ಬ್ಯಾಡಗಿ ಮಾರುಕಟ್ಟೆಗೆ 2.68 ಲಕ್ಷ ಚೀಲ ಮೆಣಸಿನಕಾಯಿ ಆವಕ

| Published : Mar 11 2025, 12:49 AM IST

ಸಾರಾಂಶ

ದರದಲ್ಲಿ ಮಾತ್ರ ಎಂದಿನಂತೆ ಸ್ಥಿರತೆ ಕಂಡುಕೊಂಡಿದೆ. ಮಾರುಕಟ್ಟೆಯಲ್ಲಿ ಸೀಡ್ ವೆರೈಟಿ ಮೆಣಸಿನಕಾಯಿ ಪ್ರಮಾಣ ಹೆಚ್ಚಾಗಿದೆ.

ಬ್ಯಾಡಗಿ: ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆಗೆ ಮಾ. 10ರಂದುು ಮೆಣಸಿನಕಾಯಿ ಚೀಲಗಳಲ್ಲಿ ಗಣನೀಯ ಏರಿಕೆ ಕಂಡುಬಂದಿದ್ದು, ಪ್ರಸಕ್ತ ವರ್ಷದ ಸೀಸನ್‌ನಲ್ಲಿ ಅತಿ ಹೆಚ್ಚು ಅಂದರೆ 2.68 ಲಕ್ಷ ಚೀಲ ಮೆಣಸಿಕಾಯಿ ಆವಕವಾಗುವ ಮೂಲಕ ವ್ಯಾಪಾರ ವಹಿವಾಟು ಜೋರಾಗಿ ನಡೆಯಿತು.ಪಟ್ಟಣದ ಗ್ರಾಮದೇವತೆ ಜಾತ್ರೆ ನಿಮಿತ್ತ ಕಳೆದ ವಾರ ಪೂರ್ತಿ ರಜೆ ಘೋಷಿಸಲಾಗಿತ್ತು. ದರದಲ್ಲಿ ಮಾತ್ರ ಎಂದಿನಂತೆ ಸ್ಥಿರತೆ ಕಂಡುಕೊಂಡಿದೆ. ಮಾರುಕಟ್ಟೆಯಲ್ಲಿ ಸೀಡ್ ವೆರೈಟಿ ಮೆಣಸಿನಕಾಯಿ ಪ್ರಮಾಣ ಹೆಚ್ಚಾಗಿದೆ. ಇನ್ನುಳಿದಂತೆ ಉತ್ತಮ ಬ್ಯಾಡಗಿ ಕಡ್ಡಿ ಮತ್ತು ಡಬ್ಬಿ ಗುಣಮಟ್ಟದ ಮೆಣಸಿನಕಾಯಿ ಆವಕದಲ್ಲಿ ಪ್ರಮಾಣ ಕಡಿಮೆ ಇದ್ದುದರಿಂದ ವರ್ತಕರು ಇಂತಹ ಚೀಲಗಳ ಖರೀದಿಗೆ ಪೈಪೋಟಿ ನಡೆಸಿದರು.ದರ ಕುಸಿತವೆಂದು ರೈತರು ನಡೆಸಿದ ಗಲಾಟೆಯಿಂದ ಎಚ್ಚೆತ್ತುಕೊಂಡಿರುವ ಪೋಲಿಸ್ ಇಲಾಖೆ ಪ್ರಸಕ್ತ ವರ್ಷದ ಸೀಸನ್ ಆರಂಭದಿಂದಲೂ ಬಿಗಿ ಭದ್ರತೆ ಏರ್ಪಡಿಸಿದ್ದು, ಹೆಚ್ಚಿನ ಸಿಬ್ಬಂದಿ ನಿಯೋಜನೆ ಮಾಡುವ ಮೂಲಕ ರೈತರ ಹೆಸರಿನಲ್ಲಿ ಪುಂಡಾಟ ಮಾಡುವವರ ಬಗ್ಗೆ ತೀವ್ರ ನಿಗಾ ವಹಿಸಿದೆ. ಹೀಗಾಗಿ ಸೋಮವಾರ ಮಾರುಕಟ್ಟೆ ದರದಲ್ಲಿ ಕುಸಿತ ಕಾಣಲಿದೆ ಎಂಬ ಮಾಹಿತಿ ಹಿನ್ನೆಲೆ ರಕ್ಷಣಾ ಇಲಾಖೆ ಸಿಬ್ಬಂದಿಗಳೊಂದಿಗೆ ಸೋಮವಾರ ಬೆಳಗ್ಗೆ ಮತ್ತು ಮಧ್ಯಾಹ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಎರಡು ಬಾರಿ ರೌಂಡ್ಸ್‌ ನಡೆಸಿದರು.

ಸೋಮವಾರದ ಮಾರುಕಟ್ಟೆ ದರ: ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಸೋಮವಾರ 2.68.354 ಚೀಲಗಳು ಮಾರಾಟಕ್ಕೆ ಸಿಕ್ಕಿದ್ದು, ಕಡ್ಡಿತಳಿ ಮೆಣಸಿನಕಾಯಿ ಕನಿಷ್ಠ ₹2489 ಗರಿಷ್ಠ ₹27559, ಡಬ್ಬಿತಳಿ ಕನಿಷ್ಠ ₹2909, ಗರಿಷ್ಠ ₹34249, ಗುಂಟೂರು ಕನಿಷ್ಠ ₹989, ಗರಿಷ್ಠ ₹15609ಕ್ಕೆ ಮಾರಾಟವಾಗಿವೆ.ರೈತರ ಗಲಭೆಗೆ ಒಂದು ವರ್ಷ

ಕಳೆದ ವರ್ಷ(2024 ಮಾ. 11)ರಂದು ಯಾರೂ ಊಹಿಸದ ಘಟನೆಯೊಂದು ಪಟ್ಟಣದ ಅಂತಾರಾಷ್ಟೀಯ ಮಾರುಕಟ್ಟೆಯಲ್ಲಿ ನಡೆದಿತ್ತು. ದರ ಕುಸಿತವೆಂಬ ಕಾರಣಕ್ಕೆ ಕಾನೂನು ಕೈಗೆ ತೆಗೆದುಕೊಂಡಿದ್ದ ರೈತರು ದಾಂಧಲೆ ನಡೆಸಿ ಕೋಟ್ಯಂತರ ರು. ಮೌಲ್ಯದ ಆಸ್ತಿಗಳನ್ನು ಹಾನಿಪಡಿಸಿದ್ದರು. ಇಷ್ಟಾದರೂ ಎಚ್ಚೆತ್ತುಕೊಳ್ಳದ ಪೊಲೀಸ್‌ ಇಲಾಖೆ ಪೊಲೀಸ್ ಚೌಕಿ ಸೇರಿದಂತೆ ಇನ್ನಿತರ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ.ರೈತರ ರಕ್ಷಣೆ : ರಾಜ್ಯದ ವಿವಿಧ ಜಿಲ್ಲೆಗಳು ಸೇರಿದಂತೆ ಹೊರ ರಾಜ್ಯದಿಂದ ಮೆಣಸಿನಕಾಯಿ ಮಾರಾಟಕ್ಕೆ ಬಂದಿರುವ ರೈತರ ರಕ್ಷಣೆ ನಮ್ಮ ಜವಾಬ್ದಾರಿ, ಪೊಲೀಸ್ ಸಿಬ್ಬಂದಿ ಎಂದೊಡನೆ ಭಯ ಬೇಡ. ಮುಕ್ತವಾಗಿ ವ್ಯಾಪಾರ ವಹಿವಾಟು ಮಾಡಿ. ಆದರೆ ಕಾನೂನು ಕೈಗೆತ್ತಿಕೊಳ್ಳುವ ಕೆಲಸಕ್ಕೆ ಯಾರೂ ಕೈ ಹಾಕದಿರಲಿ ಎಂದು ಪಿಎಸ್‌ಐ ಅರವಿಂದ ಬ್ಯಾಡಗಿ ತಿಳಿಸಿದರು.