ ಎಫ್.ಸಿ. ಚೇಗರೆಡ್ಡಿ ಅವರು, ಸಾಕ್ಷರತಾ ಆಂದೋಲನದ ದಿನಗಳಿಂದ ನಡೆದುಬಂದ ಪತ್ರಿಕೆಯ ಭಾವನಾತ್ಮಕ ಜರ್ನಿಯನ್ನು ಹಂಚಿಕೊಂಡರು. "10-12 ಅಡಿಯ ಸಣ್ಣ ಕೋಣೆಯಲ್ಲಿ, ಹಗಲಿರುಳು ಕುಳಿತು, ಕೈಯಲ್ಲೇ ಪುಟ ವಿನ್ಯಾಸ ಗೆರೆ ಎಳೆದು ಪತ್ರಿಕೆ ಕಟ್ಟಿದ ನೆನಪುಗಳು ರೋಮಾಂಚನ ತರುತ್ತವೆ. ತೀವ್ರ ಆರ್ಥಿಕ ಸಂಕಷ್ಟದಿಂದ ಪತ್ರಿಕೆ ನಿಲ್ಲಿಸಲು ಹೊರಟಾಗ ಕೈಹಿಡಿದಿದ್ದು ಓದುಗರ ಪ್ರೀತಿಯ ಮಾತುಗಳು ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಿಜಿವಿಎಸ್ ಜಿಲ್ಲಾ ಅಧ್ಯಕ್ಷರಾದ ಸಿ. ಸೌಭಾಗ್ಯ ಅವರು ಮಾತನಾಡಿ, ಪರಿಸರ, ಮಹಿಳಾ ಸಮಾನತೆ, ವಿಜ್ಞಾನ ಹಾಗೂ ಶಿಕ್ಷಣದ ಸವಾಲುಗಳನ್ನು ಕಣ್ಣಿಗೆ ಕಟ್ಟುವಂತೆ ಇಡುವ ಏಕೈಕ ಪತ್ರಿಕೆ ''''ಟೀಚರ್''''. ಪತ್ರಿಕೆಯಲ್ಲಿ ಕೆ.ಎಸ್. ರವಿಕುಮಾರ್ ಅವರ ಲೇಖನಗಳನ್ನು ಓದುವಾಗ ಭೂಮಿಯ ಇಂದಿನ ಪರಿಸ್ಥಿತಿ ಮತ್ತು ಮುಂದಿನ ಜನಾಂಗದ ಭವಿಷ್ಯದ ಬಗ್ಗೆ ಆತಂಕವಾಗುತ್ತದೆ. ಇಂದಿನ ತಲೆಮಾರಿಗೆ ವಿಜ್ಞಾನಿಗಳು ತಮ್ಮ ಸಂಶೋಧನೆಯ ಹಾದಿಯಲ್ಲಿ ಅನುಭವಿಸಿದ ಅಪಾರ ನೋವು ಹಾಗೂ ಇತಿಹಾಸ ತಿಳಿಸುವ ಸರಣಿ ಲೇಖನಗಳು ಪತ್ರಿಕೆಯಲ್ಲಿ ಇನ್ನು ಹೆಚ್ಚು ಮೂಡಿಬರಬೇಕು ಎಂದು ಸಲಹೆ ನೀಡಿದರು.