ಸರಕು ನೌಕೆ ಬೆಂಕಿ ಶಮನಕ್ಕೆ ಸಹಾಯತಾ ಕಾರ್ಯಾಚರಣೆ 11ನೇ ದಿನಕ್ಕೆ

| Published : Jul 30 2024, 12:30 AM IST

ಸಾರಾಂಶ

ಗುಜರಾತ್‌ನಿಂದ ಶ್ರೀಲಂಕಾದ ಕೊಲಂಬೋಗೆ ಸರಕುಗಳನ್ನು ಸಾಗಿಸುತ್ತಿದ್ದ ಪನಾಮಾ ದೇಶದ ಮಾಯರಿಸ್ಕ್‌ ಫ್ರಾಂಕ್‌ಫರ್ಟ್‌ ಹೆಸರಿನ ಹಡಗಿನ (ಕಂಟೈನರ್‌ ವಾಹಕ ನೌಕೆ) ಬೆಂಕಿ ನಂದಿಸುವ ಹಾಗೂ ಸಂಭಾವ್ಯ ಸಮುದ್ರ ಮಾಲಿನ್ಯ ತಡೆಗಟ್ಟುವ ‘ಸಹಾಯತಾ’ ಕಾರ್ಯಾಚರಣೆ ಸೋಮವಾರ 11ನೇ ದಿನ ಪೂರೈಸಿದೆ. ಸದ್ಯ ಹಡಗು ಮಂಗಳೂರಿನಿಂದ ನೈಋುತ್ಯಕ್ಕೆ 50 ನಾಟಿಕಲ್‌ ಮೈಲು ಹಾಗೂ ಸಮುದ್ರ ತೀರದಿಂದ 37 ನಾಟಿಕಲ್‌ ಮೈಲು ದೂರದಲ್ಲಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಗುಜರಾತ್‌ನಿಂದ ಶ್ರೀಲಂಕಾದ ಕೊಲಂಬೋಗೆ ಸರಕುಗಳನ್ನು ಸಾಗಿಸುತ್ತಿದ್ದ ಪನಾಮಾ ದೇಶದ ಮಾಯರಿಸ್ಕ್‌ ಫ್ರಾಂಕ್‌ಫರ್ಟ್‌ ಹೆಸರಿನ ಹಡಗಿನ (ಕಂಟೈನರ್‌ ವಾಹಕ ನೌಕೆ) ಬೆಂಕಿ ನಂದಿಸುವ ಹಾಗೂ ಸಂಭಾವ್ಯ ಸಮುದ್ರ ಮಾಲಿನ್ಯ ತಡೆಗಟ್ಟುವ ‘ಸಹಾಯತಾ’ ಕಾರ್ಯಾಚರಣೆ ಸೋಮವಾರ 11ನೇ ದಿನ ಪೂರೈಸಿದೆ.

ಸದ್ಯ ಹಡಗು ಮಂಗಳೂರಿನಿಂದ ನೈಋುತ್ಯಕ್ಕೆ 50 ನಾಟಿಕಲ್‌ ಮೈಲು ಹಾಗೂ ಸಮುದ್ರ ತೀರದಿಂದ 37 ನಾಟಿಕಲ್‌ ಮೈಲು ದೂರದಲ್ಲಿದೆ. ಕರ್ನಾಟಕ ಭಾಗದಲ್ಲಿ ಸಮುದ್ರ ಮಾಲಿನ್ಯ ಅಥವಾ ಇತರ ಯಾವುದೇ ರೀತಿಯ ಅಪಾಯಗಳಿಲ್ಲ ಎಂದು ಕರಾವಳಿ ರಕ್ಷಣಾ ಪಡೆ ತಿಳಿಸಿದೆ. ಈ ಹಡಗು ಜು.19ರಂದು ಗೋವಾದಿಂದ 80 ನಾಟಿಕಲ್‌ ಮೈಲು ದೂರದಲ್ಲಿ ಸಂಚರಿಸುತ್ತಿದ್ದಾಗ ಸರಕುಗಳು ತುಂಬಿದ್ದ ಕಂಟೈನರ್‌ಗೆ ಬೆಂಕಿ ಹತ್ತಿಕೊಂಡಿತ್ತು. ಇದರಲ್ಲಿ 21 ಮಂದಿ ವಿದೇಶಿ ಸಿಬಂದಿ ಇದ್ದು ಈ ಪೈಕಿ ಓರ್ವ ನಾಪತ್ತೆಯಾಗಿದ್ದಾರೆ. ಉಳಿದವರು ಸುರಕ್ಷಿತರಾಗಿದ್ದಾರೆ. ಹಡಗು ಕೂಡ ಸ್ಥಿರವಾಗಿದೆ ಎಂದು ಕರಾವಳಿ ರಕ್ಷಣಾ ಪಡೆ ತಿಳಿಸಿದೆ.ಕರಾವಳಿ ರಕ್ಷಣಾ ಪಡೆಯ 5 ಹಡಗುಗಳು, 2 ಎಎಲ್‌ಎಚ್‌ ಹೆಲಿಕಾಪ್ಟರ್‌ಗಳು ಮತ್ತು 1 ಡಾರ್ನಿಯರ್‌ ಏರ್‌ಕ್ರಾಫ್ಟರ್‌ಗಳು ಸಹಾಯತಾ ಕಾರ್ಯಾಚರಣೆ ನಡೆಸಿವೆ. ಇದುವರೆಗೆ ಬೆಂಕಿ ನಂದಿಸುವುದಕ್ಕಾಗಿ 1,200 ಕೆ.ಜಿಗೂ ಅಧಿಕ ಡ್ರೈ ಕೆಮಿಕಲ್‌ ಪೌಡರ್‌ನ್ನು ಸುರಿಯಲಾಗಿದೆ. ಮಾಲಿನ್ಯ ನಿಯಂತ್ರಣಕ್ಕಾಗಿ ಇರುವ ಕರಾವಳಿ ರಕ್ಷಣಾ ಪಡೆಯ ವಿಶೇಷ ಹಡಗು ‘ಸಮುದ್ರ ಪ್ರಹಾರಿ’ ಕೂಡ ಕಾರ್ಯಾಚರಣೆಯಲ್ಲಿದ್ದು, ಈ ಹಡಗು ಡೈನಾಮಿಕ್‌ ಪೊಸಿಸನಿಂಗ್‌ ಸಿಸ್ಟಂನ್ನು ಹೊಂದಿದೆ. ಹಡಗಿನ ಸನಿಹದಿಂದಲೇ ಬೆಂಕಿ ನಂದಿಸುವ ಕಾರ್ಯಾಚರಣೆ ಕೂಡ ನಡೆಸುತ್ತದೆ. ಈಗಾಗಲೇ ಶಿಪ್ಪಿಂಗ್‌ ಡಿಜಿ, ರಾಜ್ಯ ಸರ್ಕಾರ, ಬಂದರುಗಳು, ಸಾಲ್ವೇಜ್‌ ಏಜೆನ್ಸಿ, ಶಿಪ್‌ ಮಾಲಕರೊಂದಿಗೆ ಕರಾವಳಿ ರಕ್ಷಣಾ ಪಡೆ ಸಮನ್ವಯತೆ ಸಾಧಿಸುತ್ತಿದ್ದು ಶೀಘ್ರ ಬೆಂಕಿ ನಂದಿಸುವ ವಿಶ್ವಾಸವಿದೆ ಎಂದು ಕರಾವಳಿ ರಕ್ಷಣಾ ಪಡೆ ತಿಳಿಸಿದೆ.ಹೆಚ್ಚುವರಿ ಟಗ್‌ಗಳು ಕೂಡ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಲಿವೆ. ಅಲ್ಲದೆ ಶಾರ್ಜಾದಿಂದ ಎಚ್‌ಟಿಎಸ್‌ ಹಡಗು ಕೂಡ ಸೋಮವಾರದಿಂದ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುತ್ತಿದೆ. ನಾಪತ್ತೆಯಾದ ಓರ್ವನ ಪತ್ತೆಗೂ ಕಾರ್ಯಾಚರಣೆ ನಡೆಯುತ್ತಿದೆ. ಸಮುದ್ರ ಪ್ರಕ್ಷುಬ್ಧಗೊಂಡಿರುವುದು ಕಾರ್ಯಾಚರಣೆಗೆ ಸವಾಲಾಗಿದೆ. ಬೆಂಕಿಯನ್ನು ಶೀಘ್ರದಲ್ಲೇ ಪೂರ್ಣವಾಗಿ ನಂದಿಸುವ ವಿಶ್ವಾಸವಿದೆ. ಅದೇ ರೀತಿ ಯಾವುದೇ ಮಾಲಿನ್ಯ ತಡೆಯಲು ಕೂಡ ಅಗತ್ಯ ಕಾರ್ಯಾಚರಣೆ ನಡೆಯುತ್ತಿದೆ ಎಂದು ತಟ ರಕ್ಷಣಾ ಪಡೆ ಪ್ರಕಟಣೆಯಲ್ಲಿ ತಿಳಿಸಿದೆ.