ಮೊದಲೇ ಒಬ್ಬ ಪ್ರಯಾಣಿಕನಿಗೆ ವಿತರಿಸಿದ್ದ ಟಿಕೆಟ್‌ ಪಡೆದು ಮತ್ತೊಬ್ಬ ಪ್ರಯಾಣಿಕನಿಗೆ ಮರು ವಿತರಿಸಿ ಹಣ ಪಡೆಯುವ ನಿರ್ವಾಹಕನ ಕೃತ್ಯ ‘ಕಳ್ಳತನ’ವಾಗಲಿದೆ ಎಂದು ಹೈಕೋರ್ಟ್‌ ಆದೇಶಿಸಿದೆ.

ವೆಂಕಟೇಶ್ ಕಲಿಪಿ

 ಬೆಂಗಳೂರು : ಮೊದಲೇ ಒಬ್ಬ ಪ್ರಯಾಣಿಕನಿಗೆ ವಿತರಿಸಿದ್ದ ಟಿಕೆಟ್‌ ಪಡೆದು ಮತ್ತೊಬ್ಬ ಪ್ರಯಾಣಿಕನಿಗೆ ಮರು ವಿತರಿಸಿ ಹಣ ಪಡೆಯುವ ನಿರ್ವಾಹಕನ ಕೃತ್ಯ ‘ಕಳ್ಳತನ’ವಾಗಲಿದೆ ಎಂದು ಹೈಕೋರ್ಟ್‌ ಆದೇಶಿಸಿದೆ.

ಮೊದಲೆ ವಿತರಿಸಿದ್ದ ಟಿಕೆಟ್‌ಗಳನ್ನು ವಾಪಾಸ್‌ ಪಡೆದು ಮತ್ತೇ ಐವರು ಪ್ರಯಾಣಿಕರಿಗೆ ವಿತರಿಸಿ 18 ರು. ಪಡೆದು ಜೇಬಿಗಿಳಿಸಿದ್ದ ನಿರ್ವಾಹಕನ ಎರಡು ವೇತನ ಹೆಚ್ಚಳವನ್ನು ತಡೆಹಿಡಿಯುವ ಮೂಲಕ ಬಿಎಂಟಿಸಿ ವಿಧಿಸಿದ್ದ ಶಿಕ್ಷೆಯನ್ನು ಎತ್ತಿ ಹಿಡಿದಿದೆ.

ಪ್ರಕರಣ ಸಂಬಂಧ ನಾರಾಯಣ ಎಂಬ ನಿರ್ವಾಹಕನ ಎರಡು ವೇತನ ಹೆಚ್ಚಳವನ್ನು ತಡೆಹಿಡಿದ್ದ ತನ್ನ ಕ್ರಮವನ್ನು ರದ್ದುಪಡಿಸಿದ್ದ ಕೈಗಾರಿಕಾ ನ್ಯಾಯಾಲಯ ಆದೇಶ ಪ್ರಶ್ನಿಸಿ ಬಿಎಂಟಿಸಿ ಕೇಂದ್ರ ಕಚೇರಿಯ ಮುಖ್ಯ ಸಂಚಾರ ವ್ಯವಸ್ಥಾಪಕರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಮೇಲ್ಮನವಿ ಪುರಸ್ಕರಿಸಿದ ನ್ಯಾಯಮೂರ್ತಿ ಎಂ.ಜೋತಿ ಅವರ ಪೀಠ ಈ ಆದೇಶ ಮಾಡಿದೆ.

ಕಳ್ಳತನ ದುಷ್ಕೃತ್ಯ (ದುರ್ನಡತೆ) ಸಾಬೀತಾದರೂ, ಕೈಗಾರಿಕಾ ನ್ಯಾಯಾಲಯ ಕೈಗಾರಿಕಾ ವ್ಯಾಜ್ಯ ಕಾಯ್ದೆ-1947ರ ಸೆಕ್ಷನ್‌ 11-ಎ ಅಡಿಯಲ್ಲಿ ತನಗೆ ಲಭ್ಯವಿರುವ ವಿವೇಚನಾಧಿಕಾರವನ್ನು ಬಳಸಿ ನಾರಾಯಣಗೆ ಬಿಎಂಟಿಸಿ ವಿಧಿಸಿದ ಶಿಕ್ಷೆಯನ್ನು ರದ್ದುಪಡಿಸುವ ಮೂಲಕ ಉದಾರತೆಯಿಂದ ನಡೆದುಕೊಂಡಿದೆ. ಇದು ಕಾನೂನಿನಡಿ ಸಮರ್ಥನೀಯವಲ್ಲ ಎಂದು ಪೀಠ ಹೇಳಿದೆ.

ಶಿಸ್ತು ಪ್ರಾಧಿಕಾರ ವಿಧಿಸಿದ ದಂಡನೆಯು ಅಘಾತಕಾರಿ ಪ್ರಮಾಣದಲ್ಲಿದೆ ಎನ್ನುವ ಪರಿಸ್ಥಿತಿಯಲ್ಲಿ ಮಾತ್ರ ನ್ಯಾಯಮಂಡಳಿ ಪ್ರತ್ಯೇಕವಾದ ನಿಲುವು ತೆಗೆದುಕೊಳ್ಳಬಹುದು. ನಾರಾಯಣಗೆ ಶಿಸ್ತು ಪ್ರಾಧಿಕಾರ ವಿಧಿಸಿರುವುದೇ ಸಣ್ಣ ಪ್ರಮಾಣದ ಶಿಕ್ಷೆ. ಆದರೆ, ಕಳ್ಳತನದ ದುಷ್ಕೃತ್ಯವನ್ನು ಕ್ಷಮಿಸಿರುವ ನ್ಯಾಯಮಂಡಳಿಯ ಕ್ರಮ ವಿವೇಚನಾ ಅಧಿಕಾರದ ಅನುಮತಿಸುವ ಮಿತಿಯನ್ನು ಮೀರುವಂತಿದೆ. ಕಳ್ಳತನದ ದುಷ್ಕೃತ್ಯದ ಗಂಭೀರತೆಯು ನೌಕರನನ್ನು ವಜಾಗೊಳಿಸುವುದನ್ನೇ ಸಮರ್ಥಿಸುತ್ತದೆ. ಹಾಗಾಗಿದ್ದಾಗ ಕಳ್ಳತನದ ಸಾಬೀತಾದ ಆರೋಪಕ್ಕೆ ದಂಡವನ್ನು ಕಡಿಮೆ ಮಾಡಲು ನ್ಯಾಯಮಂಡಳಿಗೆ ಯಾವುದೇ ಅಧಿಕಾರವಿರಲಿಲ್ಲ ಎಂದು ಪೀಠ ಕಟುವಾಗಿ ನುಡಿದಿದೆ.

2013ರ ಜು.2ರಂದು ನ್ಯಾಯಮಂಡಳಿ ಹೊರಡಿಸಿರುವ ರದ್ದುಪಡಿಸಲಾಗುತ್ತಿದೆ. ನಾರಾಯಣಗೆ ಬಿಎಂಟಿಸಿ ಶಿಸ್ತು ಪ್ರಾಧಿಕಾರ ವಿಧಿಸಿರುವ ಶಿಕ್ಷೆಯನ್ನು ಕಾಯಂಗೊಳಿಸಲಾಗುತ್ತಿದೆ ಎಂದು ಪೀಠ ಆದೇಶದಲ್ಲಿ ತಿಳಿಸಿದೆ.

ಟಿಕೆಟ್ ಮರು ವಿತರಣೆಯಿಂದ ₹18:

2004ರ ಡಿ.29ರಂದು ಅವರು ನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದ ಬಿಎಂಟಿಸ ಬಸ್‌ ತಪಾಸಣಾ ಸಿಬ್ಬಂದಿ ಪರಿಶೀಲಿಸಿದ್ದರು. ನಾರಾಯಣ ಅವರು ಈಜಿಪುರದಲ್ಲಿ ಮಾರಾಟ ಮಾಡಿದ್ದ 6 ರು. ಮೌಲ್ಯದ ಟಿಕೆಟ್‌ ಮರಳಿ ಪಡೆದು, ಮತ್ತೋರ್ವ ಪ್ರಯಾಣಿಕನಿಗೆ ಪುನಃ ವಿತರಿಸಿ 2 ರು. ಸಂಗ್ರಹಿಸಿದ್ದರು. ನಂತರ ಟೌನ್‌ ಹಾಲ್‌ನಿಂದ ಮೆಜೆಸ್ಟಿಕ್‌ ಗೆ ಪ್ರಯಾಣಿಸಿದ್ದ ನಾಲ್ವರು ಪ್ರಯಾಣಿಕರಿಗೆ 4 ರು. ಮೌಲ್ಯದ ಟಿಕೆಟ್‌ ಮರು ವಿತರಿಸಿ ಅವರಿಂದ ತಲಾ 4 ರು. ಪಡೆದಿದ್ದರು ಎಂಬ ಸಂಗತಿ ತಪಾಸಣೆ ವೇಳೆ ತಿಳಿದು ಬಂದಿತ್ತು.

ಎರಡು ವೇತನ ಹೆಚ್ಚಳ ತಡೆ

ಈ ಕುರಿತು ತಪಾಸಣಾ ಸಿಬ್ಬಂದಿ ವಿವರವಾದ ವರದಿ ಸಲ್ಲಿಸಿದ್ದರು. ಬಿಎಂಟಿಸಿ ದೋಷಾರೋಪಗಳನ್ನು ರಚಿಸಿತ್ತು. ಅದಕ್ಕೆ ನಾರಾಯಣ ನೀಡಿದ್ದ ವಿವರಣೆ ತೃಪ್ತಿಕರವಾಗಿರದಿದ್ದಕ್ಕೆ ಬಿಎಂಟಿಸಿ ವಿಚಾರಣೆ ನಡೆಸಲು ನಿರ್ಧರಿಸಿ, ವಿಚಾರಣಾಧಿಕಾರಿಯನ್ನು ನೇಮಿಸಿತ್ತು. ವಿಚಾರಣಾಧಿಕಾರಿಗೆ ವಿಚಾರಣೆ ನಡೆಸಿ, ನಾರಾಯಣ ಅವರ ಮೇಲಿನ ಆರೋಪಿಗಳು ದೃಢಪಟ್ಟಿವೆ ಎಂದು ವರದಿ ನೀಡಿದ್ದರು. ಅದನ್ನು ಆಧರಿಸಿ ನಾರಾಯಣ ಅವರ ಎರಡು ವೇತನ ಹೆಚ್ಚಳವನ್ನು ತಡೆಹಿಡಿದು ಬಿಎಂಟಿಸಿಯ ಶಿಸ್ತು ಪ್ರಾಧಿಕಾರ 2006ರ ಮೇ 31ರಂದು ಶಿಕ್ಷೆ ವಿಧಿಸಿತ್ತು.

ದುರ್ನಡತೆ ಎತ್ತಿಹಿಡಿದರೂ ಶಿಕ್ಷೆ ಮಾತ್ರ ರದ್ದು

ಈ ಆದೇಶ ಪ್ರಶ್ನಿಸಿ ಕೈಗಾರಿಕಾ ನ್ಯಾಯಮಂಡಳಿ ಮುಂದೆ ನಾರಾಯಣ ಪ್ರಶ್ನಿಸಿದ್ದರು. ನಾರಾಯಣ ಅವರ ದುರ್ನಡತೆಯನ್ನು ಎತ್ತಿ ಹಿಡಿದರೂ, ಎರಡು ವೇತನ ಹೆಚ್ಚಳ ತಡೆಹಿಡಿದ ಶಿಕ್ಷೆಯನ್ನು ರದ್ದುಪಡಿಸಿ ನ್ಯಾಯಮಂಡಳಿ ಆದೇಶಿಸಿತ್ತು. ಆ ಆದೇಶ ರದ್ದು ಕೋರಿ ಬಿಎಂಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.