ಸಾರಾಂಶ
- ಶೌಚಾಲಯ ದಿನ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಸಲಹೆ । ಟಾಯ್ಲೆಟ್ ನಿದ್ದೆ ಮಾಡುವಂತಿರಲಿ ಎಂದ ಡಿಸಿ- - - ಕನ್ನಡಪ್ರಭ ವಾರ್ತೆ ದಾವಣಗೆರೆ ಎಲ್ಲಿ ಶುಚಿತ್ವ ಇರೋತ್ತದೆಯೋ ಅಲ್ಲಿ ಯಾವುದೇ ಜನರಿಗೆ ಕಾಯಿಲೆಗಳು ಬಾಧಿಸುವುದಿಲ್ಲ. ಯಾರ ಮನೆಯಲ್ಲಿ ಶೌಚಾಲಯವಿಲ್ಲವೋ, ಅವರ ಮನೆಯಲ್ಲಿ ಶುಚಿತ್ವ ಇರೋದಿಲ್ಲ. ಹೆಣ್ಣುಮಕ್ಕಳ ಗೌರವ ಕಾಪಾಡುವುದಕ್ಕಾದರೂ ಮನೆಗೊಂದು ಶೌಚಾಲಯ ನಿರ್ಮಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ತುಂಗಭದ್ರಾ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ನಮ್ಮ ಶೌಚಾಲಯ, ನಮ್ಮ ಗೌರವ ಆಂದೋಲನದ ಘೋಷವಾಕ್ಯದೊಂದಿಗೆ ಆಚರಿಸಿದ ಶೌಚಾಲಯ ದಿನ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಭಾರತದಲ್ಲಿ ಆರೋಗ್ಯಕ್ಕಾಗಿ ಖರ್ಚು ಮಾಡಿದಷ್ಟು ಹಣವನ್ನು ಬೇರೆ ಯಾವುದಕ್ಕೂ ಕೂಡ ಖರ್ಚು ಮಾಡಿಲ್ಲ. ದೇಹದಲ್ಲಿ ಶೇ.55ರಷ್ಟು ಭಾಗ ನೀರು ತುಂಬಿರಬೇಕು. ಇಲ್ಲವಾದರೆ ಮನುಷ್ಯನಿಗೆ ನಿಶಕ್ತಿಯಾಗುತ್ತದೆ. ನಿಧಾನವಾಗಿ ರಕ್ತದೊತ್ತಡದಿಂದ ನಾಡಿಮಿಡಿತ ಕಡಿಮೆ ಆಗಲಿದೆ. ಇದಕ್ಕೆ ಮೂಲ ಕಾರಣವೇ ಶುಚಿತ್ವ ಎಂದರು.
ಶೌಚಾಲಯಕ್ಕೆ ಹೋದಾಗ ಆ ಸ್ಥಳ ನಿದ್ದೆ ಮಾಡುವಂತಿರಬೇಕು, ಅಷ್ಟು ಶುಚಿಯಾಗಿ ಇಟ್ಟುಕೊಳ್ಳಬೇಕು. ಶೌಚಾಲಯಕ್ಕೆ ಹೋಗಿಬಂದ ಮೇಲೆ ಸ್ವಚ್ಛವಾಗಿ ಸಾಬೂನಿಂದ ಕೈ ತೊಳೆಯಬೇಕು. ಶೌಚಾಲಯಗಳಲ್ಲಿ ಸಿಂಧೂ ನಾಗರಿಕತೆಯಿಂದ ಹಿಡಿದು ಆಧುನಿಕವಾಗಿ ಬಳಸುತ್ತಿರುವ ಶೌಚಾಲಯಗಳವರೆಗೆ ಎಲ್ಲ ರೀತಿಯ ಶೌಚಾಲಯಗಳ ಕುರಿತು ಆಮೇರಿಕಾದಲ್ಲಿ ಮ್ಯೂಸಿಯಂ ಇದೆ. ಗ್ರಾಮೀಣ ಪ್ರದೇಶಗಳಲ್ಲಿ ಬಳಸದೇ ಇರುವಂತಹ ಶೌಚಾಲಯಗಳನ್ನು ರಿಪೇರಿ ಮಾಡಿಸಿ, ಪುನಃ ಅವುಗಳನ್ನು ಬಳಸುವಂತೆ ಸೂಚಿಸಿದರು.ಮನೆಗಳಲ್ಲಿ ಶೌಚಾಲಯಗಳಿಲ್ಲದ ಜನರಿಗೆ ಊರ ಹೊರಗಿನ ಪೊದೆಗಳೇ ನಿತ್ಯ ಬಳಕೆಯ ಬಯಲು ಶೌಚಾಲಯಗಳಂತಾಗಿವೆ. ಮಲ-ಮೂತ್ರ ವಿಸರ್ಜನೆಗಳಿಗೆ ನೂರಾರು ವರ್ಷಗಳಿಂದ ಬಳಸಿದ ಜಾಗವನ್ನೇ ಬಳಸುತ್ತಿರುತ್ತಾರೆ. ಅಂಥ ಜನರಿಗೂ ಹಾಗೂ ಮತ್ತೆ ಮತ್ತೆ ಬರುವ ರೋಗಗಳಿಗೂ ಅಂಟಿದ ನಂಟು ಕಡಿಮೆ ಆಗಿಲ್ಲ ಎಂದು ಡಿಸಿ ವಿಷಾದಿಸಿದರು.
ಜಿಪಂ ಸಿಇಒ ಸುರೇಶ್.ಬಿ. ಇಟ್ನಾಳ್ ಮಾತನಾಡಿ, ಶೌಚಾಲಯ ಆರೋಗ್ಯ ನಿಭಾಯಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ನಮ್ಮ ಶೌಚಾಲಯ ನಮ್ಮ ಗೌರವ ವಿಶೇಷ ಅಭಿಯಾನದ ಅವಧಿಯಲ್ಲಿ ಜಿಲ್ಲೆಯಲ್ಲಿ ನಿರುಪಯುಕ್ತ ಸಮುದಾಯ ಶೌಚಾಲಯಗಳನ್ನು ಗುರುತಿಸಿ, ಅವುಗಳನ್ನು ಯೋಗ್ಯ ರೀತಿಯಲ್ಲಿ ಪರಿವರ್ತಿಸಲಾಗುವುದು. ಜಿಲ್ಲೆಯಲ್ಲಿ 2,52,000 ನಳ ಸಂಪರ್ಕ ಹೊಂದಿದ್ದು, ಒಟ್ಟು 2,47,000 ಶೌಚಾಲಯಗಳಿವೆ. ಶೇ.98 ರಷ್ಟು ಪ್ರತಿಶತ ಮನೆಗಳಲ್ಲಿ ಶೌಚಾಲಯಗಳಿವೆ. ಗ್ರಾಮೀಣ ಪ್ರದೇಶಗಳಲ್ಲಿ ಶೌಚಾಲಯಕ್ಕೆ ಹೆಚ್ಚು ಒತ್ತು ನೀಡಬೇಕು. ಬಯಲು ಶೌಚಾಲಯಮುಕ್ತ ಜಿಲ್ಲೆ ಮಾಡೋಣ. ಜಿಲ್ಲೆಯಲ್ಲಿ ಅತಿ ಹೆಚ್ಚು ಸ್ವಚ್ಛವಾಗಿರುವ 5 ಶೌಚಾಲಯಗಳನ್ನು ಗುರುತಿಸಿ, ಡಿ.10ರ ನಂತರ ಪ್ರಶಸ್ತಿ ನೀಡಲಾಗುವುದು. ಅಂದದ ಶೌಚಾಲಯ ಆನಂದ ಶೌಚಾಲಯವನ್ನಾಗಿ ನಿರ್ಮಿಸೋಣ ಎಂದರು.ಗ್ರಾಮೀಣ ಮಟ್ಟದ ಸ್ವಚ್ಛತಾಗಾರರನ್ನು, ಸ್ವಸಹಾಯ ಸಂಘದವರನ್ನು ಗುರುತಿಸಿ ಗೌರವಿಸಲಾಯಿತು. ಗ್ರಾಮೀಣ ಸಮುದಾಯದಲ್ಲಿ ಶೌಚಾಲಯಗಳ ಬಳಕೆಯನ್ನು ಉತ್ತೇಜನ, ವೈಯಕ್ತಿಕ ಗೃಹ ಶೌಚಾಲಯಗಳಿಗೆ ಮಂಜೂರಾತಿ ಪತ್ರಗಳನ್ನು ವಿತರಿಸಲಾಯಿತು. ಸಂಜೀವಿನಿ ಒಕ್ಕೂಟ ಮಹಿಳೆಯರಿಗೆ ಸ್ವಚ್ಛ ಸಂಚಾಲಕರಿಗೆ ಪರವಾನಿಗೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ ಎಂ. ಸಂತೋಷ್, ಜಿಪಂ ಮುಖ್ಯ ಯೋಜನಾಧಿಕಾರಿ ಮಲ್ಲನಾಯ್ಕ, ಯೋಜನಾ ನಿರ್ದೇಶಕರಾದ ರೇಷ್ಮಾ ಕೌಸರ್, ಜಿಲ್ಲಾಧಿಕಾರಿ ಕಚೇರಿಯ ಯೋಜನಾ ನಿರ್ದೇಶಕ ಮಹಾಂತೇಶ್ ಹಾಗೂ ಇತರರು ಉಪಸ್ಥಿತರಿದ್ದರು.- - - -19ಕೆಡಿವಿಜಿ45: ದಾವಣಗೆರೆಯಲ್ಲಿ ಶೌಚಾಲಯ ದಿನದ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಉದ್ಘಾಟಿಸಿದರು.