ಮಂಜುನಾಥ ಕೆ.ಎಂ.
ಬಳ್ಳಾರಿ: ಕನ್ನಡ ನಾಡಿನ ಗಡಿಯನ್ನು ದಾಟಿ ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿ ನೆಲೆಸಿದ್ದರೂ ಕನ್ನಡ ಭಾಷೆ, ಸಂಸ್ಕೃತಿ, ಪರಂಪರೆಯನ್ನು ಜೀವಂತವಾಗಿಟ್ಟಿರುವ ಸಾವಿರಾರು ಕನ್ನಡಿಗರ ಕುಟುಂಬಗಳು ಇಂದು ಗಂಭೀರ ಶೈಕ್ಷಣಿಕ ಸಂಕಷ್ಟ ಎದುರಿಸುತ್ತಿವೆ.ಎಸ್ಸೆಸ್ಸೆಲ್ಸಿ ಬಳಿಕ ಉನ್ನತ ಶಿಕ್ಷಣದ ಕನಸು ಕಾಣುತ್ತಿರುವ ಗಡಿನಾಡ ಕನ್ನಡಿಗರ ಮಕ್ಕಳಿಗೆ ಕರ್ನಾಟಕದ ಪದವಿ ಪೂರ್ವ, ವೃತ್ತಿಪರ ಶಿಕ್ಷಣ ಸಂಸ್ಥೆಗಳ ಬಾಗಿಲುಗಳು ನಿಧಾನವಾಗಿ ಮುಚ್ಚುತ್ತಿವೆ. ಪರಿಣಾಮವಾಗಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ಅನಿಶ್ಚಿತತೆಯತ್ತ ಸಾಗುತ್ತಿದೆ.
ಆಂಧ್ರಪ್ರದೇಶದ ಕರ್ನೂಲ್, ಅನಂತಪುರ ಜಿಲ್ಲೆಗಳು ಸೇರಿದಂತೆ ಆಲೂರು, ಆದೋನಿ, ರಾಯದುರ್ಗ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕನ್ನಡ ಮಾಧ್ಯಮ, ಕನ್ನಡ ಭಾಷಾ ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಸುಮಾರು 12 ಸಾವಿರದಷ್ಟಿದೆ. ಇವರು ಎಸ್ಸೆಸ್ಸೆಲ್ಸಿ ಪೂರ್ಣಗೊಳಿಸಿದ ಬಳಿಕ ಮುಂದಿನ ಶಿಕ್ಷಣಕ್ಕಾಗಿ ಸಹಜವಾಗಿಯೇ ಕರ್ನಾಟಕವನ್ನು ಆಶ್ರಯಿಸುತ್ತಾರೆ. ಆದರೆ ಈಗ ಸರ್ಕಾರಿ ಪಿಯು ಕಾಲೇಜುಗಳು, ವೃತ್ತಿಪರ ಶಿಕ್ಷಣ ಸಂಸ್ಥೆಗಳು, ವಸತಿ ನಿಲಯಗಳಲ್ಲಿ ಪ್ರವೇಶ ಪಡೆಯುವುದು ಕಷ್ಟಕರವಾಗುತ್ತಿದೆ.ಪ್ರವೇಶದಲ್ಲಿ ತಾರತಮ್ಯ:
ಸ್ಥಳೀಯ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಿದ ನಂತರ ಮಾತ್ರ ಉಳಿದ ಸೀಟುಗಳಿದ್ದರೆ ಗಡಿನಾಡ ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗುವುದು ಎಂಬ ನಿಲುವು ಅನೇಕ ಶಿಕ್ಷಣ ಸಂಸ್ಥೆಗಳಲ್ಲಿ ಕಂಡುಬರುತ್ತಿದೆ. ಇದರಿಂದ ಗಡಿನಾಡ ವಿದ್ಯಾರ್ಥಿಗಳು ಶಿಕ್ಷಣದ ಮೂಲಭೂತ ಹಕ್ಕಿನಿಂದಲೇ ವಂಚಿತರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕರ್ನಾಟಕದ ಪಠ್ಯಕ್ರಮದಲ್ಲಿಯೇ ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕದಿಂದ ಪ್ರೌಢಶಿಕ್ಷಣದವರೆಗೆ ಕಲಿತ ವಿದ್ಯಾರ್ಥಿಗಳು ಮುಂದಿನ ಶಿಕ್ಷಣಕ್ಕೆ ಅವಕಾಶವಿಲ್ಲದೇ ಪರದಾಡುತ್ತಿದ್ದಾರೆ. ಶೈಕ್ಷಣಿಕ ಪ್ರವೇಶ ಸಮಸ್ಯೆ ಜತೆಗೆ ವಸತಿ ನಿಲಯಗಳ ಕೊರತೆಯೂ ಗಡಿನಾಡ ವಿದ್ಯಾರ್ಥಿಗಳನ್ನು ಕಾಡುತ್ತಿದೆ. ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಇಲಾಖೆಗಳ ವಿದ್ಯಾರ್ಥಿ ನಿಲಯಗಳಲ್ಲಿ ಪ್ರವೇಶ ಸಿಗದ ಕಾರಣ ಅನೇಕ ವಿದ್ಯಾರ್ಥಿಗಳು ಶಿಕ್ಷಣವನ್ನು ಮುಂದುವರಿಸಲು ಸಾಧ್ಯವಾಗುತ್ತಿಲ್ಲ. ಗ್ರಾಮೀಣ, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಕ್ಕಳು ಇದರಿಂದ ಹೆಚ್ಚು ತೊಂದರೆ ಅನುಭವಿಸುತ್ತಿದ್ದಾರೆ.
ನಿರ್ಲಕ್ಷ್ಯ ನಿರಂತರ:ಈ ಹಿಂದಿನಿಂದಲೂ ಗಡಿನಾಡ ಕನ್ನಡ ಶಾಲೆಗಳ ಬಗ್ಗೆ ಸರ್ಕಾರಗಳ ನಿರ್ಲಕ್ಷ್ಯ ಧೋರಣೆ ಮುಂದುವರಿದಿದೆ ಎಂಬ ಆರೋಪವನ್ನು ತಳ್ಳಿ ಹಾಕುವಂತಿಲ್ಲ. ಶಿಕ್ಷಕರ ಕೊರತೆ, ಮೂಲ ಸೌಕರ್ಯಗಳ ಅಭಾವ, ವಿದ್ಯಾರ್ಥಿಗಳ ಸಂಖ್ಯೆ ಕುಸಿತ ಸೇರಿದಂತೆ ಹಲವು ಸಮಸ್ಯೆಗಳ ನಡುವೆ ಕನ್ನಡ ಶಾಲೆಗಳು ವರ್ಷದಿಂದ ವರ್ಷಕ್ಕೆ ಮುಚ್ಚುತ್ತಿವೆ. ಇಂತಹ ಸಂದರ್ಭದಲ್ಲಿ ಉನ್ನತ ಶಿಕ್ಷಣದ ಅವಕಾಶಗಳೂ ಕಡಿಮೆಯಾಗುತ್ತಿರುವುದು ಗಡಿನಾಡ ಕನ್ನಡಿಗರಲ್ಲಿ ಆತಂಕ ಮೂಡಿಸಿದೆ.
ಗಡಿನಾಡ ಪ್ರದೇಶಗಳಲ್ಲಿ ಕನ್ನಡ ಭಾಷೆ ಉಳಿಸಿ ಬೆಳೆಸುವಲ್ಲಿ ಶಾಲೆಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಆದರೆ ವಿದ್ಯಾರ್ಥಿಗಳಿಗೆ ಮುಂದಿನ ಹಂತದ ಶಿಕ್ಷಣದ ಭದ್ರತೆ ಇಲ್ಲದಿದ್ದರೆ ಕನ್ನಡ ಮಾಧ್ಯಮ ಶಿಕ್ಷಣದ ಮೇಲಿನ ನಂಬಿಕೆಯೇ ಕುಸಿಯುವ ಅಪಾಯವಿದೆ. ಹೀಗಾದರೆ ಮುಂದಿನ ದಿನಗಳಲ್ಲಿ ಉಳಿದಿರುವ ಕನ್ನಡ ಶಾಲೆಗಳೂ ಮುಚ್ಚುವ ಸಾಧ್ಯತೆ ಹೆಚ್ಚಿದ್ದು, ಸಾವಿರಾರು ಕನ್ನಡಿಗರು ತಮ್ಮ ಮಾತೃಭಾಷೆಯಿಂದ ದೂರವಾಗುವ ಸ್ಥಿತಿ ನಿರ್ಮಾಣಗೊಂಡಿದೆ.ಕರ್ನಾಟಕ ಸರ್ಕಾರ ಗಡಿನಾಡ ವಿದ್ಯಾರ್ಥಿಗಳ ಸಮಸ್ಯೆಯನ್ನು ಮಾನವೀಯ, ಭಾಷಾ ಸಂರಕ್ಷಣೆ ದೃಷ್ಟಿಯಿಂದ ಪರಿಗಣಿಸಬೇಕಾಗಿದೆ. ಪದವಿ ಪೂರ್ವ, ವೃತ್ತಿಪರ ಶಿಕ್ಷಣ ಸಂಸ್ಥೆಗಳಲ್ಲಿ ಗಡಿನಾಡ ಕನ್ನಡಿಗರ ಮಕ್ಕಳಿಗೆ ವಿಶೇಷ ಮೀಸಲಾತಿ ಅಥವಾ ಪ್ರತ್ಯೇಕ ಕೋಟಾ ಕಲ್ಪಿಸುವುದು, ವಸತಿ ನಿಲಯಗಳಲ್ಲಿ ಆದ್ಯತೆ ನೀಡುವುದು, ಕನ್ನಡ ಶಾಲೆಗಳ ಬಲವರ್ಧನೆಗೆ ವಿಶೇಷ ಯೋಜನೆಗಳನ್ನು ರೂಪಿಸುವುದು ತುರ್ತು ಅಗತ್ಯವಾಗಿದೆ. ಗಡಿನಾಡಿನಲ್ಲಿ ಕನ್ನಡದ ದೀಪ ಇನ್ನೂ ಬೆಳಗುತ್ತಿದೆ. ಆದರೆ ಆ ದೀಪವನ್ನು ಜೀವಂತವಾಗಿಡಬೇಕಾದರೆ ಅಲ್ಲಿನ ಮಕ್ಕಳ ಶಿಕ್ಷಣಕ್ಕೆ ಭದ್ರತೆ ಒದಗಿಸುವುದು ಸರ್ಕಾರದ ಹೊಣೆಗಾರಿಕೆಯಾಗಿದೆ. ಇಲ್ಲವಾದರೆ ಗಡಿನಾಡದಲ್ಲಿ ಕನ್ನಡದ ಧ್ವನಿ ನಿಧಾನವಾಗಿ ಕ್ಷೀಣಿಸುವ ದಿನಗಳು ದೂರವಿಲ್ಲ.
ಆಂಧ್ರಪ್ರದೇಶದಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತ ಮಕ್ಕಳ ಉನ್ನತ ಶಿಕ್ಷಣಕ್ಕೆ ಕರ್ನಾಟಕ ಸರ್ಕಾರ ಕೂಡಲೇ ಸ್ಪಂದಿಸುವಂತಾಗಬೇಕು. ಇಲ್ಲದೇ ಹೋದರೆ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಲಿದೆ ಎನ್ನುತ್ತಾರೆ ಆಂಧ್ರಪ್ರದೇಶ ಕನ್ನಡ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಗಿರಿಜಾಪತಿ.