ಸಮರ್ಥ ಶಿಕ್ಷಕರಿಂದ ಮೌಲ್ಯಾಧಾರಿತ ಸಮಾಜ ನಿರ್ಮಾಣ ಸಾಧ್ಯ

| Published : Sep 21 2024, 01:47 AM IST

ಸಾರಾಂಶ

ತುಮಕೂರು: ಶಿಕ್ಷಣವೇ ರಾಷ್ಟ್ರದ ಶಕ್ತಿ , ಸರ್ವ ಸಮಸ್ಯೆಗಳಿಗೆ ರಾಮಬಾಣ. ಶಿಕ್ಷಣದ ಸಂವಾಹಕನಾದ ಶಿಕ್ಷಕನು ಕಲಿಕೆಯಲ್ಲಿ ಆಸಕ್ತವಾದರಷ್ಟೇ ಕಲಿಸಲು ಸಮರ್ಥನಾಗುತ್ತಾನೆ. ಶಿಕ್ಷಕನಿಗೆ ಸಾಮಾಜಿಕ ಹೊಣೆಗಾರಿಕೆ ಇದೆ. ಮೌಲ್ಯಾಧಾರಿತ ಸಮಾಜ ನಿರ್ಮಾಣವು ಸಮರ್ಥ ಶಿಕ್ಷಕರಿಂದಷ್ಟೇ ಸಾಧ್ಯಎಂದು ತುಮಕೂರಿನ ರಾಮಕೃಷ್ಣ-ವಿವೇಕಾನಂದ ಆಶ್ರಮದ ಮುಖ್ಯಸ್ಥ ಸ್ವಾಮಿ ವೀರೇಶಾನಂದ ಸರಸ್ವತೀ ಅಭಿಪ್ರಾಯಪಟ್ಟರು.

ತುಮಕೂರು: ಶಿಕ್ಷಣವೇ ರಾಷ್ಟ್ರದ ಶಕ್ತಿ , ಸರ್ವ ಸಮಸ್ಯೆಗಳಿಗೆ ರಾಮಬಾಣ. ಶಿಕ್ಷಣದ ಸಂವಾಹಕನಾದ ಶಿಕ್ಷಕನು ಕಲಿಕೆಯಲ್ಲಿ ಆಸಕ್ತವಾದರಷ್ಟೇ ಕಲಿಸಲು ಸಮರ್ಥನಾಗುತ್ತಾನೆ. ಶಿಕ್ಷಕನಿಗೆ ಸಾಮಾಜಿಕ ಹೊಣೆಗಾರಿಕೆ ಇದೆ. ಮೌಲ್ಯಾಧಾರಿತ ಸಮಾಜ ನಿರ್ಮಾಣವು ಸಮರ್ಥ ಶಿಕ್ಷಕರಿಂದಷ್ಟೇ ಸಾಧ್ಯಎಂದು ತುಮಕೂರಿನ ರಾಮಕೃಷ್ಣ-ವಿವೇಕಾನಂದ ಆಶ್ರಮದ ಮುಖ್ಯಸ್ಥ ಸ್ವಾಮಿ ವೀರೇಶಾನಂದ ಸರಸ್ವತೀ ಅಭಿಪ್ರಾಯಪಟ್ಟರು.

ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಆಯೋಜಿಸಿದ್ದ ಶೈಕ್ಷಣಿಕ ಪುನಶ್ಚೇತನ ಹಾಗೂ ವಿವೇಕಧಾರಾ ಕೃತಿಯ ಲೋಕಾರ್ಪಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ದಿಕ್ಸೂಚಿ ಭಾಷಣ ಮಾಡಿದರು.

ಶಿಕ್ಷಕನೊಬ್ಬ ಸಪ್ತರ್ಷಿ. ಬಾಳೆಂಬ ಬೆಳಕಿನ ಕಿರಣದಲ್ಲಿ ಏಳು ಬಣ್ಣಗಳಿರುವಂತೆ ಶಿಕ್ಷಕನ ವ್ಯಕ್ತಿತ್ವದಲ್ಲಿ ಸಪ್ತ ಆಯಾಮಗಳಿವೆ. ಅವನು ವಿದ್ಯಾರ್ಥಿಗಳ ಭವಿಷ್ಯ ಜೀವನಕ್ಕೆ ಭದ್ರಬುನಾದಿ ಹಾಕುವುದರಿಂದ ಅವನೊಬ್ಬ ಪ್ರವಾದಿ ಎಂದು ಬಣ್ಣಿಸಿದರು.

ಭವಿಷ್ಯದಲ್ಲಿ ಅನಾವರಣಗೊಳ್ಳುತ್ತಿರುವ ವ್ಯಕ್ತಿತ್ವದ ಅಮೂಲ್ಯ ಮಣ್ಣಿನೊಂದಿಗೆ ಅವನು ಕಾರ್ಯನಿರ್ವಹಿಸುವುದರಿಂದ ಅವನೊಬ್ಬ ಕಲಾಕಾರ. ನಾಗರಿಕತೆಯ ಉನ್ನತ ಹಾಗೂ ಸೂಕ್ಷ್ಮ ವಿಚಾರಗಳೊಂದಿಗೆ ವ್ಯವಹರಿಸುವುದರಿಂದ ಅವನೊಬ್ಬ ನಿರ್ಮಾತೃ ಎಂದರು.

ವಿದ್ಯಾರ್ಥಿಗಳ ನಂಬಿಕೆ ಮತ್ತು ಭಕ್ತಿಗೆ ಸ್ಪಂದಿಸುವುದರಿಂದ ಅವನೊಬ್ಬ ಸ್ನೇಹಿತ. ಸಮಾಜವು ಶಿಕ್ಷಕನಿಗೆ ಸಮಾಜ ನಿರ್ಮಾಣ ಮತ್ತು ಅಭಿವೃದ್ಧಿಗೆ ಆಯ್ಕೆ ಮಾಡಿ ಪರವಾನಗಿ ನೀಡುರುವುದರಿಂದ ಅವನೊಬ್ಬ ನಾಗರಿಕ. ಇತರರಿಗೆ ಕಷ್ಟ ಸಾಧ್ಯ ಎನ್ನಿಸುವುದನ್ನೇ ಆಯ್ಕೆ ಮಾಡಿಕೊಂಡು ಶಿಕ್ಷಕನು ಗೆಲುವು ಸಾಧಿಸುತ್ತಾನೆ ಆದ್ದರಿಂದ ಅವನೊಬ್ಬ ಪ್ರವರ್ತಕ ಎಂದು ಹೇಳಿದರು.

ಅಂತಿಮವಾಗಿ ಜನಾಂಗದ ಸುಧಾರಣೆಯ ಪ್ರಕ್ರಿಯೆಯಲ್ಲಿ ಇತರರೆಲ್ಲರಿಗಿಂತಲೂ ಅಧಿಕ ನಂಬಿಕೆ ಶಿಕ್ಷಕನಿಗೇ ಇರುವುದರಿಂದ ಅವನೊಬ್ಬ ನಂಬಿಕಸ್ಥ. ಇದನ್ನೆಲ್ಲ ಶಿಕ್ಷಕನು ಮರೆತಿರುವುದರಿಂದ ಅಥವಾ ನಿರ್ಲಕ್ಷಿಸಿರುವುದರಿಂದ ಅವನಿಂದು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದಾನೆ ಎಂದು ತಿಳಿಸಿದರು.

ಸಮಾರಂಭ ಉದ್ಘಾಟಿಸಿ ಮಾತನಾಡಿದ ಸಹಕಾರ ಸಚಿವ ಕೆ.ಎನ್.ರಾಜಣ್ಣ ಮಾತನಾಡಿ, ‘ಇಪ್ಪತ್ತೆೈದು ವರ್ಷಗಳಿಂದ ಸ್ವಾಮೀಜಿಯವರನ್ನು ಬಹಳ ಹತ್ತಿರದಿಂದ ಬಲ್ಲೆ. ಅವರ ಮಾತು-ಕೃತಿಗಳಲ್ಲಿ ಸ್ಪಷ್ಟತೆ, ಸಮಾಜಸೇವೆಯಲ್ಲಿ ಅವರ ಬದ್ಧತೆ ಮತ್ತು ನಿಖರತೆಗಳು ನನ್ನ ಮನಸ್ಸಿಗೆ ತೃಪ್ತಿತಂದಿದೆ. ಅವರ ವಿಚಾರಗಳು ನಮ್ಮ ಶಿಕ್ಷಕರ ಹಾಗೂ ಸಮಾಜದ ಹಿತಚಿಂತಕರಿಗೆ ಮುಟ್ಟುವಂತಾಗಬೇಕೆಂಬ ಆಶಯ ನನ್ನದು ಎಂದು ಹೇಳಿದರು.

ಉಪನಿರ್ದೇಶಕರಾದ ಗಿರಿಜಾರವರು ಸ್ವಾಮಿ ವೀರೇಶಾನಂದರ ‘ವಿವೇಕಧಾರಾ’ ಕೃತಿಯನ್ನು ಲೋಕಾರ್ಪಣೆಗೈದರು.

ಕಾರ್ಯಕ್ರಮದಲ್ಲಿ ಶಿಕ್ಷಣಾಧಿಕಾರಿ ರಾಜಣ್ಣ, ಆಂಜನಪ್ಪ, ಸಂಪನ್ಮೂಲ ವ್ಯಕ್ತಿಗಳಾದ ಚಂದ್ರಶೇಖರ್ ಮತ್ತು ಡಾ.ಪ್ರಸನ್ನಕುಮಾರ್ ಉಪಸ್ಥಿತರಿದ್ದರು.

ಕೊರಟಗೆರೆ, ಮಧುಗಿರಿ, ಶಿರಾ ಮತ್ತು ಪಾವಗಡ ತಾಲೂಕುಗಳ ಪ್ರೌಢಶಾಲಾ ಶಿಕ್ಷಕರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.