ಸಾರಾಂಶ
ಇಂದರಪಾಷ ಚಿಂಚರಕಿ
ಕನ್ನಡಪ್ರಭ ವಾರ್ತೆ ಮಸ್ಕಿಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕ (ಹೈದ್ರಾಬಾದ್-ಕರ್ನಾಟಕ ವಿಮೋಚನಾ ದಿನಾಚರಣೆ) ಉತ್ಸವ ದಿನಾಚರಣೆಯಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯಲಿರುವ ಎರಡನೇ ಸಚಿವ ಸಂಪುಟದ ಸಭೆಯಲ್ಲಿ ಮಸ್ಕಿ ತಾಲೂಕಿಗೆ ಬಂಪರ್ ಕೊಡುಗೆ ನಿರೀಕ್ಷೆಯಿದೆ. ಹತ್ತು ವರ್ಷಗಳ ಬಳಿಕ ಈ ಭಾಗದಲ್ಲಿ ನಡೆಯುತ್ತಿರುವ ಕ್ಯಾಬಿನೆಟ್ ಸಭೆಯಲ್ಲಿ ಮಸ್ಕಿ ತಾಲೂಕಿಗೆ ಪೂರ್ಣ ಪ್ರಮಾಣದ ಕಚೇರಿಗಳ ಆರಂಭ, ಕೆರೆ ತುಂಬಿಸುವ ಹಾಗೂ ನೀರಾವರಿ ಯೋಜನೆಗಳಿಗೆ ಆರಂಭಕ್ಕೆ ಗ್ರೀನ್ ಸಿಗ್ನಲ್ ಸಿಗುವ ಲಕ್ಷಣಗಳು ಹೆಚ್ಚಾಗಿವೆ.
ಪೂರ್ಣ ಪ್ರಮಾಣದ ಕಚೇರಿಗಳ ಆರಂಭಕ್ಕೆ ಶಾಸಕರ ಪತ್ರ:ಮಸ್ಕಿ ತಾಲೂಕು ಕೇಂದ್ರವಾಗಿ 7 ವರ್ಷ ಕಳೆದರು ಇವರೆಗೆ ಬರೀ ತಹಸೀಲ್ದಾರ್ ಕಚೇರಿ ಹಾಗೂ ತಾಪಂ ಕಚೇರಿಗಳು ಮಾತ್ರ ಕಾರ್ಯನಿರ್ವಹಿಸುತ್ತವೆ. ಆದರೆ ಇನ್ನುಳಿದ ಕಚೇರಿಗಳು ಆಯಾ ತಾಲೂಕುಗಳಲ್ಲಿಯೇ ಇರುವುದರಿಂದ ಕ್ಷೇತ್ರದ ಜನರಿಗೆ ಸಾಕಷ್ಟು ತೊಂದರೆಯಾಗುತ್ತಿದ್ದು ಆದ್ದರಿಂದ ಮಸ್ಕಿಗೆ ಪೂರ್ಣ ಪ್ರಮಾಣದ ತಾಲೂಕು ಕಚೇರಿ ಆರಂಭಕ್ಕೆ ಸಚಿವ ಸಂಪುಟ ನಿರ್ಣಯ ತೆಗೆದುಕೊಳ್ಳಬೇಕು ಎಂದು ಶಾಸಕ ಹಾಗೂ ಖಾದಿ ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಆರ್.ಬಸನಗೌಡ ತುರುವಿಹಾಳ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಈಗಲಾದರೂ ಸರ್ಕಾರ ಪೂರ್ಣ ಪ್ರಮಾಣದ ಕಚೇರಿಗಳ ಆರಂಭಕ್ಕೆ ಅಂಕಿತ ಸಿಗುತ್ತಾ ಕಾದುನೋಡಬೇಕಿದೆ.
ಕನಕನಾಲಾ, ನವಲಿ ಜಲಾಶಯ ಅನುಷ್ಠಾನಕ್ಕೆ ಮನವಿ:ಮಸ್ಕಿ ತಾಲೂಕಿನ ಪ್ರಮುಖ ನೀರಾವರಿ ಯೋಜನೆಗಳಲ್ಲಿ ಒಂದಾದ ಕನಕನಾಲ ಯೋಜನೆಗೆ ನೀರು ತುಂಬಿಸುವ ಯೋಜನೆ ಅನುಷ್ಠಾನಕ್ಕೆ ಸಚಿವ ಸಂಪುಟದಲ್ಲಿ ಅನುಮೋದನೆ ಹಾಗೂ ರಾಯಚೂರು ಕೊಪ್ಪಳ ಜಿಲ್ಲೆಗಳ ರೈತರ ಜೀವನಾಡಿ ಯೋಜನೆಯಾದ ನವಲಿ ಜಲಾಶಯ ಯೋಜನೆಗಳ ಶೀಘ್ರ ನಿರ್ಮಾಣಕ್ಕೆ ಸಂಪುಟ ತೀರ್ಮಾನ ಕೈಗೊಳ್ಳಬೇಕು ಎಂದು ಕೋರಿದ್ದಾರೆ. ಮಸ್ಕಿ ತಾಲೂಕಿನ ಸಮಗ್ರ ರಸ್ತೆಗಳ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಪ್ರಕಟಿಸಬೇಕು. ಮಸ್ಕಿ ತಾಲೂಕು ಕೇಂದ್ರದಲ್ಲಿರುವ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣ ಮೇಲ್ದರ್ಜೆಗೆ ಏರಿಸಲು ಅನುಧಾನ ನೀಡುವಂತೆ ಮನವಿ ಮಾಡಿದ್ದಾರೆ.
ಮಸ್ಕಿ ತಾಲೂಕಿಗೆ ಪೂರ್ಣ ಪ್ರಮಾಣದ ಕಚೇರಿಗಳು ಆರಂಭ ಹಾಗೂ ಕೆರೆ ತುಂಬಿಸುವ ಕನಕನಾಲಾ ಯೋಜನೆ ಅನುಷ್ಠಾನ ಹಾಗೂ ರೈತರ ಜೀವನಾಡಿ ನವಲಿ ಜಲಾಶಯ ನಿರ್ಮಾಣಕ್ಕೆ ಅನುಮೋದನೆ ಸೇರಿದಂತೆ ಮಸ್ಕಿ ತಾಲೂಕು ಅಭಿವೃದ್ಧಿಗಾಗಿ ಹೆಚ್ಚಿನ ಅನುಧಾನ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಲಾಗುವುದು.ಆರ್.ಬಸನಗೌಡ ತುರ್ವಿಹಾಳ, ಮಸ್ಕಿ ಶಾಸಕ