ಸಾರಾಂಶ
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ನ್ಯಾ.ಸದಾಶಿವ ಆಯೋಗದ ವರದಿ ಅನುಸಾರ, ಸುಪ್ರೀಂ ಕೋರ್ಟ್ ಆದೇಶದಂತೆ ರಾಜ್ಯ ಸರ್ಕಾರ ಒಳ ಮೀಸಲಾತಿ ನೀಡುವಂತೆ ಆಗ್ರಹಿಸಿ ಸೋಮವಾರ ದಲಿತ ಸಂಘಟನೆಗಳ ಮುಖಂಡರು ಶಾಸಕ ಹಾಗೂ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡರ ಹುಡ್ಕೋ ಬಡಾವಣೆಯಲ್ಲಿನ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು.
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ನ್ಯಾ.ಸದಾಶಿವ ಆಯೋಗದ ವರದಿ ಅನುಸಾರ, ಸುಪ್ರೀಂ ಕೋರ್ಟ್ ಆದೇಶದಂತೆ ರಾಜ್ಯ ಸರ್ಕಾರ ಒಳ ಮೀಸಲಾತಿ ನೀಡುವಂತೆ ಆಗ್ರಹಿಸಿ ಸೋಮವಾರ ದಲಿತ ಸಂಘಟನೆಗಳ ಮುಖಂಡರು ಶಾಸಕ ಹಾಗೂ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡರ ಹುಡ್ಕೋ ಬಡಾವಣೆಯಲ್ಲಿನ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಆದರೆ, ಡಿವೈಎಸ್ಪಿ ಬಲ್ಲಪ್ಪ ನಂದಗಾಂವಿ, ಸಿಪಿಐ ಮಲ್ಲಿಕಾರ್ಜನ ತುಳಸಿಗೇರಿ, ಪಿಎಸ್‌ಐ ಸಂಜಯ ತಿಪ್ಪಾರಡ್ಡಿ ಸೇರಿದಂತೆ ಪೊಲೀಸ್ ಸಿಬ್ಬಂದಿ ಹೋರಾಟಗಾರರ ಮುತ್ತಿಗೆಯನ್ನು ವಿಫಲಗೊಳಿಸಿದರು. ಅಲ್ಲದೇ, ಮೀಸಲಾತಿ ಬಗ್ಗೆ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸುವಂತೆ ಸಲಹೆ ನೀಡಿದರು.ಈ ವೇಳೆ ದಲಿತ ಮುಖಂಡರಾದ ಹರೀಶ ನಾಟಿಕಾರ, ಬಸವರಾಜ ಸಿದ್ದಾಪೂರ, ಡಿ.ಬಿ.ಮೂದೂರ ಮಾತನಾಡಿ, ದೇಶದಲ್ಲಿ ತೀರಾ ಹಿಂದುಳಿದ ಕೊಳಚೆ ಪ್ರದೇಶದಲ್ಲಿ ಜೀವನ ನಡೆಸುತ್ತಿರುವ ಮಾದಿಗ ಸಮಾಜದವರ ಮಕ್ಕಳು ಶಿಕ್ಷಣವಂತರಾಗಿ ಮೇಲೆ ಬರಲು ಒಳಮೀಸಲಾತಿ ಅವಶ್ಯಕವಾಗಿದೆ. ಕಳೆದ 45 ರಿಂದ 50 ವರ್ಷ ನಿಜವಾದ ಆಸ್ಪೃಶ್ಯರಾದ ದಲಿತ ಸಮುದಾಯದವರು ಒಳಮೀಸಲಾತಿಗೆ ಹೋರಾಟ ನಡೆಸಿದರೂ ಸರ್ಕಾರಗಳು ನಮ್ಮ ಮನವಿಗೆ ಸ್ಪಂದಿಸಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯದ ಆಯಾ ಮತಕ್ಷೇತ್ರದ ಶಾಸಕರ ಮನೆಗೆ ಮುತ್ತಿಗೆ ಹಾಕಿ ನಮ್ಮ ಹಕ್ಕಿಗಾಗಿ ಪ್ರತಿಭಟಿಸುತ್ತಿದ್ದೇವೆ.
ಈ ಬಗ್ಗೆ ಮೊದಲೆ 15 ದಿನಗಳ ಹಿಂದೇ ಸುದ್ದಿಗೋಷ್ಠಿ ನಡೆಸಿ ಮಾಧ್ಯಮಗಳ ಮೂಲಕ ನಮ್ಮ ಹೋರಾಟ ಬಗ್ಗೆ ತಿಳಿಸಿದ್ದೆವು. ಆದರೆ, ಶಾಸಕ ನಾಡಗೌಡರು ನಮ್ಮ ಹೋರಾಟಗಾರರನ್ನು ಒಂದು ದಿನವೂ ಕರೆಯಲಿಲ್ಲ. ನಮ್ಮ ಹಕ್ಕಿನ ಕುರಿತು ಸ್ಪಂದನೆ ಮಾಡಲಿಲ್ಲ. ನಮ್ಮ ಹಕ್ಕಿಗಾಗಿ ಮೀಸಲಾತಿ ಪಡೆದುಕೊಳ್ಳಲು ನಾವು ಸಿದ್ದರಿದ್ದೇವೆ. ಹೋರಾಟ ಮೊಟಕುಗೊಳಿಸುವ ಪ್ರಶ್ನೆಯೇ ಇಲ್ಲ.ಕಾರಣ ಶಾಸಕ ಸಿ.ಎಸ್.ನಾಡಗೌಡ ಅವರು ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶದಲ್ಲಿ ಒಳ ಮೀಸಲಾತಿ ಬಗ್ಗೆ ಧ್ವನಿ ಎತ್ತುವ ಮೂಲಕ ಮುಖ್ಯಮಂತ್ರಿಗಳ ಗಮನ ಸೆಳೆಯಬೇಕು. ನಮ್ಮ ಹಕ್ಕು ನಮಗೆ ದೊರಕುವಂತೆ ಮಾಡಬೇಕು. ಇಲ್ಲವಾದರೆ ನಿಮ್ಮ ವಿರುದ್ಧ ಹೋರಾಟ ನಿರಂತರವಾಗಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ವೇಳೆ ಶೇಖ್ ಆಲೂರ, ಸಿ.ಜಿ.ವಿಜಯಕರ, ನ್ಯಾಯವಾದಿ ಕೆ.ಬಿ.ದೊಡಮನಿ, ಪ್ರಕಾಶ ಸರೂರ, ಪ್ರಶಾಂತ ಕಾಳೆ, ಆನಂದ ಗಂಗೂರ, ಆನಂದ ದೇವೂರ, ಸುರೇಶ ಮಾದರ, ತಿಪ್ಪಣ್ಣ ದೊಡಮನಿ, ಬಾಲು ಹುಲ್ಲೂರ, ಪರಶುರಾಮ ಬಸರಕೋಡ, ದೇವರಾಜ ಹಂಗರಗಿ ಸೇರಿದಂತೆ ಹಲವರು ಇದ್ದರು.