ಸಾರಾಂಶ
ಕೆಆರ್‌ಎಸ್ ಪಕ್ಷದಿಂದ ಇಲ್ಲಿನ ಬಸ್ ನಿಲ್ದಾಣಕ್ಕೆ ಮುತ್ತಿಗೆ ಹಾಕಿ, ಇಲ್ಲಿನ ಅವ್ಯವಸ್ಥೆ ಸರಿಪಡಿಸುವಂತೆ ಆಗ್ರಹಿಸಲಾಯಿತು.
ಗೋಕರ್ಣ: ಕೆಆರ್‌ಎಸ್ ಪಕ್ಷದಿಂದ ಇಲ್ಲಿನ ಬಸ್ ನಿಲ್ದಾಣಕ್ಕೆ ಮುತ್ತಿಗೆ ಹಾಕಿ, ಇಲ್ಲಿನ ಅವ್ಯವಸ್ಥೆ ಸರಿಪಡಿಸುವಂತೆ ಆಗ್ರಹಿಸಲಾಯಿತು.
ಕಳೆದ ಕೆಲವು ದಿನಗಳಿಂದ ಬಸ್ ನಿಲ್ದಾಣದಲ್ಲಿ ಅನಗತ್ಯ ಹಂಪ್ ಅಳವಡಿಸಿದ್ದು, ಇದರಿಂದ ಬೈಕ್ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಇಂತಹ ಹಂಪ್‌ಗಳನ್ನು ತಕ್ಷಣ ತೆರವುಗೊಳಿಸುವಂತೆ ಆಗ್ರಹಿಸಿದರು.ಪ್ರವೇಶ ದ್ವಾರದಲ್ಲಿ ಕಬ್ಬಿಣದ ಗೇಟ್ ತುಂಡಾಗಿ ಬಿದ್ದಿದ್ದು, ಜನರಿಗೆ ತೊಂದರೆಯಾಗುತ್ತಿರುವುದನ್ನು ವಿವರಿಸಿ ತೀವ್ರ ತರಾಟೆಗೆ ತೆಗೆದುಕೊಂಡರು.
ಇಲ್ಲಿರುವ ಶೌಚಾಲಯಕ್ಕೆ ತೆರಳಿ ದುಪಟ್ಟು ಹಣ ಪಡೆಯುವುದನ್ನು ಸ್ವತಃ ತಿಳಿದ ಸಂಘಟನೆಯವರು ಶೌಚಾಲಯ ನಿರ್ವಹಿಸುವುದರಿಂದ ದರ ಪಟ್ಟಿ ಇಲ್ಲ. ಶೌಚಾಲಯ ಟೆಂಡರ್ ಪಡೆದ ಮೂಲ ವ್ಯಕ್ತಿಯನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಹಣ ಸುಲಿಗೆ ಮಾಡುತ್ತಿರುವುದರ ಬಗ್ಗೆ ತಿಳಿಸಿ, ಮೂತ್ರ ವಿಸರ್ಜನೆಗೆ ಹಣ ಪಡೆಯಬಾರದು. ಸ್ನಾನ ಶೌಚಕ್ಕೆ ನಿಗದಿ ₹10, ₹20 ಮಾತ್ರ ತೆಗೆದುಕೊಳ್ಳಬೇಕು. ಹೀಗೆ ಮುಂದುವರಿದರೆ ಬೀಗ ಹಾಕಿ ಪ್ರತಿಭಟಿಸುವ ಎಚ್ಚರಿಕೆ ನೀಡಿದರು.ಈ ವೇಳೆ ತಾಲೂಕಾಧ್ಯಕ್ಷ ರವಿ ಹೊಸ್ಕಟ್ಟಾ, ಉಪಾಧ್ಯಕ್ಷ ವೆಂಕಟೇಶ ಕೊಡಿಯಾ, ಸಂಘಟನಾ ಕಾರ್ಯದರ್ಶಿ ರಾಘು ಗೌಡ, ಪಕ್ಷದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಶುದ್ಧ ಕುಡಿಯುವ ನೀರು ಇಲ್ಲದಿರುವುದು, ಶೌಚಾಲಯದಲ್ಲಿ ಅಧಿಕ ಹಣ ಪಡೆಯುವುದು, ಅನಗತ್ಯ ಹಂಪ್ ತೆರವು ಮಾಡುವುದು ಸೇರಿದಂತೆ ಸಮಸ್ಯೆಯ ಸರಮಾಲೆ ತಿಳಿಸಿ, ಪ್ರವಾಸಿ ತಾಣದ ಬಸ್ ನಿಲ್ದಾಣ ಸರಿಪಡಿಸುವಂತೆ ಆಗ್ರಹಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿ ಸರಿಪಡಿಸುವ ಭರವಸೆ ನೀಡಿದ್ದಾರೆ.