ಉದ್ಯಾನ ನಿರ್ವಹಣೆ ಹೊರಗುತ್ತಿಗೆ ಟೆಂಡರ್ ರದ್ದುಗೊಳಿಸಿ

| Published : Feb 13 2024, 12:47 AM IST

ಸಾರಾಂಶ

ಆಲಮಟ್ಟಿಯ ವಿವಿಧ ಉದ್ಯಾನಗಳನ್ನು ನಿರ್ವಹಣೆಯನ್ನು ಹೊರಗುತ್ತಿಗೆ ಟೆಂಡರ್ ಕರೆಯಲಾಗಿದ್ದು, ಅದನ್ನು ತಕ್ಷಣವೇ ರದ್ದುಗೊಳಿಸಿ ಈಗಿದ್ದ ಸ್ಥಿತಿಯನ್ನೇ ಮುಂದುವರೆಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯ ದಿನಗೂಲಿ ನೌಕರರ ಸಂಘ ಆಗ್ರಹಿಸಿದೆ.

ಕನ್ನಡಪ್ರಭ ವಾರ್ತೆ ಆಲಮಟ್ಟಿ

ಆಲಮಟ್ಟಿಯ ವಿವಿಧ ಉದ್ಯಾನಗಳನ್ನು ನಿರ್ವಹಣೆಯನ್ನು ಹೊರಗುತ್ತಿಗೆ ಟೆಂಡರ್ ಕರೆಯಲಾಗಿದ್ದು, ಅದನ್ನು ತಕ್ಷಣವೇ ರದ್ದುಗೊಳಿಸಿ ಈಗಿದ್ದ ಸ್ಥಿತಿಯನ್ನೇ ಮುಂದುವರೆಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯ ದಿನಗೂಲಿ ನೌಕರರ ಸಂಘ ಆಗ್ರಹಿಸಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವಿರೂಪಾಕ್ಷಿ ಮಾದರ ಮಾತನಾಡಿದ ಅವರು, ಕಳೆದ 25 ವರ್ಷಕ್ಕೂ ಹೆಚ್ಚಿನ ಕಾಲದಿಂದ 370ಕ್ಕೂ ಅಧಿಕ ಅರಣ್ಯ ದಿನಗೂಲಿ ಕಾರ್ಮಿಕರು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಲಮಟ್ಟಿಯ ವಿವಿಧ ಉದ್ಯಾನಗಳ ನಿರ್ಮಾಣ ಹಾಗೂ ನಿರ್ವಹಣೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಅವರಿಗೆಲ್ಲ ಅರಣ್ಯ ಇಲಾಖೆಯ ನಿಗದಿಪಡಿಸಿರುವ ದಿನಗೂಲಿಗಳ ಆಧಾರದ ಮೇಲೆ ಕೃಷ್ಣಾ ಭಾಗ್ಯ ಜಲ ನಿಗಮದ ಅರಣ್ಯ ವಿಭಾಗವೂ ವೇತನ ಪಾವತಿ ಮಾಡುತ್ತಿದೆ. ಅತ್ಯಂತ ಕಡಿಮೆ ಸಂಬಳದಲ್ಲಿ ಇಲ್ಲಿ ದುಡಿಯುತ್ತಿದ್ದಾರೆ. ಆದರೆ, ಈಗ ಈ ಉದ್ಯಾನದ ನಿರ್ವಹಣೆಯ ಹೊಣೆಯನ್ನು ಹೊರಗುತ್ತಿಗೆ ನೀಡಲು ಟೆಂಡರ್ ಕರೆಯಲಾಗಿದೆ. ಇದರಿಂದ ಕಳೆದ 25 ವರ್ಷಗಳಿಂದಲೂ ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ನೌಕರಿ ಕಳೆದುಕೊಳ್ಳುವ ಭೀತಿ ಆವರಿಸಿದೆ. ಇದೇ ಸಂಬಳದಲ್ಲಿ ತಮ್ಮ ಬದುಕನ್ನು ಕಟ್ಟಿಕೊಂಡಿರುವ ಕಾರ್ಗುಮಿಕರಿಗೆ ಗುತ್ತಿಗೆ ಟೆಂಡರ್ ದಿಗಿಲು ಬಡಿಸಿದೆ. ತಕ್ಷಣವೇ ಈ ಟೆಂಡರ್ ರದ್ದುಗೊಳಿಸಬೇಕು ಎಂದು ನಾವು ಮನವಿ ಮಾಡುತ್ತೇವೆ, ಅಷ್ಟಕ್ಕೂ ಟೆಂಡರ್ ರದ್ದುಗೊಳಿಸದಿದ್ದರೇ ಹೋರಾಟ ಅನಿವಾರ್ಯ ಎಂದರು.ನಮ್ಮ ಸಮಸ್ಯೆಯನ್ನು ಮಾನವೀಯ ನೆಲೆಗಟ್ಟಿನಲ್ಲಿ ನೋಡಬೇಕು, ಇಲ್ಲಿ ಕಾರ್ಯನಿರ್ವಹಿಸುವ ಬಹುತೇಕ ಕಾರ್ಮಿಕರು ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ಮುಳುಗಡೆಯಾದ ಸಂತ್ರಸ್ತರಿದ್ದಾರೆ. ಒಂದೆಡೆ ಮನೆ, ಜಮೀನು ಕಳೆದುಕೊಂಡು ಕೂಲಿ ಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಗ ಅದಕ್ಕೂ ಹೊಡೆತ ಬೀಳುವ ಭಯ ಆವರಿಸಿದೆ ಎಂದರು.

ಕಲ್ಲು, ಗುಂಡು, ತಗ್ಗು, ಕುರುಚಲು, ಕಂಟಿಗಳಿಂದ ಕೂಡಿದ ಪ್ರದೇಶವನ್ನು ಹಗಲೂ ರಾತ್ರಿ ದುಡಿದು, ಹುಲ್ಲು ಹಾಸು, ಅಲಂಕಾರಿಕ ಗಿಡ ಮರಗಳನ್ನು ನೆಟ್ಟು ಸಾವಿರಾರು ಪ್ರವಾಸಿಗರು ವೀಕಷಿಸುವ ಮನರಂಜನೆ ತಾಣವನ್ನಾಗಿ ಮಾಡಿದ್ದೇವೆ, ಕೂಲಿ ಕಾರ್ಮಿಕರಿಗೆ ಬ್ಯಾಂಕ್ ಖಾತೆಗಳ ಮೂಲಕ ವೇತನ ಪಾವತಿಸುತ್ತಿದ್ದಾರೆ. ಕೂಲಿಕಾರರಿಗೆ ಸಮವಸ್ತ್ರ ವಿತರಿಸಿದ್ದಾರೆ. ಪ್ರತಿ ತಿಂಗಳಿಗೆ 4 ದಿನ ರಜೆ ನೀಡುತ್ತಾರೆ. ಆದರೆ, ಸರ್ಕಾರದಿಂದ ಕನಿಷ್ಠ ಸೇವಾ ಭದ್ರತೆ ಸೌಲಭ್ಯ ನೀಡಿಲ್ಲ ಎಂದು ದೂರಿದರು.

ಕನಿಷ್ಠ ಸರ್ಕಾರಿ ಸೇವಾ ಬದ್ಧತೆ ನೀಡಲು ಹಾಗೂ ಸರ್ಕಾರದ ಮಟ್ಟದಲ್ಲಿ ಇತ್ಯರ್ಥವಾಗುವವರೆಗೂ ಇಲಾಖಾ ವತಿಯಿಂದ ಉದ್ಯಾನಗಳ ನಿರ್ವಹಣೆ ನೀಡಬೇಕು ಎಂದು ವಿರೂಪಾಕ್ಷಿ ಹೇಳಿದರು.

ಮೂರ್ನಾಲ್ಕು ಬಾರಿ ಹೊರಗುತ್ತಿಗೆ ಟೆಂಡರ್ ಕರೆದರೂ ಸಂಘದ ಹೋರಾಟದ ಫಲವಾಗಿ ಅದನ್ನು ಹಿಂದಕ್ಕೆ ಪಡೆಯಲಾಗಿದೆ. ಈ ಕಾಮಗಾರಿ ಪೆರನಿಯಲ್ ನೇಚರ್ ಇದ್ದು ಹೊರಗುತ್ತಿಗೆ ನೀಡಲು ಬರುವುದಿಲ್ಲ. ಹೀಗಾಗಿ ಟೆಂಡರ್ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಬಾಗಲಕೋಟೆ ಜಿಲ್ಲಾ ಘಟಕದ ಅಧ್ಯಕ್ಷ ಬಸಪ್ಪ ಗುಡಿಮನಿ, ಅಪ್ಪಣ್ಣ ವಾಲೀಕಾರ, ಮಹೇಶ ತೆಲಗಿ, ಕಾಶೀನಾಥ ಬಿಂಗಿ, ಮರಿಯಪ್ಪ ವಾಲಿಕಾರ, ಬಸಪ್ಪ ತುಂಬರಮಟ್ಟಿ, ರಮೇಶ ಪವಾರ, ಪ್ರಕಾಶ ಮಾಲಗತ್ತಿ, ಭೀಮಶಿ ಮಾದರ, ಶೇಖಪ್ಪ ಹಡಪದ, ಗೋಪಾಲ ಚಲವಾದಿ, ಅಲ್ಲಾಸಾಬ್ ಮೆಟಗುಡ ಮತ್ತೀತರರು ಇದ್ದರು.