ಸಾರಾಂಶ
ಸಮೀಪದ ಬಿಷ್ಣಹಳ್ಳಿ ಕೆರೆ ಭರ್ತಿಯಾಗಿ ಕಳೆದೊಂದು ವಾರದಿಂದ ನೀರು ಹರಿದು ಬರುತ್ತಿರುವುದರಿಂದ ಚಿಕ್ಕಜೋಗಿಹಳ್ಳಿ ತಾಂಡಾ ಕೆರೆ ಭರ್ತಿಯಾಗಿ ಕೋಡಿ ಬಿದ್ದು ಹರಿಯುತ್ತಿದೆ.
ಕೂಡ್ಲಿಗಿ: ನೂತನ ಕೆರೆಯ ಕಾಮಗಾರಿ ಮುಗಿದ ಮೂರೇ ತಿಂಗಳಲ್ಲಿ ಹೊಸದಾಗಿ ಕಟ್ಟಿದ ಕೆರೆ ಕೋಡಿ ಬಿದ್ದಿದ್ದು, ಇದನ್ನು ಕಂಡು ಚಿಕ್ಕಜೋಗಿಹಳ್ಳಿ ತಾಂಡಾದ ಜನತೆ ಹರ್ಷ ವ್ಯಕ್ತಪಡಿಸಿದ್ದಾರೆ.
ಅಂದಾಜು ₹5 ಕೋಟಿ ವೆಚ್ಚದಲ್ಲಿ ತಾಲೂಕಿನ ಚಿಕ್ಕಜೋಗಿಹಳ್ಳಿ ಸಮೀಪದ ತಾಂಡಾದ ಹತ್ತಿರದಲ್ಲಿ ವರ್ಷದ ಹಿಂದೆ ನೂತನ ಕೆರೆ ನಿರ್ಮಾಣ ಕಾಮಗಾರಿಗೆ ಹಿಂದಿನ ಶಾಸಕ ಎನ್.ವೈ. ಗೋಪಾಲಕೃಷ್ಣ ಚಾಲನೆ ನೀಡಿದ್ದರು. ತ್ವರಿತವಾಗಿ ಕಾಮಗಾರಿ ಮಾಡಿದ್ದರಿಂದ ಸಂಪೂರ್ಣ ಕಾಮಗಾರಿ ಪೂರ್ಣಗೊಂಡು ಮೂರೇ ತಿಂಗಳಲ್ಲಿ ಮಳೆರಾಯನ ಕೃಪಕಟಾಕ್ಷದಿಂದ ಅಪಾರ ಪ್ರಮಾಣದ ನೀರು ಸಂಗ್ರಹವಾಗಿತ್ತು. ಸಮೀಪದ ಬಿಷ್ಣಹಳ್ಳಿ ಕೆರೆ ಭರ್ತಿಯಾಗಿ ಕಳೆದೊಂದು ವಾರದಿಂದ ನೀರು ಹರಿದು ಬರುತ್ತಿರುವುದರಿಂದ ಚಿಕ್ಕಜೋಗಿಹಳ್ಳಿ ತಾಂಡಾ ಕೆರೆ ಭರ್ತಿಯಾಗಿ ಕೋಡಿ ಬಿದ್ದು ಹರಿಯುತ್ತಿದೆ.ಕೆರೆ ನಿರ್ಮಾಣವಾಗುವ ಮೊದಲು ಕೆಳಭಾಗದಲ್ಲಿ ಬೃಹತ್ ಚೆಕ್ ಡ್ಯಾಂ ನಿರ್ಮಿಸಲಾಗಿತ್ತು. ಅದೂ ಇತ್ತೀಚೆಗೆ ಮಳೆಗೆ ತುಂಬಿತ್ತು. ಆದರೆ, ಕೆರೆತುಂಬಿ ಕೋಡಿ ಬಿದ್ದ ಪರಿಣಾಮ ಅಪಾರ ನೀರು ಚೆಕ್ ಡ್ಯಾಂಗೆ ಹರಿದು ಬಂದಿದ್ದರಿಂದ ಇತ್ತೀಚೆಗೆ ಚೆಕ್ ಡ್ಯಾಂ ಕೊಚ್ಚಿ ಹೋಗಿದೆ. ಚೆಕ್ ಡ್ಯಾಂನಲ್ಲಿ ಸಂಗ್ರಹವಾಗಿದ್ದ ಅಪಾರ ಪ್ರಮಾಣದ ನೀರು ವ್ಯರ್ಥವಾಗಿದೆ.
ಸಂತಸ, ಸಂಕಟಚಿಕ್ಕಜೋಗಿಹಳ್ಳಿ ತಾಂಡಾದ ಜನತೆ ಒಂದು ಕಡೆ ನೂತನ ಕೆರೆ ಕೋಡಿ ಬಿದ್ದ ಸಂತಸದಲ್ಲಿದ್ದರೆ ಇನ್ನೊಂದೆಡೆ ಇಷ್ಟು ವರ್ಷ ಕೆರೆಯಂತೆ ಆಸರೆಯಾಗಿದ್ದ ಚೆಕ್ ಡ್ಯಾo ಒಡೆದು ಹೋಗಿರುವ ಬಗ್ಗೆ ಬೇಸರ ಮೂಡಿದೆ ಎನ್ನುತ್ತಾರೆ ಅಲ್ಲಿನ ಜನ. ಒಡೆದ ಚೆಕ್ ಡ್ಯಾo ದುರಸ್ತಿಗೊಳಿಸುವಂತೆ ಮನವಿ ಮಾಡಿದ್ದಾರೆ.