ಅನಾದಿ ಕಾಲದಿಂದಲೂ ಮೇಲಿನ ಪ್ರದೇಶದಿಂದ ನೈಸರ್ಗಿಕವಾಗಿ ನೀರು ಹರಿದು ಕೆಂಪಗೇರಿಗೆ ಸೇರುತ್ತಿತ್ತು. ಹೆಚ್ಚುವರಿ ನೀರು ಈಗ ಬೈಪಾಸ್‌ ರಸ್ತೆಗೆ ನಿರ್ಮಿಸಿರುವ ಕೆಳಸೇತುವೆ ಮೂಲಕ ಹರಿದು ಮುಂದಿನ ಪ್ರದೇಶಕ್ಕೆ ಹೋಗುತ್ತಿತ್ತು. ಆದರೆ, ಈಗ 38 ಗುಂಟೆ ಜಾಗದಲ್ಲಿದ್ದ ಕೆಂಪಗೇರಿಯನ್ನು ಬಹುತೇಕ ಬೈಪಾಸ್‌ ರಸ್ತೆಯೇ ನುಂಗಿದೆ.

ಧಾರವಾಡ:

ಇಲ್ಲಿಯ ನರೇಂದ್ರ ಕ್ರಾಸ್‌ನಿಂದ ಹುಬ್ಬಳ್ಳಿ ಗಬ್ಬೂರ ವರೆಗೆ ನಡೆಯುತ್ತಿರುವ ಬೈಪಾಸ್‌ ರಸ್ತೆ ಅಗಲೀಕರಣ ಕಾಮಗಾರಿ ಪೈಕಿ ಕೆಲಗೇರಿಯ ಕೆಂಪಗೇರಿಯ ನಾಲಾ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂದು ಗ್ರಾಮಸ್ಥರು ಹಾಗೂ ಲೇಔಟ್‌ ಪ್ರಮುಖರು ಪ್ರತಿಭಟಿಸಿದ ಹಿನ್ನೆಲೆಯಲ್ಲಿ ಕಾಮಗಾರಿ ತಾತ್ಕಾಲಿಕವಾಗಿ ಬಂದ್‌ ಮಾಡಲಾಗಿದೆ.

ಅನಾದಿ ಕಾಲದಿಂದಲೂ ಮೇಲಿನ ಪ್ರದೇಶದಿಂದ ನೈಸರ್ಗಿಕವಾಗಿ ನೀರು ಹರಿದು ಕೆಂಪಗೇರಿಗೆ ಸೇರುತ್ತಿತ್ತು. ಹೆಚ್ಚುವರಿ ನೀರು ಈಗ ಬೈಪಾಸ್‌ ರಸ್ತೆಗೆ ನಿರ್ಮಿಸಿರುವ ಕೆಳಸೇತುವೆ ಮೂಲಕ ಹರಿದು ಮುಂದಿನ ಪ್ರದೇಶಕ್ಕೆ ಹೋಗುತ್ತಿತ್ತು. ಆದರೆ, ಈಗ 38 ಗುಂಟೆ ಜಾಗದಲ್ಲಿದ್ದ ಕೆಂಪಗೇರಿಯನ್ನು ಬಹುತೇಕ ಬೈಪಾಸ್‌ ರಸ್ತೆಯೇ ನುಂಗಿದ್ದು, ಬರೀ ಎಂಟು ಗುಂಟೆ ಮಾತ್ರ ಉಳಿದಿದೆ. ಈ ಕೆರೆಗೆ ಹರಿದು ಬರುವ ನೀರನ್ನು ರಸ್ತೆಯ ಕೆಳಗಡೆಯಿಂದ ನಾಲಾ ಮಾಡುವ ಮೂಲಕ ಜನವಸತಿ ಪ್ರದೇಶಕ್ಕೆ ಹರಿದು ಬಿಡಲಾಗುತ್ತಿದೆ.

ಒಂದು ವೇಳೆ ಈ ನಾಲಾ ಮೂಲಕ ಕೆರೆ ನೀರು ಹಾಗೂ ಮೇಲಿನ ಪ್ರದೇಶದ ನೀರು ಬಂದರೆ ಕೆಳಗಿನ ಜನವಸತಿ ಪ್ರದೇಶಗಳಾದ ಸಿದ್ಧಗಂಗಾ ಲೇಔಟ್‌, ನೀಲ್‌ ಲೇಔಟ್‌, ವ್ಯಾಸವಿಹಾರ ಬಡಾವಣೆ, ಮಾಣಿಕ ಲೇಔಟ್‌, ಮೇಸ್ತ್ರಿ ಲೇಔಟ್‌, ಇಟ್ಟಿಗೆ ಬಟ್ಟಿ, ಹೊಲಗಳಿಗೆ ನೀರು ನುಗ್ಗಲಿದೆ. ಈಗಾಗಲೇ ಕಳೆದ ವರ್ಷ ಇಲ್ಲಿಂದ ಹೋದ ನೀರು ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ಸ್ವತ ಜಿಲ್ಲಾಧಿಕಾರಿ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಭಾಯಿಸಿದ್ದರು. ಜನವಸತಿ ಮಾತ್ರವಲ್ಲದೇ ಅಗ್ರೋ ಇಂಡಸ್ಟ್ರೀಗಳೂ ಸಹ ಇಲ್ಲಿವೆ. ಆದ್ದರಿಂದ ಕೆಲಗೇರಿಯ ಕೆಂಪಗೇರಿಯ ಚನೈಜ್‌ 430 ನಾಲಾ ಕಾಮಗಾರಿಯನ್ನು ಕೂಡಲೇ ಬಂದ್‌ ಮಾಡಬೇಕೆಂದು ಸೋಮವಾರ ಪ್ರತಿಭಟನೆ ಮಾಡಿದ್ದರ ಫಲವಾಗಿ ಸದ್ಯಕ್ಕೆ ನಾಲಾ ಕಾಮಗಾರಿ ಬಂದ್‌ ಮಾಡಿದ್ದಾರೆ. ಈ ಕುರಿತಾಗಿ ನಾವು ನ್ಯಾಯಾಲಯಕ್ಕೂ ಹೋಗಿದ್ದೇವೆ ಎಂದು ಸ್ಥಳೀಯರಾದ ವಿಜಯಕುಮಾರ ಹೆಸರೂರು ಹೇಳಿದರು.

ಈ ವೇಳೆ ಗ್ರಾಮಸ್ಥರಾದ ನಾಗೇಶ ತಲವಾಯಿ, ಗಣೇಶ ಕದಂ, ಗಂಗಯ್ಯ ಗುಡ್ಡದಮಠ, ರವೀಂದ್ರ ಕಟೋಡಿ ಇದ್ದರು.