100 ರೋಗ ನಿರೋಧಕ್ಕೆ ಎದೆಹಾಲು ಸಮ: ಡಾ.ದೀಪಕ್ ಚಿರಡೋಣಿ

| Published : Aug 08 2025, 01:00 AM IST

ಸಾರಾಂಶ

ಸ್ತನ್ಯಪಾನವು ನೂರಕ್ಕೂ ಹೆಚ್ಚು ಆಂಟಿ ಬಯೋಟಿಕ್ ಗೆ ಸರಿಸಮವಾದದ್ದು ಎಂದು ಪಟ್ಟಣದ ಬಸವೇಶ್ವರ ಆಸ್ಪತ್ರೆ ಮಕ್ಕಳ ತಜ್ಞರಾದ ಡಾ.ದೀಪಕ್ ಚಿರಡೋಣಿ ಹೇಳಿದರು.

ಕನ್ನಡಪ್ರಭ ವಾರ್ತೆ ತರೀಕೆರೆ

ಸ್ತನ್ಯಪಾನವು ನೂರಕ್ಕೂ ಹೆಚ್ಚು ಆಂಟಿ ಬಯೋಟಿಕ್ ಗೆ ಸರಿಸಮವಾದದ್ದು ಎಂದು ಪಟ್ಟಣದ ಬಸವೇಶ್ವರ ಆಸ್ಪತ್ರೆ ಮಕ್ಕಳ ತಜ್ಞರಾದ ಡಾ.ದೀಪಕ್ ಚಿರಡೋಣಿ ಹೇಳಿದರು.

ಕರ್ನಾಟಕ ಸರ್ಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಚಿಕ್ಕಮಗಳೂರು, ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ, ತರೀಕೆರೆ. ಸಾರ್ವಜನಿಕ ಆಸ್ಪತ್ರೆ, ರೋಟರಿ ಕ್ಲಬ್, ಇನ್ನರ್ ವ್ಹೀಲ್ ಕ್ಲಬ್ ತರೀಕೆರೆ, ಮಮತಾ ಮಹಿಳಾ ಸಮಾಜ, ಭಾರತೀಯ ವೈದ್ಯಕೀಯ ಸಂಘ, ತರೀಕೆರೆ ಸಹಯೋಗದೊಂದಿಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಸಭಾಂಗಣದಲ್ಲಿ ಗುರುವಾರ ವಿಶ್ವ ಸ್ತನ್ಯಪಾನ ಸಪ್ತಾಹ-2025 ಕಾರ್ಯಕ್ರಮದಲ್ಲಿ ಮಾತನಾಡಿದರು.

ಸ್ತನ್ಯಪಾನವು ಮಗುವಿಗೆ ಅತ್ಯುತ್ತಮವಾದ ಆಹಾರವಾಗಿದೆ, ತಾಯಿ ಮತ್ತು ಮಗುವಿಗೆ ಅನೇಕ ಪ್ರಯೋಜನಗಳನ್ನು ಹೊಂದಿದೆ. ಇದು ಮಗುವಿನ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಅಗತ್ಯವಾದ ಎಲ್ಲಾ ಪೋಷಕಾಂಶಗಳನ್ನು ಒದಗಿಸುತ್ತದೆ. ಜೊತೆಗೆ, ಇದು ತಾಯಿಯ ಆರೋಗ್ಯಕ್ಕೂ ಒಳ್ಳೆಯದು. ಎದೆಹಾಲು ಮಗುವಿಗೆ ರೋಗನಿರೋಧಕ ಶಕ್ತಿಯನ್ನು ನೀಡುತ್ತದೆ, ಸೋಂಕುಗಳು ಮತ್ತು ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಎಂದು ಹೇಳಿದರು.

ಸ್ತನ್ಯಪಾನವು ನಂತರದ ಜೀವನದಲ್ಲಿ ಮಗುವಿಗೆ ಬೊಜ್ಜು, ಟೈಪ್ 2 ಮಧುಮೇಹ ಮತ್ತು ಆಸ್ತಮಾದಂತಹ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಇದು ತಾಯಿಯ ತೂಕ ಇಳಿಸಲು ಸಹಾಯ ಮಾಡುತ್ತದೆ ಮತ್ತು ಸ್ತನ ಮತ್ತು ಅಂಡಾಶಯದ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಸ್ತನ್ಯಪಾನವು ತಾಯಿ ಮತ್ತು ಮಗುವಿನ ನಡುವೆ ಬಾಂಧವ್ಯವನ್ನು ಬಲಪಡಿಸುತ್ತದೆ ಎಂದರು.

ಸಾರ್ವಜನಿಕ ಆಸ್ಪತ್ರೆ ಮುಖ್ಯಆಡಳಿತ ವೈದ್ಯಾಧಿಕಾರಿಗಳಾದ ಡಾ. ಚನ್ನಬಸಪ್ಪ ಎಂ.ಜೆ. ಅವರು ಮಾತನಾಡಿ, ತಾಯಿಯ ಎದೆಹಾಲನ್ನು ಜೀವಾಮೃತ ಎಂದೇ ಹೇಳಬಹುದು, ಶಿಶು ಆರೋಗ್ಯಕರವಾಗಿರಬೇಕೆಂದರೆ, ತಾಯಿಯ ಎದೆಹಾಲನ್ನು ಕಡ್ಡಾಯವಾಗಿ ಕುಡಿಸಲೇಬೇಕು ಎಂದರು.

ತಾಯಿ ಎದೆಹಾಲಿನ ಮಹತ್ವ ಹಾಗೂ ಸ್ತನ್ಯಪಾನಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಆ.1 ರಿಂದ 7 ರವರೆಗೆ ವಿಶ್ವ ಸ್ತನ್ಯಪಾನ ಸಪ್ತಾಹವನ್ನು ಆಚರಿಸಲಾಗುತ್ತದೆ ಎಂದು ತಿಳಿಸಿದರು.

ಸಾರ್ವಜನಿಕ ಆಸ್ಪತ್ರೆ ಮಕ್ಕಳ ತಜ್ಞರು ಡಾ.ಮಂಜುನಾಥ್ ಬಿ.ಎಸ್. ಮಾತನಾಡಿ ಹಾಲುಣಿಸುವ ಮಹಿಳೆಯರಿಗೆ ಚಿತ್ರ ಪ್ರದರ್ಶನಗಳ ಮೂಲಕ ತಾಯಿ ಹಾಲುಣಿಸುವ ವಿವಿಧ ಭಂಗಿಗಳು, ಸ್ತನ್ಯಪಾನದ ಪ್ರಾಮುಖ್ಯತೆ, ಪೋಷಕಾಂಶಗಳ ಮಾಹಿತಿ, ಹುಟ್ಟಿದ ಮಕ್ಕಳಲ್ಲಿ ಹಾಲುಣಿಸಲು ಕಾಣುವ ನ್ಯೂನ್ಯತೆಗಳು, ಪರಿಹಾರಗಳು, ಹಾಲುಣಿಸುವ ತಾಯಿಯರ ಆಹಾರ ಪದ್ಧತಿ, ಸ್ವಚ್ಛತೆ , ಸ್ತನ್ಯಪಾನದ ಅಭಾವದಿಂದ ಮಕ್ಕಳಲ್ಲಿ ಕಾಣುವ ರೋಗಗಳು, ಪರಿಹಾರದ ಬಗ್ಗೆ ಸಂಕ್ಷಿಪ್ತವಾದ ಮಾಹಿತಿ ನೀಡಿದರು.

ಡಾ. ಗೀತಾ, ಡಾ. ಸಿಂಧು, ಡಾ. ಭೂಮಿಕಾ, ಡಾ.ಕಿಶೋರ್ ಕುಮಾರ್ ಬಿ.ವಿ. ಪ್ರವೀಣ್ ನಹರ್ ಸಹಾಯಕ ಗವರ್ನರ್ ವಲಯ -7 , ರೋಟರಿ ಕ್ಲಬ್ ಅಧ್ಯಕ್ಷರಾದ ಬಿ.ಪಿ.ರವಿ ಕುಮಾರ್, ಇನ್ನರ್ ವ್ಹೀಲ್ ಕ್ಲಬ್‌ನ ಅಧ್ಯಕ್ಷರಾದ ಮೀರಾ ವಾಸು, ಕಾರ್ಯದರ್ಶಿಯಾದ ಶ್ವೇತಾ ದಿನೇಶ್, ಮಮತಾ ಮಹಿಳಾ ಸಮಾಜದ ಅಧ್ಯಕ್ಷರಾದ ಮಂಜುಳಾ ವಿಜಯ್ ಕುಮಾರ್, ಕಾರ್ಯದರ್ಶಿಯಾದ ರೋಹಿಣಿ ಎನ್.ಮೂರ್ತಿ, ರೋಟರಿ ಕ್ಲಬ್ ನ ಸದಸ್ಯರಾದ ನಟರಾಜ್, ಇನ್ನರ್ ವ್ಹೀಲ್ ಕ್ಲಬ್‌ನ ಸದಸ್ಯರಾದ ಸುನಿತಾ ಕಿರಣ್, ಉಮಾದೇವಿ ದಯಾನಂದ, ಚೈತ್ರ ಚಂದ್ರು, ಪ್ರತಿಭಾ ಶಂಕರ್, ಮಮತಾ ಮಹಿಳಾ ಸಮಾಜದ ಸದಸ್ಯರಾದ ಮಂಗಳ ವರಣೇಂದ್ರ, ಭಾಗ್ಯ ಶಿವಶಂಕರ್, ಸುನಿತಾ ಗಂಗಾಧರ್, ಭವ್ಯ ರೇವಣ್ಣ, ಡಾ..ಕಿಶೋರ್ ಕುಮಾರ್ ಬಿ.ವಿ. ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿ, ಶುಶ್ರೂಷಕಿಯರು ಹಾಜರಿದ್ದರು.