ಬ್ರಹ್ಮಾವರ: ಇಲ್ಲಿನ ಹೇರಾಡಿ ಗ್ರಾಮದ ಮನೆಯೊಂದರಲ್ಲಿ ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸಲಾಗಿದ್ದು, ಆತನಿಂದ 14 ಲಕ್ಷ ರು. ಮೌಲ್ಯದ ಚಿನ್ನಾಭರಣ ಮತ್ತು ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಯನ್ನು ಬಾರಕೂರಿನ ನಿವಾಸಿ ಪ್ರವೀಣ್‌ ಕುಮಾರ್‌ ಕೆ. ಎಂದು ಗುರುತಿಸಲಾಗಿದೆ. ಮಾ. 6 ರಂದು ಹೇರಾಡಿಯ ಮಂಜುನಾಥ ರಾವ್‌ ಅವರು ಹೆಂಡತಿಯೊಂದಿಗೆ, ಮನೆಗೆ ಬೀಗ ಹಾಕಿ ಬಾರಕೂರಿನಲ್ಲಿ ನಡೆದ ನಾಗಮಂಡಲಕ್ಕೆ ಹೋಗಿದ್ದರು. ಈ ಸಂದರ್ಭದಲ್ಲಿ ಆರೋಪಿ ಪ್ರವೀಣ್ ಕುಮಾರ್ ಅವರ ಮನೆಯ ಎದುರು ಬಾಗಿಲು ಒಡೆದು ಬೆಡ್‌ ರೂಮಿನಲ್ಲಿದ್ದ ಗೋಡ್ರೇಜ್‌ ಬೀಗ ಒಡೆದು ಅದರಲ್ಲಿದ್ದ 47 ಗ್ರಾಂ ಚಿನ್ನದ ಮುತ್ತಿನ ಸರ - ಪೆಂಡೆಂಟ್‌, 32 ಗ್ರಾಂ ತೂಕದ 2 ಚಿನ್ನದ ಮುತ್ತಿನ ಬಳೆ, 6 ಗ್ರಾಂ ತೂಕದ 1 ಜೊತೆ ಚಿನ್ನದ ಬೆಂಡೋಲೆ, 4 ಗ್ರಾಂ ತೂಕದ ಚಿನ್ನದ ಉಂಗುರ, 3 ಗ್ರಾಂ ಚಿನ್ನದ ಬೆಂಡೋಲೆ, ಬೆಳ್ಳಿಯ ಹರಿವಾಣ - ಕವಳಿಗೆ ಮತ್ತು ನಗದು 49,000 ರು.ಗಳನ್ನು ಕಳವು ಮಾಡಿ ಪರಾರಿಯಾಗಿದ್ದ. ಈ ಪ್ರಕರಣವನ್ನು ಡಿವೈಎಸ್ಪಿ ಬೆಳ್ಳಿಯಪ್ಪ ಅವರ ನಿರ್ದೇಶನದಂತೆ ಬ್ರಹ್ಮಾವರ ವೃತ್ತ ನಿರೀಕ್ಷಕ ಗೋಪಿಕೃಷ್ಣ, ಎಸೈ ಅಶೋಕ್‌ ಮಾಳಾಬಗಿ, ಅಪರಾಧ ಪತ್ತೆ ಸಿಬ್ಬಂದಿಗಳಾದ ಕಿರಣ್‌, ಸಿದ್ದಪ್ಪ ಸಕನಳ್ಳಿ, ಸುರೇಶ್‌ ಬಾಬು, ಎ.ಎಸ್.ಐ ಕೃಷ್ಣಪ್ಪ, ವಿಶ್ವನಾಥ ಶೆಟ್ಟಿ, ಜಯಶೀಲಾ ಇವರುಗಳ ತಂಡ ತನಿಖೆ ನಡೆಸಿ, ಆರೋಪಿಯನ್ನು ಬಂಧಿಸಿ ಚಿನ್ನಾಭರಣಗಳನ್ನು ವಶಪ ಡಿಸಿಕೊಂಡಿದೆ.