ಬೈಕ್‌ಗೆ ಕಾರು ಡಿಕ್ಕಿ: 11 ವರ್ಷದ ಬಾಲಕ ಸಾವು

| Published : Nov 26 2024, 12:48 AM IST

ಸಾರಾಂಶ

ಚಳ್ಳಕೆರೆ ನಗರದ ಹೊರವಲಯದ ವೀರದಿಮ್ಮನಹಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗೊಂಡ ಕಾರು.

ಚಳ್ಳಕೆರೆ: ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ ವೀರದಿಮ್ಮನಹಳ್ಳಿ ಬಳಿ ಬೈಕ್‌ಗೆ ಡಿಕ್ಕಿ ತಪ್ಪಿಸಲು ಹೋಗಿ ಬೈಕ್‌ಗೆ ತಾಗಿ ಕಾರುಪಲ್ಟಿಯಾಗಿ ಕಾರಿನಲ್ಲಿದ್ದ ಒಟ್ಟು ನಾಲ್ವರು ಗಾಯಗೊಂಡು ೧೧ ವರ್ಷದ ಬಾಲಕ ಮೃತಪಟ್ಟ ಘಟನೆ ವರದಿಯಾಗಿದೆ.

ಮೊಳಕಾಲ್ಮೂರು ತಾಲೂಕಿನ ರಾಂಪುರ ಗ್ರಾಮದ ಸಂಬಂಧಿಕರ ಮದುವೆಗೆ ಗೌರಿಬಿದನೂರಿನ ಕುಟುಂಬವೊಂದು ತೆರಳಿ ಮದುವೆ ಮುಗಿಸಿಕೊಂಡು ಸೋಮವಾರ ವಾಪಸ್ ಬರುವ ವೇಳೆ ಮಧ್ಯಾಹ್ನ ಈ ಘಟನೆ ಸಂಭವಿಸಿದೆ. ಕಾರುಚಾಲಕ ವೈ.ಗಿರಿಧರ ವೀರದಿಮ್ಮನಹಳ್ಳಿ ಕ್ರಾಸ್‌ಬಳಿ ಅಡ್ಡಬಂದ ಬೈಕಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಪ್ರಯತ್ನಿಸಿದ್ದು, ಕಾರು ಬೈಕ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ.

ಬೈಕ್ ಸವಾರ ಬೈಕ್ ಸಹಿತ ರಸ್ತೆ ಮೇಲೆ ಬಿದ್ದಿದ್ದಾನೆ. ಕೂಡಲೇ ಸ್ಥಳೀಯರು ಗಾಯಗೊಂಡ ಚಾಲಕ ವೈ.ಗಿರಿಧರ (೩೭), ಜಾನಕಮ್ಮ (೫೫), ವೈ.ವಿದ್ಯಾಧರ (೩೪) ಅವರನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದು, ಗಿರಿಧರ ಪುತ್ರ ಮೋನಿಷ್ (೧೧) ಅಪಘಾತದ ರಭಸಕ್ಕೆ ಕಾರಿನಿಂದ ಹೊರಗೆ ಬಿದ್ದಿದ್ದು, ಕೂಡಲೇ ಮಗುವನ್ನು ಆಸ್ಪತ್ರೆಗೆ ದಾಖಲಿಸಿದಾಗ ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಪಿಎಸ್‌ಐ ಕೆ.ಸತೀಶ್‌ನಾಯ್ಕ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.

ಇತ್ತೀಚೆಗೆ ವೀರದಿಮ್ಮನಹಳ್ಳಿ ಬಳಿ ನಿರ್ಮಾಣಗೊಂಡ ಹೊಸ ಬೈಪಾಸ್‌ನಲ್ಲಿ ಸೂಕ್ತ ನಾಮಫಲಕವಿಲ್ಲದೆ ಅಪಘಾತಗಳು ನಿರಂತರ ಜರುಗುತ್ತಿದ್ದು, ಈ ಬಗ್ಗೆ ಜಿಲ್ಲಾಡಳಿತ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಾರ್ವಜನಿಕರ ಹಿತದೃಷ್ಟಿಯಿಂದ ಮೇಲುಸೇತುವೆ ನಿರ್ಮಿಸುವಂತೆ ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿ ಕರೀಕೆರೆ ನಾಗರಾಜು ಸರ್ಕಾರವನ್ನು ಒತ್ತಾಯಿಸಿದ್ಧಾರೆ.