ಬಿ. ರಾಮಪ್ರಸಾದ್‌ ಗಾಂಧಿ

ಹರಪನಹಳ್ಳಿ: ಹೆಲ್ಮೆಟ್‌ ತನ್ನಿ ಬೈಕ್ ತಗೊಳ್ಳಿ. ಇದು ಹೆಲ್ಮೆಟ್‌ ಕಡ್ಡಾಯವಾಗಿ ಧರಿಸಲು ಬೈಕ್ ಸವಾರರಿಗೆ ಇಲ್ಲಿಯ ಪೊಲೀಸ್ ಇಲಾಖೆ ಜಾಗೃತಿ ಮೂಡಿಸಲು ಕಂಡುಕೊಂಡ ವಿನೂತನ ಕಾರ್ಯಕ್ರಮ.ಕಳೆದ ಎರಡು ದಿನಗಳಿಂದ ಪಟ್ಟಣದ ಪೊಲೀಸ್‌ ಠಾಣೆಯಿಂದ ಹೆಲ್ಮೆಟ್‌ ಧರಿಸುವ ಕುರಿತು ಬೈಕ್‌ ಸವಾರರಿಗೆ ಅರಿವು ಮೂಡಿಸಲು ಕಾರ್ಯಕ್ರಮ ಹಾಕಿಕೊಂಡಿದ್ದು, ಅನೇಕ ಬಾರಿ ಇಂತಹ ಕಾರ್ಯಕ್ರಮ ಹಾಕಿಕೊಂಡಿದ್ದರೂ ಈ ಬಾರಿ ವಿನೂತನ ಕಾರ್ಯಕ್ರಮದ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.

ನಗರದ ಪ್ರಮುಖ ವೃತ್ತ ಹಾಗೂ ಇತರ ಕಡೆ ನಿಂತು ಹೆಲ್ಮೆಟ್‌ ಧರಿಸದ ಬೈಕ್‌ ಸವಾರರನ್ನು ನಿಲ್ಲಿಸಿ ಬೈಕ್‌ ಅನ್ನು ವಶಕ್ಕೆ ಪಡೆಯುತ್ತಾರೆ. ಈ ವರೆಗೂ ಬೈಕ್‌ ನಿಲ್ಲಿಸಿ ದಂಡ ಹಾಕಿ ಎಚ್ಚರಿಕೆ ಕೊಟ್ಟು ಕಳಿಸುತ್ತಿದ್ದರು. ಆದರೆ, ಇದೀಗ ಬೈಕ್‌ ವಶಕ್ಕೆ ಪಡೆದು ಪೊಲೀಸ್‌ ಠಾಣೆಯಲ್ಲಿ ನಿಲ್ಲಿಸಿಕೊಳ್ಳುತ್ತಾರೆ,

ಹೆಲ್ಮೆಟ್‌ ತೆಗೆದುಕೊಂಡು ಬಂದು ತೋರಿಸಿ ಅಧನ್ನು ಧರಿಸಿಕೊಂಡೇ ತಮ್ಮ ಬೈಕ್‌ ಅನ್ನು ಪೊಲೀಸ್‌ ಠಾಣೆಯಿಂದ ವಾಪಸ್‌ ಕೊಂಡೊಯ್ಯಬೇಕು. ಅನೇಕರು ಪೊಲೀಸರ ವಶದಲ್ಲಿದ್ದ ತಮ್ಮ ಬೈಕ್‌ಗಳನ್ನು ಹೆಲ್ಮೆಟ್‌ ತಂದು ತೋರಿಸಿ ಹಿಂಪಡೆದಿದ್ದಾರೆ.

ಹರಪನಹಳ್ಳಿಯಲ್ಲಿ ಪೊಲೀಸ್ ಇಲಾಖೆ ವಿನೂತನ ಕಾರ್ಯಕ್ರಮದ ಮೂಲಕ ಜನರಿಗೆ ಹೆಲ್ಮೆಟ್‌ ಮಹತ್ವ ಹೇಳಿಕೊಡುತ್ತಿರುವುದು ಶ್ಲಾಘನೀಯ.


ಈ ವರೆಗೂ ಎಚ್ಚರಿಕೆ ಕೊಡುತ್ತಿದ್ದೇವು, ನಂತರ ದಂಡ ಹಾಕಿದೆವು. ಈ ಬಾರಿ ಹೆಲ್ಮೆಟ್‌ ಧರಿಸದ ಬೈಕ್‌ ಅನ್ನು ವಶಕ್ಕೆ ಪಡೆದು ನಮ್ಮ ಠಾಣೆಯಲ್ಲಿಟ್ಟುಕೊಳ್ಳುತ್ತೇವೆ. ಮಾಲೀಕರು ಹೆಲ್ಮೆಟ್‌ ತಂದು ತೋರಿಸಿ ವಾಪಸ್‌ ಪಡೆಯಬೇಕು. ಎಷ್ಟೊ ಜನರ ಬಳಿ ಹೆಲ್ಮೆಟ್ ಇವೆ. ಆದರೆ, ಅವರು ಧರಿಸುವುದಿಲ್ಲ. ಮನೆಯಲ್ಲಿಟ್ಟು ಬೈಕ್ ಓಡಿಸುತ್ತಾರೆ. ನಾವು ಬಿಗಿ ಕ್ರಮ ಕೈಗೊಂಡಾಗ ಮನೆಯಲ್ಲಿದ್ದ ಹೆಲ್ಮೆಟ್‌ ತರುತ್ತಿದ್ದಾರೆ ಎಂದು ಹೇಳಿದರು. ಪ್ರತಿಯೊಬ್ಬರು ಹೆಲ್ಮೆಟ್‌ ಕಡ್ಡಾಯವಾಗಿ ಧರಿಸಿ ತಮ್ಮ ಜೀವ ಉಳಿಸಿಕೊಳ್ಳಬೇಕು ಎಂದು ನಗರ ಠಾಣೆಯ ಪಿಎಸ್‌ಐ ಶಂಭುಲಿಂಗ ಹಿರೇಮಠ ಹೇಳಿದ್ದಾರೆ.