ಸಾರಾಂಶ
ಬಿಪಿಎಲ್ ಕಾರ್ಡ್ ಸವಲತ್ತು ಅರ್ಹರಿಗೆ ಮಾತ್ರ ತಲುಪಬೇಕು ಎಂಬ ಕಾರಣಕ್ಕೆ ಜಿಲ್ಲೆಯಲ್ಲಿ 9,209 ಬಿಪಿಎಲ್ ಕಾರ್ಡ್ ರದ್ದುಪಡಿಸಲಾಗಿದೆ.
ಅಗತ್ಯ ದಾಖಲೆ ನೀಡಿ ಪುನಃ ಕಾರ್ಡ್ ಪಡೆಯಲು ಅರ್ಹರಿಗೆ ಅವಕಾಶ-ಇಲಾಖೆ
ಕನ್ನಡಪ್ರಭ ವಾರ್ತೆ ಕೊಪ್ಪಳ
ಬಿಪಿಎಲ್ ಕಾರ್ಡ್ ಸವಲತ್ತು ಅರ್ಹರಿಗೆ ಮಾತ್ರ ತಲುಪಬೇಕು ಎಂಬ ಕಾರಣಕ್ಕೆ ಜಿಲ್ಲೆಯಲ್ಲಿ 9,209 ಬಿಪಿಎಲ್ ಕಾರ್ಡ್ ರದ್ದುಪಡಿಸಲಾಗಿದೆ.ರಾಜ್ಯಾದ್ಯಂತ ಬಿಪಿಎಲ್ ಕಾರ್ಡ್ ರದ್ದಾಗುತ್ತಿರುವ ಹಿನ್ನೆಲೆ ಜಿಲ್ಲೆಯಲ್ಲಿ ಸಹ ಬಿಪಿಎಲ್ ಕಾರ್ಡ್ ರದ್ದಾಗಿ, ಎಪಿಎಲ್ ಕಾರ್ಡಿಗೆ ವರ್ಗಾವಣೆ ಆಗಿವೆ. ₹1.2 ಲಕ್ಷ ಆದಾಯ ಹೊಂದಿರುವ ಕುಟುಂಬ, ಸರ್ಕಾರಿ ನೌಕರರಿರುವ ಕುಟುಂಬ, ಆದಾಯ ತೆರಿಗೆ ಕಟ್ಟುತ್ತಿರುವ ಕುಟುಂಬಗಳ ಬಿಪಿಎಲ್ ಕಾರ್ಡ್ ರದ್ದಾಗಿವೆ.
ಜಿಲ್ಲೆಯಲ್ಲಿ ಪ್ರತಿ ತಿಂಗಳು 60 ಸಾವಿರ ಮೆಟ್ರಿಕ್ ಟನ್ ಆಹಾರ ಧಾನ್ಯ ವಿತರಣೆ ಮಾಡಲಾಗುತ್ತಿದೆ. ಪಡಿತರ ಚೀಟಿಗೆ ಮೊಬೈಲ್ ಸಂಖ್ಯೆ, ಪಾನ್ ಕಾರ್ಡ್ ಲಿಂಕ್ ಆಗಿರುವ ಹಿನ್ನೆಲೆ ಸರ್ಕಾರ ಕುಟುಂಬ ತಂತ್ರಾಂಶದಲ್ಲಿ ಕುಟುಂಬದ ವರಮಾನ ಮಾಹಿತಿ ಸಿಗುತ್ತದೆ. ಕಾರ್ಡ್ ರದ್ದಾಗಿದ್ದಕ್ಕೆ ತಕರಾರು ಇದ್ದರೆ ಅಗತ್ಯ ದಾಖಲೆ ನೀಡಿ ಪುನಃ ಪಡೆಯಬಹುದಾಗಿದೆ ಎಂದು ಕೊಪ್ಪಳ ಜಿಲ್ಲೆಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಮಾಹಿತಿ ನೀಡಿದೆ.ದಾಖಲೆ ಹೊಂದಿಸಲು ಪರದಾಟ: ಈಗ ಅನ್ನಭಾಗ್ಯ ಯೋಜನೆಯ ಪಡಿತರ ಚೀಟಿದಾರರ ಪರಿಷ್ಕರಣೆ ಆರಂಭವಾಗಿದೆ. ಈಗ ಅಕ್ಕಿ ತೆಗೆದುಕೊಳ್ಳಲು ಬರುವ ಫಲಾನುಭವಿಗಳು ದಾಖಲೆ ನೀಡಬೇಕಾಗಿದೆ. ಇದರಿಂದಾಗಿ ಹಲವರು ದಾಖಲೆ ಹೊಂದಿಸಲು ಪರದಾಡುವಂತಾಗಿದೆ.ಬಿಪಿಎಲ್ ಪಡಿತರ ಚೀಟಿದಾರರ ಕುಟುಂಬದ ಪ್ರತಿ ಸದಸ್ಯರಿಗೆ 10 ಕೆಜಿ ಆಹಾರ ಧಾನ್ಯ ನೀಡುವ ಗ್ಯಾರಂಟಿ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದೆ. ಈಗ 5 ಕೆಜಿಯಲ್ಲಿ ಮೂರು ಕೆಜಿ ಅಕ್ಕಿ ಹಾಗೂ 2 ಕೆಜಿ ಜೋಳ ನೀಡುತ್ತಿದೆ. ಜಿಲ್ಲೆಯಲ್ಲಿ 445 ನ್ಯಾಯಬೆಲೆ ಅಂಗಡಿಯಲ್ಲಿ ಮಾಲೀಕರು ಪಡಿತರ ಚೀಟಿದಾರರಿಂದ ಮಾಹಿತಿ ಸಂಗ್ರಹಿಸಲು ಆರಂಭಿಸಿದೆ. ಪ್ರತಿ ಪಡಿತರ ಕಾರ್ಡುದಾರ ಆಧಾರ್ ಕಾರ್ಡ್, ಆದಾಯ ಪ್ರಮಾಣಪತ್ರ, ರೇಷನ್ ಕಾರ್ಡ್ ಝರಾಕ್ಸ್ ಪ್ರತಿ ನೀಡಲು ಸೂಚನೆ ನೀಡಲಾಗಿದೆ. ಇದರಿಂದಾಗಿ ಮಂಗಳವಾರ ಮುಂಜಾನೆ ಪಡಿತರ ಪಡೆಯಲು ಬಂದವರಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ.