ಕನ್ನಡಪ್ರಭ ವಾರ್ತೆ ಮಂಡ್ಯ

ನಗರದ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ರೆಬಲ್ ಡ್ಯಾನ್ಸ್ ಗ್ರೂಪ್ ವತಿಯಿಂದ ಚಿಣ್ಣರ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವನ್ನು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಲಕ್ಷ್ಮೀ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಬೇಸಿಗೆ ಶಿಬಿರಗಳಿಂದ ಮಕ್ಕಳನ್ನು ಟಿವಿ, ಮೊಬೈಲ್‌ಗಳಿಂದ ದೂರವಿಡಬಹುದು. ಬೇಸಿಗೆ ಶಿಬಿರದಲ್ಲಿ ನೃತ್ಯ, ಸಂಗೀತ, ಯೋಗ, ಸಾಹಸ ಕ್ರೀಡೆಗಳನ್ನು ಕಲಿಸುವುದರಿಂದ ಮಕ್ಕಳು ಸದೃಢವಾಗುವುದಲ್ಲದೆ ಎಲ್ಲರೊಡನೆ ಬೆರೆಯುವಂತಹ ಅವಕಾಶಗಳನ್ನು ಕಲ್ಪಿಸಿದಂತಾಗುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರುತಿಸುವುದಕ್ಕೂ ಉತ್ತಮ ವೇದಿಕೆ ಸಿಕ್ಕಂತಾಗುತ್ತದೆ. ಪೋಷಕರು ಮಕ್ಕಳ ಆಸಕ್ತಿಯನ್ನು ಕುಂದಿಸದೆ ಮಕ್ಕಳು ಯಾವ ಕ್ಷೇತ್ರದಲ್ಲಿ ಹೆಚ್ಚು ಆಸಕ್ತಿಯನ್ನು ವಹಿಸುವರೋ ಆ ಕ್ಷೇತ್ರದಲ್ಲಿ ಬೆಳೆಯಲು ಪೋಷಕರು ಪ್ರೋತ್ಸಾಹ ನೀಡುವಂತೆ ಸಲಹೆ ನೀಡಿದರು.

ನಂತರ ವಿದ್ಯಾರ್ಥಿಗಳು ಪ್ರದರ್ಶಿಸಿದ ವಿವಿಧ ನೃತ್ಯ ಹಾಗೂ ಯೋಗ ಸಾಹಸಕ್ಕೆ ಪ್ರೇಕ್ಷಕರು ಮನ ಸೋತರು. ಶಿಬಿರದಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಪ್ರಮಾಣ ಪತ್ರ ವಿತರಿಸಲಾಯಿತು.


ಕಾರ್ಯಕ್ರಮದಲ್ಲಿ ಡಾ.ಮನೋಹರ್, ಕನ್ನಡ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ್, ರೆಬಲ್ ಡ್ಯಾನ್ಸ್ ಗ್ರೂಪ್ ಗೌರವಾಧ್ಯಕ್ಷ ಸಿದ್ದರಾಜು, ಮುಖಂಡರಾದ ಅಭಿಜಿತ್, ಮಂಜು ಭಾಗವಹಿಸಿದ್ದರು.ಇಂದು ಮನೆಗೊಂದು ಗ್ರಂಥಾಲಯ ಅನುಷ್ಠಾನ ಸಮಾರಂಭ

ಕನ್ನಡಪ್ರಭ ವಾರ್ತೆ ಮಂಡ್ಯಜನರಲ್ಲಿ ಪುಸ್ತಕಗಳ ಓದಿನ ಲಾಭದ ಅರಿವು ಮೂಡಿಸಲು ಹಾಗೂ ಪುಸ್ತಕ ಸಂಸ್ಕೃತಿ ಹರಡಲು ಕನ್ನಡ ಪುಸ್ತಕ ಪ್ರಾಧಿಕಾರ ನಗರದ ಶಂಕರನಗರದ ಚಂದಗಾಲು ಲೇಔಟ್‌ನಲ್ಲಿ ಮೇ 13ರಂದು ಮನೆಗೊಂದು ಗ್ರಂಥಾಲಯ ಅನುಷ್ಠಾನ ಸಮಾರಂಭ ಆಯೋಜಿಸಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಕನ್ನಡ ಪುಸ್ತಕ ಪ್ರಾಧಿಕಾರ ಜಿಲ್ಲಾ ಜಾಗೃತ ಸಮಿತಿ ಆಯೋಜಿಸಿರುವ ಈ ಕಾರ್ಯಕ್ರಮ ಲೇಖಕ, ಹಿರಿಯ ಪತ್ರಕರ್ತ ಚಂದ್ರಶೇಖರ ದ.ಕೋ.ಹಳ್ಳಿ ಅವರ ನಿವಾಸದಲ್ಲಿ ನಡೆಯಲಿದೆ. ಅಂದು ಸಂಜೆ 5 ಗಂಟೆಗೆ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ಮಾನಸ ಕಾರ್ಯಕ್ರಮ ಉದ್ಘಾಟಿಸುವರು.ಜಿಲ್ಲಾ ಜಾಗೃತ ಸಮಿತಿ ಸಂಚಾಲಕ ಕಾರಸವಾಡಿ ಮಹದೇವ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಲೇಖಕಿ ಎಚ್.ಆರ್.ಕನ್ನಿಕ, ಶಿಕ್ಷಕ ಕೊತ್ತತ್ತಿ ರಾಜು ಭಾಗವಹಿಸುವರು ಎಂದು ಪ್ರಾಧಿಕಾರದ ಆಡಳಿತಾಧಿಕಾರಿ ಕೆ.ಬಿ.ಕಿರಣ್ ಸಿಂಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕನ್ನಡ ಪುಸ್ತಕ ಪ್ರಾಧಿಕಾರದ ಮಂಡ್ಯ ಜಿಲ್ಲಾ ಜಾಗೃತ ಸಮಿತಿಯ ಸದಸ್ಯರಾದ ಡಾ.ಎಂ.ಕೆಂಪಮ್ಮ, ಮಂಜು ಮುತ್ತೇಗೆರೆ, ಡಾ. ಶುಭಶ್ರೀ ಪ್ರಸಾದ್, ಚಂದ್ರಶೇಖರ ದ.ಕೋ ಹಳ್ಳಿ, ಮಂಚಶೆಟ್ಟಿ ಎಂ., ಉಮೇಶ ದಡಮಹಳ್ಳಿ, ಅನಿಲ್‌ಬಾಬು, ಶಿವಕುಮಾರ್ ಆರಾಧ್ಯ, ದೇವರಾಜು ಎಸ್.ಪಂಡಿತ್, ವಾಸು, ಕುಮಾರ್, ಜಿ.ವಿ.ದೇವರಾಜು, ಅನಿಲ್ ಕುಮಾರ್, ಸದ್ದಾಂ ತಗ್ಗಹಳ್ಳಿ ಹಾಗೂ ಪುಸ್ತಕ ಪ್ರೇಮಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.