ಮೇಲುಕೋಟೆ ಭಾಷಾಭಿವೃದ್ಧಿಗೆ ಕೊಡುಗೆ ನೀಡತ್ತಾ ಬಂದಿದೆ: ಎಸ್.ಎನ್.ಸಿಂಹ

| Published : Nov 26 2024, 12:48 AM IST

ಮೇಲುಕೋಟೆ ಭಾಷಾಭಿವೃದ್ಧಿಗೆ ಕೊಡುಗೆ ನೀಡತ್ತಾ ಬಂದಿದೆ: ಎಸ್.ಎನ್.ಸಿಂಹ
Share this Article
  • FB
  • TW
  • Linkdin
  • Email

ಸಾರಾಂಶ

ಸಂಸ್ಕೃತ ರಾಮಾಯಣ- ಮಹಾಭಾರತವನ್ನು ಪ್ರಪ್ರಥಮವಾಗಿ ಕನ್ನಡಕ್ಕೆ ತರ್ಜುಮೆ ಮಾಡಿದ ದೇವಶಿಖಾಮಣಿ ಅಳಸಿಂಗಾಚಾರ್, ಕನ್ನಡ ಪತ್ರಿಕೋದ್ಯಮ ದಿಗ್ಗಜ ಖಾದ್ರಿಶಾಮಣ್ಣ, ನಾಲ್ಕುಸಾವಿರ ದಿವ್ಯ ಪ್ರಬಂದಗಳನ್ನು ಕನ್ನಡಕ್ಕೆ ಭಾಷಾಂತರಿಸಿದ ಸರ್ವೋದಯ ಪಾದಯಾತ್ರಿ ಅರೈಯರ್ ಶ್ರೀನಿವಾಸ ಅಯ್ಯಂಗಾರ್, ಸ್ಥಾನೀಕಂ ನಾಗರಾಜ ಯ್ಯಂಗಾರ್ ಹೀಗೆ ಸಾಲುಸಾಲು ಪ್ರತಿಭಾವಂತರನ್ನು ಮೇಲುಕೋಟೆ ನಾಡಿಗೆ ಕೊಡುಗೆನೀಡಿದೆ.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ಕನ್ನಡ ಸಾಹಿತ್ಯ ಸೇವೆಗೆ ಪದ್ಮಶ್ರೀ ಪ್ರಶಸ್ತಿ ಪುರಸ್ಕಾರ ಪಡೆದ ವರಕವಿ ಪು.ತಿ.ನರನ್ನು ಕೊಡುಗೆ ನೀಡಿದ ಮೇಲುಕೋಟೆ ಮೂರು ಶತಮಾನಗಳಿಂದ ಭಾಷಾಭಿವೃದ್ಧಿಗೆ ಕೊಡುಗೆ ನೀಡುತ್ತಾ ಬಂದಿದೆ ಎಂದು ಸಾಹಿತಿ ಎಸ್.ಎನ್‌.ಸಿಂಹ ಅಭಿಪ್ರಾಯಪಟ್ಟರು.

ಮೇಲುಕೋಟೆಯಲ್ಲಿ ಸಾಹಿತ್ಯ ಸಮ್ಮೇಳನದ ಪ್ರಚಾರ ರಥ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿ, ಸಂಸ್ಕೃತ ರಾಮಾಯಣ - ಮಹಾಭಾರತವನ್ನು ಪ್ರಪ್ರಥಮವಾಗಿ ಕನ್ನಡಕ್ಕೆ ತರ್ಜುಮೆ ಮಾಡಿದ ದೇವಶಿಖಾಮಣಿ ಅಳಸಿಂಗಾಚಾರ್, ಕನ್ನಡ ಪತ್ರಿಕೋದ್ಯಮ ದಿಗ್ಗಜ ಖಾದ್ರಿಶಾಮಣ್ಣ, ನಾಲ್ಕುಸಾವಿರ ದಿವ್ಯ ಪ್ರಬಂದಗಳನ್ನು ಕನ್ನಡಕ್ಕೆ ಭಾಷಾಂತರಿಸಿದ ಸರ್ವೋದಯ ಪಾದಯಾತ್ರಿ ಅರೈಯರ್ ಶ್ರೀನಿವಾಸ ಅಯ್ಯಂಗಾರ್, ಪತ್ರಿಕಾರಂಗದಲ್ಲಿ ವಿಶಿಷ್ಟ ಸೇವೆ ಮಾಡಿ ಕ್ಷೇತ್ರಕ್ಕೆ ವ್ಯಾಪಕ ಪ್ರಚಾರ ನೀಡಿದ ಸ್ಥಾನೀಕಂ ನಾಗರಾಜ ಯ್ಯಂಗಾರ್ ಹೀಗೆ ಸಾಲುಸಾಲು ಪ್ರತಿಭಾವಂತರನ್ನು ಮೇಲುಕೋಟೆ ನಾಡಿಗೆ ಕೊಡುಗೆನೀಡಿದೆ ಎಂದರು.

ಸ್ಮಾರಕಗಳ ತವರೂರಾದ ಮೇಲುಕೋಟೆ ಸಾಹಿತ್ಯ ರಚನೆಗೂ ಸ್ಫೂರ್ತಿದಾಯಕ ವಾತಾವರಣ ನೀಡಿದೆ. 12ನೇ ಶತಮಾನದಲ್ಲಿ ರಾಮಾನುಜರು ಕ್ಷೇತ್ರದಲ್ಲಿ ನೆಲೆನಿಂತು ಕರುನಾಡಿನ ಸಂಸ್ಕೃತಿ, ಕಲೆ, ಸಾಹಿತ್ಯದ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು.

ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯಶಿಕ್ಷಕ ವೆಂಕಟರಾಮೇಗೌಡ ಮಾತನಾಡಿದರು. ಸಮ್ಮೇಳನದ ಪ್ರಚಾರ ರಥ ಬೆಳಗ್ಗೆ ವೀರಾಂಜನೇಯಸ್ವಾಮಿ ಸನ್ನಿಧಿ ಬಳಿಗೆ ಬಂದಾಗ ಸ್ಥಳೀಯ ಗ್ರಾಪಂ ಅಧ್ಯಕ್ಷೆ ಮಣಿಮುರುಗನ್ ಪೂಜೆಮಾಡಿ ಬರ ಮಾಡಿಕೊಂಡರು.ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಜಿ.ಕೆ.ಕುಮಾರ್ ಹಾಗೂ ಸದಸ್ಯರು, ಉಪ ತಹಸೀಲ್ದಾರ್ ರಾಜೇಶ್, ಗ್ರಾಪಂ ಪಿಡಿಒ ರಾಜೇಶ್ವರ್ ಗ್ರಾಮ ಆಡಳಿತಾಧಿಕಾರಿ ರಮೇಶ್, ಸಾಹಿತಿ ಚಂದ್ರಶೇಖರಯ್ಯ, ಜಿಲ್ಲಾ ಕಸಾಪ ಸಹ ಕಾರ್ಯದರ್ಶಿ ಖರಡ್ಯ ಬಸವೇಗೌಡ, ಪಾಂಡವಪುರ ತಾಲೂಕು ಕಸಾಪ ಅಧ್ಯಕ್ಷ ಮೇನಾಗರ ಪ್ರಕಾಶ್, ಬಾಲಕರ ಶಾಲೆ ಮುಖ್ಯಶಿಕ್ಷಕ ಸಂತಾನರಾಮನ್, ಯದುಶೈಲ ಪ್ರೌಢಶಾಲೆ ಮುಖ್ಯ ಶಿಕ್ಷಕ ವಸಂತಕುಮಾರ್ ಸೇರಿದಂತೆ ವಿವಿಧ ಶಾಲೆಗಳು ನೂರಾರು ವಿದ್ಯಾರ್ಥಿಗಳು, ಶಿಕ್ಷಕರು, ಇಲಾಖೆ ಸಿಬ್ಬಂದಿ ಹಾಜರಿದ್ದರು. ಮಕ್ಕಳೊಂದಿಗೆ ರಥ ದೇವಾಲಯದವರೆಗೆ ಸಂಚರಿಸಿ ಬಳಘಟ್ಟಕ್ಕೆ ಹೋಗಿ ಅಲ್ಲೂ ಪ್ರಚಾರ ನಡೆಸಿತು.