ಸಾರಾಂಶ
ನದಿ ಮತ್ತು ಜಲ ಮೂಲಗಳ ಮೂಲ ಸ್ವರೂಪಕ್ಕೆ ಧಕ್ಕೆ ಆಗದಂತೆ ಎಚ್ಚರ ವಹಿಸುವುದು ಅಗತ್ಯ ಎಂದು ಗಣ್ಯರು ಹೇಳಿದರು.
ಕನ್ನಡಪ್ರಭ ವಾರ್ತೆ ಕುಶಾಲನಗರ
ನದಿ ಮತ್ತು ಜಲ ಮೂಲಗಳ ಮೂಲ ಸ್ವರೂಪಕ್ಕೆ ಧಕ್ಕೆ ಆಗದಂತೆ ಎಚ್ಚರ ವಹಿಸುವುದು ಅಗತ್ಯ ಎಂದು ಕೊಡವ ಸಮಾಜದ ಮಾಜಿ ಅಧ್ಯಕ್ಷರಾದ ಮಂಡೆಪಂಡ ಬೋಸ್ ಮೊಣ್ಣಪ್ಪ ತಿಳಿಸಿದ್ದಾರೆ.ಅವರು ಕುಶಾಲನಗರ ಕಾವೇರಿ ಆರತಿ ಕ್ಷೇತ್ರದಲ್ಲಿ ನಡೆದ 170 ನೇ ಹುಣ್ಣಿಮೆ ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ನದಿ ತಟ ಬಹುತೇಕ ಒತ್ತುವರಿಯಾಗುವುದರೊಂದಿಗೆ ಲೋಡುಗಟ್ಟಲೆ ಮಣ್ಣು ತುಂಬಿಸಿ ಅಭಿವೃದ್ಧಿಯ ಹೆಸರಿನಲ್ಲಿ ಜಲಮೂಲಗಳಿಗೆ ಅಡ್ಡಿ ಮಾಡಲಾಗುತ್ತಿದೆ. ಇದರಿಂದ ಜೀವನದಿ ಕಾವೇರಿ ಸೇರಿದಂತೆ ಉಪನದಿಗಳು ಬತ್ತಿ ಹೋಗಿ ಆತಂಕದ ದಿನಗಳು ಎದುರಾಗುತ್ತಿವೆ ಎಂದು ಹೇಳಿದರು.ಮಹಾ ಆರತಿ ಅಂಗವಾಗಿ ಅರ್ಚಕರಾದ ಕೃಷ್ಣಮೂರ್ತಿ ಭಟ್ ಅವರು ಅಷ್ಟೋತ್ತರ ಕುಂಕುಮಾರ್ಚನೆ ನಂತರ ನದಿಗೆ ಆರತಿ ಬೆಳಗಿದರು.
ಹೋಳಿ ಹುಣ್ಣಿಮೆ ಮಹತ್ವದ ಬಗ್ಗೆ ಮಾಹಿತಿ ಒದಗಿಸಿದ ಅವರು ಮಳೆಗಾಗಿ ಕೋರಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.ಈ ಸಂದರ್ಭ ಕಾವೇರಿ ಮಹಾ ಆರತಿ ಬಳಗದ ಸಂಚಾಲಕಿ ವನಿತಾ ಚಂದ್ರಮೋಹನ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಜಿಲ್ಲಾ ನಿರ್ದೇಶಕರು ಹಾಗೂ ನಮಾಮಿ ಕಾವೇರಿ ಬಳಗದ ಸಂಚಾಲಕರಾದ ಲೀಲಾವತಿ, ಮಹಿಳಾ ಭಜನಾ ಮಂಡಳಿ ಪ್ರಮುಖರಾದ ಪದ್ಮ ಪುರುಷೋತ್ತಮ್, ಚೈತನ್ಯ ಮತ್ತಿತರರು ಇದ್ದರು.
ಹುಣ್ಣಿಮೆ ಅಂಗವಾಗಿ ಭಾಗಮಂಡಲ ಸಂಗಮ, ಗುಹ್ಯ, ಕೊಪ್ಪ ಮತ್ತಿತರ ಕಡೆ ಕಾವೇರಿ ನದಿ ತಟಗಳಲ್ಲಿ ಏಕಕಾಲದಲ್ಲಿ ಮಹಾ ಆರತಿ ಕಾರ್ಯಕ್ರಮ ನಡೆಯಿತು.