ಸದೀಪಾವಳಿಗೆ ಅಂಟಿಕೆ ಪಂಟಿಕೆ ಮೆರುಗು ನೀಡಲಿದೆ

| Published : Nov 02 2024, 01:34 AM IST / Updated: Nov 02 2024, 01:35 AM IST

ಸಾರಾಂಶ

ಆಧುನಿಕ ಕಾಲಘಟ್ಟದಲ್ಲಿ ಮಲೆನಾಡಿನ ಸಂಸ್ಕೃತಿ ಪಸರಿಸುವ ಕಾರ್ಯ ಶ್ಲಾಘನೀಯ: ದೀಪಕ್ ಹೆಗಡೆ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಆಧುನಿಕತೆಯ ಕಾಲಘಟ್ಟದಲ್ಲಿ ಮಲೆನಾಡಿನ ವಿಶಿಷ್ಟ ಸಂಸ್ಕೃತಿಯನ್ನು ನಗರ ಪ್ರದೇಶದಲ್ಲಿ ಪಸರಿಸುವ ಕಾರ್ಯ ಅಭಿನಂದನೀಯ. ದೀಪಾವಳಿಗೆ ಇಂತಹ ಜಾನಪದ ಕಲೆ ಮತ್ತಷ್ಟು ಮೆರಗು ನೀಡಲಿದೆ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ದೀಪಕ್ ಹೆಗಡೆ ಎನ್‌.ಎಸ್‌.ಹೇಳಿದರು.

ಕರ್ನಾಟಕ ಜಾನಪದ ಪರಿಷತ್ತು ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವತಿಯಿಂದ ಗುರುವಾರ ಮಲೆನಾಡಿನ ವಿಶಿಷ್ಟ ಜನಪದ ಕಲೆಯಾದ ಅಂಟಿಗೆ ಪಂಟಿಗೆಯ ಜ್ಯೋತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಅಂಟಿಗೆ ಪಂಟಿಗೆಯ ಜ್ಯೋತಿಯು ನಗರದ ವಿವಿಧ ಬಡಾವಣೆಗಳ ಮನೆಗಳಿಗೆ ತೆರಳಿ ದೀಪ ನೀಡಿ ಅಂಟಿಕೆ ಪಂಟಿಕೆ ಪದಗಳ ಮೂಲಕ ಶುಭ ಹಾರೈಸಿತು. ಆದಿಚುಂಚನಗಿರಿಯ ಕಾಲಭೈರವೇಶ್ವರ ದೇವಸ್ಥಾನದಿಂದ‌ ಗುರುವಾರ ಸಂಜೆ ಹೊರಟ ತೀರ್ಥಹಳ್ಳಿ ತಾಲೂಕಿನ ಬಂದ್ಯಾ ಗ್ರಾಮದ ಅಂಟಿಕೆ ಪಂಟಿಕೆಯ ಎರಡು ತಂಡಗಳು ಶುಕ್ರವಾರ ಬೆಳಗಿನ ಜಾವ 4 ಗಂಟೆಯವರೆಗೆ ನಗರದ ವಿವಿಧ ಬಡಾವಣೆಗಳ 70ಕ್ಕೂ ಹೆಚ್ಚು ಮನೆಗಳಿಗೆ ಭೇಟಿ ನೀಡಿತು.

‘ದೀಪೋಳಿ ಎನ್ನಿರಣ್ಣಾ..ಈ ಊರ ದೇವ್ರಿಗೆ, ‘ಮಣ್ಣಲ್ಲಿ ಹುಟ್ಟಿದೆ, ಮಣ್ಣಲ್ಲಿ ಬೆಳೆದೆ, ಎಣ್ಣೆಲಿ ಕಣ್‌ ಬಿಟ್ಟಿದೆ, ಜಗಜ್ಯೋತಿ ನಾ ಸತ್ಯದಿಂದ ಉರಿವೆ ಜಗಜ್ಯೋತಿ, ‘ದೀಪೋಳಿ ಎನ್ನಿರಣ್ಣ ಈ ಊರ ದೇವ್ರಿಗೆ, ಈ ಊರ ದೇವ್ರಿಗೆ ಅಣ್ಣ ಬಲಿಂದ್ರಾಯಾಗೆ’ ಎನ್ನುತ್ತಾ ಶುಭಹಾರೈಸಿದರು.

ಅಂಟಿಕೆ ಪಂಟಿಕೆಯ ತಂಡ ತರುವ ಜ್ಯೋತಿ ಮನೆ ಪ್ರವೇಶಿಸಿದಾಗ ಮನೆಯವರು ದೀಪಕ್ಕೆ ಎಣ್ಣೆ ಎರೆದು ಪೂಜೆ ಸಲ್ಲಿಸುತ್ತಾರೆ. ಹೀಗೆ ದೀಪ ಬೆಳಗಿದ ಮನೆಯಲ್ಲಿ ಮುಂದಿನ ವರ್ಷದವರೆಗೆ ಯಾವುದೇ ಕಷ್ಟಗಳು ಬರುವುದಿಲ್ಲ ಎಂಬ ನಂಬಿಕೆಯಿದೆ. ಹಾದಿ ಪದ, ಬಾಗಿಲು ಪದ, ಕುಟುಂಬ ಏಳಿಗೆಯ ಪದಗಳನ್ನು ಅಂಟಿಕೆ ಪಂಟಿಕೆಯು ಒಳಗೊಂಡಿದೆ.

ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ಸಾಯಿನಾಥ ಸ್ವಾಮಿಜಿ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಡಿ.ಮಂಜುನಾಥ, ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ರಮೇಶ್ ಹೆಗಡೆ, ಜೆಡಿಎಸ್ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನಿರ್ದೇಶಕ ವಾಸಪ್ಪಗೌಡ, ಡಾ.ಶಾಂತಾ ಸುರೇಂದ್ರ, ಮಹಾದೇವಿ, ಭಾರತಿ ರಾಮಕೃಷ್ಣ, ಪದಾಧಿಕಾರಿಗಳಾದ ಭೈರಾಪುರ ಶಿವಪ್ಪಮೇಷ್ಟು, ಪಿ.ಕೆ.ಸತೀಶ್, ಡಿ.ಗಣೇಶ್, ಕೃಷ್ಣಮೂರ್ತಿ ಹಿಳ್ಳೋಡಿ, ನಾರಾಯಣ, ಪ್ರತಿಮಾ ಡಾಕಪ್ಪಗೌಡ ಸೇರಿ ಇತರರು ಇದ್ದರು.