ಸಾರಾಂಶ
ಗರ್ಭ ಕಂಠದ ಕ್ಯಾನ್ಸರ್ ಹಾಗೂ ಸ್ತನ ಕ್ಯಾನ್ಸರ್‌ನಿಂದ ಹೆಚ್ಚು ಮಹಿಳೆಯರು ಸಾವಿಗೀಡಾಗುತ್ತಿದ್ದಾರೆ. ಪ್ರಾರಂಭದಲ್ಲೆ ಈ ಕಾಯಿಲೆಯನ್ನು ಗುರುತಿಸಿ ಚಿಕಿತ್ಸೆ ನೀಡಿದರೆ ಗುಣಮುಖರಾಗುತ್ತಾರೆ. ಜೊತೆಗೆ ಆಗುವ ಸಾವು ನೋವನ್ನು ತಪ್ಪಿಸಬಹುದು. ಈ ಬಗ್ಗೆ ಇನ್ನು ಅನೇಕರಲ್ಲಿ ತಿಳಿವಳಿಕೆ ಇರುವುದಿಲ್ಲ. ಈ ನಿಟ್ಟಿನಲ್ಲಿ ಈ ಬಗ್ಗೆ ಜಾಥಾದ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಶಿವಸ್ವಾಮಿ ತಿಳಿಸಿದರು.
ಕನ್ನಡಪ್ರಭ ವಾರ್ತೆ ಹಾಸನ
ನಗರದ ಹೇಮಾವತಿ ಪ್ರತಿಮೆ ಬಳಿ ಕರ್ನಾಟಕ ರಾಜ್ಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಸಮ್ಮೇಳನದ ಅಂಗವಾಗಿ ಶುಕ್ರವಾರ ಬೆಳಿಗ್ಗೆ ಸಾರ್ವಜನಿಕರಲ್ಲಿ ಗರ್ಭಕಂಠದ ಕ್ಯಾನ್ಸರ್ ಹಾಗೂ ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಜಾಥಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಶಿವಸ್ವಾಮಿ ಹಸಿರು ಬಾವುಟ ಪ್ರದರ್ಶಿಸುವುದರ ಮೂಲಕ ಚಾಲನೆ ನೀಡಿದರು.ನಂತರ ಶಿವಸ್ವಾಮಿ ಅವರು ಉದ್ದೇಶಿಸಿ ಮಾತನಾಡುತ್ತಾ, ರಾಜ್ಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಮಹಾ ಸಮ್ಮೇಳನದ ಅಂಗವಾಗಿ ಬಹಳ ಕಾಮನ್ ಆಗಿರುವಂತಹ ಗರ್ಭ ಕಂಠದ ಕ್ಯಾನ್ಸರ್ ಹಾಗೂ ಸ್ತನ ಕ್ಯಾನ್ಸರ್‌ನಿಂದ ಹೆಚ್ಚು ಮಹಿಳೆಯರು ಸಾವಿಗೀಡಾಗುತ್ತಿದ್ದಾರೆ. ಪ್ರಾರಂಭದಲ್ಲೆ ಈ ಕಾಯಿಲೆಯನ್ನು ಗುರುತಿಸಿ ಚಿಕಿತ್ಸೆ ನೀಡಿದರೆ ಗುಣಮುಖರಾಗುತ್ತಾರೆ. ಜೊತೆಗೆ ಆಗುವ ಸಾವು ನೋವನ್ನು ತಪ್ಪಿಸಬಹುದು. ಈ ಬಗ್ಗೆ ಇನ್ನು ಅನೇಕರಲ್ಲಿ ತಿಳಿವಳಿಕೆ ಇರುವುದಿಲ್ಲ. ಈ ನಿಟ್ಟಿನಲ್ಲಿ ಈ ಬಗ್ಗೆ ಜಾಥಾದ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಈ ಬಗ್ಗೆ ಮಹಿಳೆಯರು ತಿಳಿದುಕೊಂಡು ಸಂಬಂಧಿಕರಿಗೆ ಮತ್ತು ಅಕ್ಕಪಕ್ಕದ ಮನೆಯವರಿಗೆ ತಿಳಿಸುವುದರಿಂದ ಆರೋಗ್ಯ ಸಮಾಜ ನಿರ್ಮಾಣ ಮಾಡಬಹುದು. ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ನೋವು, ಬ್ಲೀಡಿಂಗ್ ಆಗುವುದು, ಕೆಟ್ಟ ವಾಸನೆ ಕಂಡು ಬಂದಲ್ಲಿ ತಕ್ಷಣ ಪರೀಕ್ಷೆ ಮಾಡಿಸಿಕೊಂಡರೇ ಚಿಕಿತ್ಸೆ ಪಡೆಯಬಹುದು ಎಂದು ಕಿವಿಮಾತು ಹೇಳಿದರು.ಬ್ಲಡ್ ಕ್ಯಾನ್ಸರ್‌ನಲ್ಲೂ ಕೂಡ ಹೆಚ್ಚು ಸಾವು ನೋವುಗಳು ಕಾಣುತ್ತಿದ್ದೇವೆ. ಚರ್ಮದಲ್ಲಿ ಸೋಂಕು, ಕಲರ್ ಬದಲಾವಣೆ, ಕೆಟ್ಟ ದ್ರವಗಳು ಹೊರ ಬರುತ್ತಿದ್ದರೇ ವೈದ್ಯರ ಬಳಿ ಸಲಹೆ ಪಡೆಯಬಹುದು ಎಂದು ಸಲಹೆ ನೀಡಿದರು. ಈ ಜಾಥಾ ಎಲ್ಲರಲ್ಲೂ ಜಾಗೃತಿ ಮೂಡಿಸಲಿ ಎಂದು ಹಾರೈಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಧರಣಿ ಕುಮಾರ್ ಮಾತನಾಡಿ, ಗರ್ಭ ಕಂಠದ ಕ್ಯಾನ್ಸರ್ ಪ್ರಾಥಮಿಕವಾಗಿ ಎಚ್.ಪಿ.ವಿ. ಸೋಂಕಿನಿಂದ ಉಂಟಾಗುತ್ತದೆ. ಈ ಸೋಂಕು ಸಾಮಾನ್ಯವಾಗಿದ್ದು, ಜೀವಿತಾವಧಿಯಲ್ಲಿ ಪ್ರತಿಯೊಬ್ಬರೂ ಎಚ್.ಪಿ.ವಿ. ಸೋಂಕಿಗೆ ಒಳಗಾಗುತ್ತಾರೆ. ಈ ಲಸಿಕೆ ಮೂಲಕ ಎಚ್.ಪಿ.ವಿ. ಸೋಂಕನ್ನು ತಡೆಯಲು ಸಾಧ್ಯ ಎಂದರು. ಈ ಜಾಗೃತಿ ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತರು ಉತ್ತಮ ಕೆಲಸ ಮಾಡುತ್ತಿದ್ದು, ಇವರು ಸಮಾಜದ ಕಣ್ಣು ಎಂದು ಹೇಳಿದರು.ಜಾಗೃತಿ ಜಾಥದಲ್ಲಿ ವೈದ್ಯರಾದ ಕಿರಣ ಹಾಗೂ ಆಶಾ ಕಾರ್ಯಕರ್ತೆಯರು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.