ಸಾರಾಂಶ
ದೀಪಾವಳಿ ಹಬ್ಬದ ಹಿನ್ನೆಲೆ ಶುಕ್ರವಾರ ಪಟ್ಟಣದ ಜನತೆ ಭರ್ಜರಿ ವ್ಯಾಪಾರ- ವಹಿವಾಟಿನಲ್ಲಿ ತೊಡಗಿದ್ದಾರೆ.
ಯಲಬುರ್ಗಾ:
ದೀಪಾವಳಿ ಹಬ್ಬದ ಹಿನ್ನೆಲೆ ಶುಕ್ರವಾರ ಪಟ್ಟಣದ ಜನತೆ ಭರ್ಜರಿ ವ್ಯಾಪಾರ- ವಹಿವಾಟಿನಲ್ಲಿ ತೊಡಗಿದ್ದಾರೆ. ಈ ಬಾರಿ ಎಲ್ಲ ವಸ್ತುಗಳು ಗಗನಕ್ಕೆ ಏರಿದ್ದರೂ ಗ್ರಾಹಕರ ನಾ ಮುಂದೆ, ತಾ ಮುಂದೆ ಎನ್ನುವಂತೆ ಸಾಮಗ್ರಿಗಳ ಖರೀದಿ ಮಾಡಿದರು. ಮುಂದಾಗಿದ್ದಾರೆ.ಪಟ್ಟಣ ಸೇರಿದಂತೆ ತಾಲೂಕಿನ ಜನತೆ ಈ ಬಾರಿ ದೀಪಾವಳಿ ಆಚರಣೆಗೆ ಸಾಕಷ್ಟು ಸಡಗರ, ಸಂಭ್ರಮ, ಉತ್ಸಾಹದಿಂದ ಮುಂದಾಗಿದ್ದಾರೆ. ಈ ಹಿನ್ನೆಲೆ ಪಟ್ಟಣದ ಮಾರುಕಟ್ಟೆಯಲ್ಲಿ ಹಬ್ಬದ ವಿವಿಧ ಸಾಮಗ್ರಿಗಳು ಲಗ್ಗೆಯಿಟ್ಟಿದ್ದು, ಪ್ರಮುಖವಾಗಿ ಅನೇಕ ತರಹದ ಹಣ್ಣು, ಹೂವುಗಳ ಖರೀದಿಗೆ ಮುಗಿ ಬಿದ್ದಿರುವುದು ಕಂಡು ಬಂತು.ನಗರದಲ್ಲಿ ತರಕಾರಿ ಸೇರಿದಂತೆ ಹೂವು, ಹಣ್ಣುಗಳು ಬೆಲೆಯಲ್ಲಿ ಭಾರಿ ಹೆಚ್ಚಳವಾಗಿದೆ. ತರಕಾರಿ ಬೆಲೆ ದುಪ್ಪಟ್ಟು ಆಗಿದ್ದರೆ, ಹೂವಿನ ದರ ಗಗನಕ್ಕೆ ಏರಿತ್ತು. ಸ್ಥಳೀಯ ಹಬ್ಬಗಳಲ್ಲಿ ಮಾತ್ರ ಬೆಲೆ ದ್ವಿಗುಣಗೊಳ್ಳುತ್ತದೆ. ಮಹಾಲಕ್ಷ್ಮೀ ಪೂಜೆಯ ಹಿನ್ನೆಲೆ ಅಂಗಡಿಗಳಲ್ಲಿ ಮತ್ತು ವಾಹನಗಳ ಪೂಜೆಗೆ ಕುಂಬಳಕಾಯಿ, ಕಬ್ಬು, ಬಾಳೆ ಇತರ ವಸ್ತುಗಳ ಮಾರಾಟ ಜೋರಾಗಿ ನಡೆದಿದೆ.
ಕುಂಬಳಕಾಯಿ ₹ ೧೫೦ರಿಂದ ೨೦೦ ಹಾಗೂ ಚೆಂಡು ಹೂವಿನ ದರ ಕೂಡ ₹೧೦೦ರವರೆಗೆ ಇತ್ತು. ಹೀಗಿದ್ದರೂ ತಾಲೂಕಿನಾದ್ಯಂತ ಜನ ಸಂಭ್ರಮದಿಂದ ಸಾಮಗ್ರಿ ಖರೀದಿಸಿ ಹಬ್ಬ ಆಚರಣೆ ಮಾಡುತ್ತಿದ್ದಾರೆ.ಅಲಂಕಾರಿಕ ವಸ್ತು ಖರೀದಿಸಿದ ಸಾರ್ವಜನಿಕರು:
ಹನುಮಸಾಗರ ಗ್ರಾಮದಲ್ಲಿ ಬೆಳಕಿನ ದೀಪಾವಳಿ ಹಬ್ಬದ ನಿಮಿತ್ತವಾಗಿ ಸಾರ್ವಜನಿಕರಲ್ಲಿ ಶುಕ್ರವಾರ ಖರೀದಿಯ ಸಂಭ್ರಮ ಮನೆ ಮಾಡಿತ್ತುತು.ಹಬ್ಬದ ಆಚರಣೆಗೆ ಅಲಂಕಾರಿಕ ವಸ್ತುಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದವು. ಗ್ರಾಮದ ಹಳೆ ಬಜಾರದಲ್ಲಿರುವ ಜವಳಿ ಅಂಗಡಿ, ಅಲಂಕಾರಿಕೆಗೆ ವಿದ್ಯುತ್ ದೀಪ ಖರೀದಿ, ಪ್ಲಾಸ್ಟಿಕ್ ಹೂಗಳ ಖರೀದಿ, ಬಣ್ಣ ಬಣ್ಣದ ಆಕಾಶ ಬುಟ್ಟೆ, ರಂಗೋಲಿ, ಪಠಾಕಿ, ಮಣ್ಣಿನ ಹಣತೆಗಳು ಸೇರಿದಂತೆ ಅಲಂಕಾರಿಕ ವಸ್ತುಗಳ ಖರೀದಿಗೆ ಸಾರ್ವಜನಿಕರು ಮುಗಿಬಿದ್ದಿದ್ದರು. ಗ್ರಾಮಕ್ಕೆ ಸುತ್ತಲಿನ ಬೆನಕನಾಳ, ಮಡಿಕೇರಿ, ಹಿರೇಗೊಣ್ಣಾಗರ, ಹನುಮನಾಳ, ಹೂಲಗೇರಿ, ಯರಗೇರಾ, ಚಳಗೇರಿ ಸೇರಿದಂತೆ ನಾನಾ ಗ್ರಾಮಗಳ ಸಾರ್ವಜನಿಕರು ಆಗಮಿಸಿದ್ದರು.