ಸಾರಾಂಶ
ಬ್ಯಾಡಗಿ: ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆಗೆ ಸೋಮವಾರ ಮೆಣಸಿನಕಾಯಿ ಚೀಲಗಳಲ್ಲಿ ಗಣನೀಯ ಏರಿಕೆ ಕಂಡುಬಂದಿದ್ದು, ಒಟ್ಟು 2.52 ಲಕ್ಷ ಚೀಲ ಮೆಣಸಿಕಾಯಿ ಆವಕಾಗಿದ್ದು, ದರದಲ್ಲಿ ಮಾತ್ರ ಯಾವುದೇ ಗಮನಾರ್ಹ ವ್ಯತ್ಯಾಸ ಕಂಡುಬಂದಿಲ್ಲ.
ಪ್ರಸಕ್ತ ವರ್ಷದ ಸೀಸನ್ ಇನ್ನೂ ಹೆಚ್ಚು ದಿನ ಮುಂದುವರಿಯುವುದಿಲ್ಲ ಎನ್ನುವಷ್ಟರಲ್ಲಿ ಮೆಣಸಿನಕಾಯಿ ಕೊನೆ ಹಂತದ ಆವಕವಾಗಬಹುದು ಎಂದು ವರ್ತಕರು ಅಂದುಕೊಳ್ಳುವಷ್ಟರಲ್ಲಿ ಸೋಮವಾರದ ಆವಕನ್ನು ನೋಡಿದರೆ ಅವರ ಎಲ್ಲ ರೀತಿಯ ಲೆಕ್ಕಾಚಾರ ತಲೆಕೆಳಗಾಗುವಂತೆ ಮಾಡಿದೆ.
5ನೇ ಬಾರಿ 2.5 ಲಕ್ಷಕ್ಕೂ ಅಧಿಕ:
ಸತತವಾಗಿ ಕಳೆದ 5 ವಾರ ಒಟ್ಟು ಆವಕಿನಲ್ಲಿ 2.5 ಲಕ್ಷ ಮೆಣಸಿನಕಾಯಿ ಚೀಲ ದಾಟಿದ್ದು, ಒಂದು ವಾರ 3 ಲಕ್ಷವನ್ನು ಸಮೀಪಿಸಿತ್ತು. ಹೀಗಾಗಿ ಕಳೆದೊಂದು ತಿಂಗಳಿನಲ್ಲಿ ಸುಮಾರು 14 ಲಕ್ಷಕ್ಕೂ ಅಧಿಕ ಚೀಲ ಮೆಣಸಿನಕಾಯಿ ಅವಕವಾಗಿದ್ದಾಗಿ ಮಾರುಕಟ್ಟೆ ಮೂಲಗಳು ದೃಢಪಡಿಸಿವೆ.
ಗುಂಟೂರು ಹೋಗಬೇಕಾಗಿದ್ದು ಬ್ಯಾಡಗಿಗೆ: ಒಂದು ಮೂಲದಂತೆ ಪ್ರಮುಖ ಅಂತಾರಾಷ್ಟ್ರೀಯ ಮೆಣಸಿನಕಾಯಿ ಆಂಧ್ರ ಪ್ರದೇಶದ ಗುಂಟೂರು ಮಾರಕಟ್ಟೆಗೆ ಹೋಗಬೇಕಾಗಿದ್ದ ಮೆಣಸಿನಕಾಯಿ ಬ್ಯಾಡಗಿ ಕಡೆಗೆ ಮುಖ ಮಾಡಿದ್ದಾಗಿ ತಿಳಿದುಬಂದಿದೆ. ಬ್ಯಾಡಗಿ ಮಾರುಕಟ್ಟೆಯಲ್ಲಿ ಟೆಂಡರ್ ದಿನವೇ ಎಲ್ಲ ಮಾಲುಗಳು ಮಾರಾಟ, ಅಂದೇ ರೈತರಿಗೆ ಹಣಕಾಸಿನ ಸೌಲಭ್ಯ, ಸ್ಪರ್ಧಾತ್ಮಕ ದರಕ್ಕಾಗಿ ಇ- ಟೆಂಡರ್ ಸೌಲಭ್ಯ, ಎಲೆಕ್ಟ್ರಾನಿಕ್ ತೂಕದ ಯಂತ್ರಗಳ ಬಳಕೆ ಪಾರದರ್ಶಕ ವ್ಯಾಪಾರಕ್ಕೆ ಮನಸೋತಿರುವ ಆಂಧ್ರಪ್ರದೇಶ ಹಾಗೂ ತೆಲಂಗಾಣದ ರೈತರು ಗುಂಟೂರು ಬದಲಿಗೆ ಬ್ಯಾಡಗಿ ಕಡೆಗೆ ಮುಖ ಮಾಡಿದ್ದಾಗಿ ತಿಳಿದುಬಂದಿದೆ.
ಸೋಮವಾರದ ಮಾರುಕಟ್ಟೆ ದರ: ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಸೋಮವಾರ ಕಡ್ಡಿತಳಿ ಮೆಣಸಿನಕಾಯಿ ಕನಿಷ್ಠ ₹2069, ಗರಿಷ್ಠ ₹25009, ಡಬ್ಬಿತಳಿ ಕನಿಷ್ಠ ₹2609, ಗರಿಷ್ಠ ₹28609, ಗುಂಟೂರು ಕನಿಷ್ಠ ₹799, ಗರಿಷ್ಠ ₹14609ಕ್ಕೆ ಮಾರಾಟವಾಗಿವೆ.
ನಂದಿಹಳ್ಳಿ ಹೊನ್ನಮ್ಮದೇವಿ ಜಾತ್ರೆ ಇಂದಿನಿಂದ
ಸವಣೂರು: ತಾಲೂಕಿನ ನಂದಿಹಳ್ಳಿ ಗ್ರಾಮದ ಆದಿಶಕ್ತಿ ಹೊನ್ನಮ್ಮದೇವಿ ಜಾತ್ರಾ ಮಹೋತ್ಸವ ಮಾ. 18 ಮತ್ತು 19ರಂದು ವಿಜೃಂಭಣೆಯಿಂದ ಜರುಗಲಿದೆ.
ಮಾ. 18ರಂದು ಪ್ರಾತಃಕಾಲ ಆದಿಶಕ್ತಿ ಹೊನ್ನಮ್ಮದೇವಿಗೆ ಅಭಿಷೇಕ, ಮಹಾಪೂಜೆ, ಬಿಲ್ವಾರ್ಚನೆ, ಪುಷ್ಪಾಲಂಕಾರ, ಬೆಳಗ್ಗೆ 7.30ಕ್ಕೆ ಕುಂಭ ಪೂಜೆ ನಡೆಯಲಿದೆ. ನಂತರ ಪೂರ್ಣ ಕುಂಭಮೇಳ, ದೇವಿಯ ಪಲ್ಲಕ್ಕಿ ಉತ್ಸವ ಮಂತ್ರೋಡಿಯ ಸಿದ್ಧರಾಮೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭಜನೆ ಸೇರಿದಂತೆ ಸಕಲ ವಾದ್ಯ ವೈಭವಗಳೊಂದಿಗೆ ಸಾಗಲಿದೆ.ಮಧ್ಯಾಹ್ನ 1 ಗಂಟೆಗೆ ಜರುಗುವ ಧರ್ಮಸಭೆಯ ಸಾನ್ನಿಧ್ಯವನ್ನು ಶಿರಹಟ್ಟಿಯ ಫಕೀರ ಸಿದ್ಧರಾಮ ಸ್ವಾಮೀಜಿ ವಹಿಸಿ ಆಶೀರ್ವಚನ ನೀಡುವರು. ಸಂಜೆ 6 ಗಂಟೆಗೆ ಗ್ರಾಮದೇವಿ ಆದಿಶಕ್ತಿ ಹೊನ್ನಮ್ಮದೇವಿಯ ಭಾವಚಿತ್ರ ಮೆರವಣಿಗೆ ನಡೆಯಲಿದೆ.
ಫೆ. 19ರಂದು ಬೆಳಗ್ಗೆ ಗ್ರಾಮದೇವಿ ಮೂರ್ತಿಗೆ ಅಭಿಷೇಕ, ಮಹಾಪೂಜೆ, ಪುಷ್ಪಾರ್ಚನೆ, ಬಿಲ್ವಾರ್ಚನೆ ಸೇರಿದಂತೆ ಧಾರ್ಮಿಕ ಪೂಜಾ ಕೈಂಕರ್ಯಗಳು ಜರುಗಲಿವೆ. ಸಂಜೆ 7 ಗಂಟೆಗೆ ಶಿಗ್ಗಾಂವಿ ತಾಲೂಕಿನ ಕಬನೂರ ಗ್ರಾಮದ ಅಲ್ಲಿಕೇರಿ ಬಸವೇಶ್ವರ ಸಾಂಸ್ಕೃತಿಕ ಕಲಾ ತಂಡದಿಂದ ಜಾನಪದ ಉತ್ಸವ ಕಾರ್ಯಕ್ರಮ ಜರುಗಲಿದೆ ಎಂದು ಜಾತ್ರಾ ಮಹೋತ್ಸವ ಕಮೀಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.