ಧಾರವಾಡ:

ಇಲ್ಲಿಯ ರಂಗಾಯಣದ ಸುವರ್ಣ ಸಾಂಸ್ಕೃತಿಕ ಸಮುಚ್ಚಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬೆಳಗಾವಿ ವಿಭಾಗದ ವತಿಯಿಂದ ಹಿರಿಯ ಚಿತ್ರಕಲಾವಿದ ಎಂ.ಆರ್. ಬಾಳಿಕಾಯಿ ಕುರಿತು ಸಾಧಕರೊಂದಿಗೆ ಸಂವಾದ ಯಶಸ್ವಿಯಾಗಿ ಜರುಗಿತು.

ರಾಜ್ಯದ ನಾಲ್ಕು ವಿಭಾಗಗಳ ಪೈಕಿ ಒಂದು ಜಿಲ್ಲೆಯಲ್ಲಿ ತಿಂಗಳ ಮೊದಲ ಶನಿವಾರ ಆಯಾ ಜಿಲ್ಲೆಯಲ್ಲಿರುವ ನಾಡು-ನುಡಿ, ಕಲೆ, ಸಾಹಿತ್ಯ ಹಾಗೂ ಸಂಗೀತ ಹೀಗೆ ವಿವಿಧ ಕ್ಷೇತ್ರದಲ್ಲಿ ಸಲ್ಲಿಸಿರುವ ಗಣನೀಯ ಸೇವೆ ಪರಿಗಣಿಸಿ, ಅವರ ಸಾಧನೆಯನ್ನು ಯುವ ಜನಾಂಗಕ್ಕೆ ಪರಿಚಯಿಸುವ ಉದ್ದೇಶದಿಂದ ‘ಸಾಧಕರೊಂದಿಗೆ ಸಂವಾದ’ ಎಂಬ ನೂತನ ಯೋಜನೆಯೊಂದನ್ನು ಪ್ರಸಕ್ತ ಸಾಲಿನಲ್ಲಿ ಜಾರಿಯಲ್ಲಿ ತಂದಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕ ಕೆ.ಎಚ್‌. ಚೆನ್ನೂರ ಹೇಳಿದರು.

ಪ್ರಸ್ತುತ ಧಾರವಾಡ ಜಿಲ್ಲೆಯಿಂದಲೇ ಆರಂಭಗೊಂಡ ಈ ಕಾರ್ಯಕ್ರಮದಲ್ಲಿ ಬಾಳಿಕಾಯಿ ಅವರ ಜೀವನ-ಸಾಧನೆ ಕುರಿತು ಯುವ ಜನಾಂಗಕ್ಕೆ ಪರಿಚಯಿಸುವ ಕಾರ್ಯ ನಡೆಯುತ್ತಿದೆ. ಬಾಳಿಕಾಯಿ ಅವರು ಚಿತ್ರಕಲಾ ಕ್ಷೇತ್ರಕ್ಕೆ ಸಲ್ಲಿಸಿರುವ ಅನುಪಮ ಸಾಧನೆ ಗುರುತಿಸಿ ಹುಕ್ಕೇರಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಿರುವುದು ಅತ್ಯಂತ ಹೆಮ್ಮೆಯ ಸಂಗತಿ ಎಂದರು.

ಇದೇ ವೇಳೆ ಎಂ.ಆರ್. ಬಾಳಿಕಾಯಿ ಅವರು ಕುರಿತು ನಿರ್ಮಾಣಗೊಂಡ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು. ಜತೆಗೆ ಅವರನ್ನು ಸನ್ಮಾನಿಸಲಾಯಿತು. ರಂಗಾಯಣದ ಆಡಳಿತಾಧಿಕಾರಿ ಶಶಿಕಲಾ ಹುಡೇದ ಇದ್ದರು. ಸನ್ಮಾನ ಸ್ವೀಕರಿಸಿದ ಎಂ.ಆರ್. ಬಾಳಿಕಾಯಿ, ತಮ್ಮ ಬಾಲ್ಯ, ಜೀವನ, ಕಲಾಕ್ಷೇತ್ರದಲ್ಲಿ ತಾವು ನಡೆದ ಬಂದ ದಾರಿ ವಿವರಿಸಿದರು. ಸತ್ಯದ ಹಾದಿಯಲ್ಲಿ ನಡೆದರೆ ನಮ್ಮ ಜೀವನ ಸುಗಮವಾಗಿರುತ್ತದೆ. ನನ್ನ ಸಾಧನೆಯ ಹಿಂದೆ ಇಡೀ ಸಮಾಜವೇ ಇದೆ. ಎಷ್ಟು ಕಷ್ಟಗಳನ್ನು ಅನುಭವಿಸುತ್ತೇವೆಯೋ ಅವುಗಳೇ ಸಾಧನೆಯ ಮೆಟ್ಟಿಲು ಆಗುತ್ತವೆ. ಯಾವುದೇ ಕಾರ್ಯವನ್ನು ಹೃದಯಪೂರ್ವಕವಾಗಿ ಮಾಡಿದಾಗ ಮಾತ್ರ ಯಶಸ್ಸು ಕಾಣಲು ಸಾಧ್ಯ ಎಂದರು.


ನಂತರ ಜರುಗಿದ ಸಂವಾದದಲ್ಲಿ ಬಿ. ಮಾರುತಿ, ಮಹದೇವ ಜಗತಾಪ, ಡಾ. ಬಿ.ಎಲ್. ಚಹ್ವಾನ, ಪಿ.ಎಸ್. ಕಡೇಮನಿ, ಡಾ. ಎಸ್.ಸಿ. ಪಾಟೀಲ, ಎಂ.ಎಸ್. ಚೌಧರಿ, ಡಿ.ಎಂ. ಬಡಿಗೇರ, ಬಿ.ಐ. ಈಳಗೇರ ಪಾಲ್ಗೊಂಡಿದ್ದರು. ಕುಮಾರ ಬೆಕ್ಕೇರಿ ಸ್ವಾಗತಿಸಿದರು. ಆರತಿ ದೇವಶಿಖಾಮಣಿ ನಿರೂಪಿಸಿದರು.

ಸುರೇಶ ಹಾಲಭಾವಿ, ಡಾ. ಶಶಿಧರ ನರೇಂದ್ರ, ಡಾ. ಬಸವರಾಜ ಕುರಿಯವರ, ಎನ್.ಆರ್. ನಾಯ್ಕರ್, ಡಾ. ರಾಯಪ್ಪ ಬಾಳಿಕಾಯಿ, ವಿಠ್ಠಲ ಬಸಳಿಗುಂದಿ, ಎಸ್.ಬಿ. ಕಂಕಣವಾಡಿ, ರಮೇಶ ಬಾಳಿಕಾಯಿ ಇದ್ದರು.