ಮಂಡ್ಯ ಮಂಜುನಾಥ
ಕನ್ನಡಪ್ರಭ ವಾರ್ತೆ, ಮಂಡ್ಯಚಿತ್ರದುರ್ಗದಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಅಭಿನಂದನೋತ್ಸವ ಮಾದರಿಯಲ್ಲೇ ಬಿಎಸ್‌ವೈ ಹುಟ್ಟೂರು ಮಂಡ್ಯದಲ್ಲೂ ಅಭಿನಂದನೋತ್ಸವ ಕಾರ್ಯಕ್ರಮ ಆಯೋಜಿಸಲು ತವರಿನ ಬಿಜೆಪಿ ಮುಖಂಡರು ಹಾಗೂ ಅಭಿಮಾನಿಗಳು ಉತ್ಸುಕರಾಗಿದ್ದಾರೆ.
ಜೂನ್ ಕೊನೆಯ ವಾರ ಅಥವಾ ಜುಲೈ ತಿಂಗಳ ಮೊದಲ ವಾರದಲ್ಲಿ ಕಾರ್ಯಕ್ರಮ ಆಯೋಜಿಸಿ ಭಾರತೀಯ ಜನತಾಪಕ್ಷದ ರಾಷ್ಟ್ರ ಮತ್ತು ರಾಜ್ಯ ನಾಯಕರನ್ನು ಆಹ್ವಾನಿಸಿ ಅದ್ಧೂರಿಯಾಗಿ ಅಭಿನಂದನೋತ್ಸವ ಆಚರಣೆ ಮಾಡಲು ಮುಂದಾಗಿದ್ದಾರೆ. ಈ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ವಿಪಕ್ಷ ನಾಯಕ ಆರ್.ಅಶೋಕ್ ಅವರೊಂದಿಗೂ ಚರ್ಚೆ ನಡೆಸಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.ಬಿ.ಎಸ್.ಯಡಿಯೂರಪ್ಪನವರು ಕೇವಲ ಶಿವಮೊಗ್ಗ ಅಥವಾ ಚಿತ್ರದುರ್ಗಕ್ಕೆ ಸೀಮಿತರಾದವರಲ್ಲ. ಹೋರಾಟದಿಂದ ಬೆಳೆದುಬಂದ ನಾಯಕರಾಗಿರುವ ಅವರು ಇಡೀ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಅವರ ಅಭಿಮಾನಿಗಳಿದ್ದಾರೆ. ರಾಜ್ಯಾದ್ಯಂತ ಓಡಾಡಿ ಪಕ್ಷವನ್ನು ಸಂಘಟಿಸಿದ್ದಾರೆ. ಅದರಲ್ಲೂ ಮಂಡ್ಯ ಬಿ.ಎಸ್.ಯಡಿಯೂರಪ್ಪನವರ ತವರೂರು. ಅಲ್ಲಿಯೂ ಅವರ ಅಸಂಖ್ಯಾತ ಅಭಿಮಾನಿಗಳು, ಕುಟುಂಬದವರು, ಸ್ನೇಹಿತರು, ಹಿತೈಷಿಗಳಿದ್ದಾರೆ. ಮಂಡ್ಯದಲ್ಲಿ ಬಿಎಸ್‌ವೈ ಅಭಿನಂದನೋತ್ಸವ ಮಾಡುವುದರಿಂದ ಪಕ್ಷ ಮತ್ತಷ್ಟು ಸಂಘಟನೆಗೊಳ್ಳಲಿದೆ. ಹಳೇ ಮೈಸೂರು ಪ್ರದೇಶದಲ್ಲಿ ಬಿಜೆಪಿಗೆ ಇನ್ನಷ್ಟು ಶಕ್ತಿ ವೃದ್ಧಿಸಲಿದೆ ಎಂಬ ಅಭಿಪ್ರಾಯವನ್ನು ರಾಜ್ಯ ನಾಯಕರ ಮುಂದಿಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಮುಖಂಡ ಎಸ್.ಸಚ್ಚಿದಾನಂದ ಅವರು ಬಿಎಸ್‌ವೈ ಅಭಿನಂದನೋತ್ಸವ ಕಾರ್ಯಕ್ರಮ ಆಯೋಜಿಸುವ ಕುರಿತು ರಾಜ್ಯ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ. ಮಂಡ್ಯಕ್ಕೂ ರಾಷ್ಟ್ರಮಟ್ಟದ ನಾಯಕರನ್ನು ಕರೆಸಿ ಅದ್ಧೂರಿಯಾಗಿ ಅಭಿನಂದನೋತ್ಸವ ನಡೆಸೋಣ. ಇದರಿಂದ ಬಿಎಸ್‌ವೈ ೭೫ನೇ ವರ್ಷಕ್ಕೆ ತವರೂರಿನ ಅಭಿನಂದನೆಯೂ ದೊರಕಿದಂತಾಗುತ್ತದೆ ಎಂದು ಮನವರಿಕೆ ಮಾಡಿದ್ದಾರೆ ಎನ್ನಲಾಗಿದೆ.
ಈ ವಿಷಯವನ್ನು ಬಿ.ಎಸ್.ಯಡಿಯೂರಪ್ಪ ಹಾಗೂ ರಾಷ್ಟ್ರೀಯ ನಾಯಕರೊಂದಿಗೆ ಚರ್ಚಿಸಿ ವಿಷಯ ತಿಳಿಸುವುದಾಗಿ ಪಕ್ಷದ ನಾಯಕರು ತಿಳಿಸಿದ್ದಾರೆ. ಒಮ್ಮೆ ಯಡಿಯೂರಪ್ಪ ಹಾಗೂ ರಾಷ್ಟ್ರೀಯ ನಾಯಕರು ಸಮ್ಮತಿಸಿದರೆ ಮುಂಬರುವ ಜೂನ್ ಕೊನೆಯವಾರ ಅಥವಾ ಜುಲೈ ತಿಂಗಳ ಮೊದಲ ವಾರದಲ್ಲಿ ಮಂಡ್ಯದಲ್ಲಿ ಬಿಎಸ್‌ವೈ ಅಭಿನಂದನೋತ್ಸವ ಕಾರ್ಯಕ್ರಮ ಆಯೋಜನೆಗೊಳ್ಳುವುದು ನಿಶ್ಚಿತವಾಗಲಿದೆ ಎಂದು ಹೇಳಲಾಗುತ್ತಿದೆ.
ಮಂಡ್ಯ ಬಿ.ಎಸ್.ಯಡಿಯೂರಪ್ಪನವರ ತವರು ಜಿಲ್ಲೆ. ಇಲ್ಲಿಯೂ ಅವರ ಅಸಂಖ್ಯಾತ ಅಭಿಮಾನಿಗಳು, ಸ್ನೇಹಿತರು, ಹಿತೈಷಿಗಳಿದ್ದಾರೆ. ಬಿಎಸ್‌ವೈ ಅಭಿನಂದನೋತ್ಸವ ನಡೆಸಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ. ಈ ವಿಷಯವನ್ನು ರಾಜ್ಯ ನಾಯಕರೊಂದಿಗೆ ಚರ್ಚಿಸಲಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಜೂನ್ ಕೊನೆಯವಾರ ಅಥವಾ ಜುಲೈ ಮೊದಲ ವಾರದಲ್ಲಿ ಬಿಎಸ್‌ವೈ ಅಭಿನಂದನೋತ್ಸವ ಕಾರ್ಯಕ್ರಮ ಆಯೋಜಿಸಲಾಗುವುದು. ರಾಷ್ಟ್ರ ಮತ್ತು ರಾಜ್ಯ ನಾಯಕರನ್ನು ಕರೆಸಿ ಅದ್ಧೂರಿಯಾಗಿ ಆಚರಿಸಲು ಮುಂದಾಗಿದ್ದೇವೆ.- ಎಸ್.ಸಚ್ಚಿದಾನಂದ, ಮುಖಂಡರು, ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರ