ಬಂಟ್ವಾಳ: ನಮ್ಮ ಜನಗಣತಿ – ನಮ್ಮ ಅಭಿವೃದ್ಧಿ ಎಂಬ ಧ್ಯೇಯವಾಕ್ಯದಡಿ 2027ರ ಜನಗಣತಿಯ ಮೊದಲ ಹಂತವಾಗಿ ಮನೆಪಟ್ಟಿ ಮತ್ತು ಮನೆಗಣತಿ ಪ್ರಕ್ರಿಯೆಗೆ ಚಾಲನೆ ದೊರೆತಿದ್ದು, ಗಣತಿದಾರರ ತರಬೇತಿ ಬಿರುಸಿನಿಂದ ನಡೆಯುತ್ತಿದೆ.
ಬಂಟ್ವಾಳ ತಾಲೂಕಿನಲ್ಲಿ ಗಣತಿ ಕಾರ್ಯಕ್ಕೆ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಪಂಚಾಯಿತಿ ಸಿಬ್ಬಂದಿ ಸೇರಿದಂತೆ ಒಟ್ಟು 763 ಮಂದಿಯನ್ನು ನಿಯೋಜಿಸಲಾಗಿದೆ. ಬಂಟ್ವಾಳ ಪುರಸಭಾ ವ್ಯಾಪ್ತಿಯ 70 ಬ್ಲಾಕ್ ಗಳಿಗೆ 77 ಗಣತಿದಾರರು, ವಿಟ್ಲ ಪಟ್ಟಣ ಪಂಚಾಯಿತಿ ವ್ಯಾಪ್ತಿಯ 38 ಬ್ಲಾಕ್ ಗಳಿಗೆ 42 ಗಣತಿದಾರರು ಹಾಗೂ ಬಂಟ್ವಾಳ ಗ್ರಾಮಾಂತರದ 584 ಬ್ಲಾಕ್ ಗಳಿಗೆ 644 ಗಣತಿದಾರರನ್ನು ನಿಯೋಜಿಸಲಾಗಿದೆ. ಅಲ್ಲದೆ ಗಣತಿ ಕಾರ್ಯಗಳ ಮೇಲ್ವಿಚಾರಣೆಗೆ ಗ್ರಾಮಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳು, ಕಾಲೇಜು ಉಪನ್ಯಾಸಕರನ್ನು ನಿಯೋಜಿಸಲಾಗಿದ್ದು ತಾಲೂಕಿನ ನಾಲ್ಕು ತರಬೇತಿ ಕೇಂದ್ರಗಳಲ್ಲಿ ಒಟ್ಟು 18 ಬ್ಯಾಚ್ ನಲ್ಲಿ ತರಬೇತಿ ನಡೆಯಲಿದೆ. ಬಿಸಿ ರೋಡಿನ ಎಸ್ ಜೆ ಎಸ್ ಆರ್ ವೈ ಸಭಾಂಗಣ, ಬಂಟ್ವಾಳ ಪುರಸಭಾ ಸಭಾಂಗಣ, ಮಾಣಿ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆ ಹಾಗೂ ವಿಟ್ಲದ ಸೈಂಟ್ ರೀಟಾ ಶಾಲೆಗಳ್ಲಿ ತರಬೇತಿಗಳು ನಡೆಯುತ್ತಿದೆ ಎಂದು ಉಪತಹಸೀಲ್ದಾರ್ ನರೇಂದ್ರ ಕನ್ನಡ ಪ್ರಭಕ್ಕೆ ತಿಳಿಸಿದ್ದಾರೆ. ಏ.15 ರವರೆಗೆ ಸ್ವಯಂ ಗಣತಿ ಪ್ರಕ್ರಿಯೆ ನಡೆಯಲಿದ್ದು, ನಂತರ ಏ.16 ರಿಂದ ಗಣತಿದಾರರು ಮನೆಗಳಿಗೆ ಭೇಟಿ ನೀಡಿ ಮನೆ ಪಟ್ಟಿ ಹಾಗೂ ಮನೆಗಣತಿ ಕಾರ್ಯ ನಡೆಸಲಿದ್ದಾರೆ 2027 ರ ಫೆಬ್ರವರಿಯಲ್ಲಿ ಪೂರ್ಣ ಪ್ರಮಾಣದ ಜನಗಣತಿ ನಡೆಯಲಿದೆ. ಈಗಾಗಲೇ ಆರಂಭಗೊಂಡಿರುವ ಈ ಗಣತಿ ಕಾರ್ಯಕ್ಕೆ ಪ್ರತಿಯೊಬ್ಬರೂ ಉತ್ತಮ ಸಹಕಾರ ನೀಡುವಂತೆ ತಾಲೂಕು ತಹಸೀಲ್ದಾರ್ ಮಂಜುನಾಥ್ ಮನವಿ ಮಾಡಿದ್ದಾರೆ.ಜನಗಣತಿ ಭಾಗವಾಗಿ ಸಾರ್ವಜನಿಕರು ಸ್ವಯಂ ಮನೆಗಣತಿ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರು ಏಪ್ರಿಲ್ 1ರಿಂದ ಏಪ್ರಿಲ್ 15ರವರೆಗೆ ಅಧಿಕೃತ ಪೋರ್ಟಲ್ https://se.census.gov.in ಮೂಲಕ ಸ್ವಯಂ ಗಣತಿ ಮಾಡಬಹುದು. ಮೊಬೈಲ್ OTP ಮೂಲಕ ಲಾಗಿನ್ ಆಗಿ, ರಾಜ್ಯ, ಜಿಲ್ಲೆ ಹಾಗೂ ಸ್ಥಳೀಯ ವಿವರಗಳನ್ನು ಆಯ್ಕೆ ಮಾಡಿ, ಡಿಜಿಟಲ್ ಮ್ಯಾಪ್‌ನಲ್ಲಿ ತಮ್ಮ ಮನೆಯ ಸ್ಥಳ ಗುರುತಿಸಿ, ಕುಟುಂಬದ ವಿವರ ನಮೂದಿಸಬೇಕಾಗಿದೆ. ಈ ಪ್ರಕ್ರಿಯೆಯ ಬಳಿಕ Self Enumeration ID (SE ID) ಪಡೆಯಲಾಗುತ್ತದೆ. ಈ SE ID ಅನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು. ಏಪ್ರಿಲ್ 16ರಿಂದ ಗಣತಿದಾರರು ಮನೆಗೆ ಭೇಟಿ ನೀಡಿದಾಗ ಈ ID ಅನ್ನು ನೀಡಿ ವಿವರಗಳನ್ನು ದೃಢೀಕರಿಸಬೇಕಾಗಿದೆ. ಸಂಗ್ರಹಿಸಲಾದ ಮಾಹಿತಿಯನ್ನು ಸಂಪೂರ್ಣ ಗೌಪ್ಯವಾಗಿ ಇಡಲಾಗುವುದು. ತೆರಿಗೆ, ಪೊಲೀಸ್ ಅಥವಾ ಯಾವುದೇ ತನಿಖೆಗಳಿಗೆ ಬಳಸುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಎಲ್ಲಾ ಮಾಹಿತಿಯನ್ನು ಸುರಕ್ಷಿತ ಸರ್ವರ್‌ಗಳಲ್ಲಿ ಸಂರಕ್ಷಿಸುವ ಬಗ್ಗೆ ಅಧಿಕಾರಿಗಳ ಭರವಸೆ ನೀಡಿದ್ದಾರೆ.
