ಸಾರಾಂಶ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಉತ್ತರ ಕರ್ನಾಟಕದ ಪ್ರಮುಖ ಆಸ್ಪತ್ರೆಯಾಗಿರುವ ಕಿಮ್ಸ್‌ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಪ್ರಗತಿ ಪರಿಶೀಲನೆ ನಡೆಸಿದರು. ಕಿಮ್ಸ್‌ಗೆ ಬೇಕಾದ ಸೌಲಭ್ಯಗಳ ಕುರಿತಾಗಿ ಸಮಗ್ರ ಪ್ರಸ್ತಾವನೆ ಸಲ್ಲಿಸುವಂತೆ ಸಚಿವರು ನಿರ್ದೇಶಕರಿಗೆ ಸಲಹೆ ಮಾಡಿದರು.ಮಹಾನಗರ ಪಾಲಿಕೆಯಲ್ಲಿ ಪೌರಕಾರ್ಮಿಕರಿಗೆ ನೀಡುತ್ತಿರುವ ನೇರ ವೇತನ ವ್ಯವಸ್ಥೆಯನ್ನು ಕಿಮ್ಸ್‌ನಲ್ಲೂ ಅಳವಡಿಸಿಕೊಳ್ಳಿ. ಇದರಿಂದ ಕಿಮ್ಸ್‌ಗೆ ಪ್ರತಿವರ್ಷ ಕೋಟಿಗಟ್ಟಲೇ ಉಳಿತಾಯವಾಗುತ್ತದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಈ ವೇಳೆ ತಿಳಿಸಿದರು ಎನ್ನಲಾಗಿದೆ. ಇದಕ್ಕೆ ಸಚಿವರು ಬೆಂಗಳೂರಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳೋಣ ಎಂದರು.
ಹೊರಗುತ್ತಿಗೆ ಸಿಬ್ಬಂದಿಗೆ ಸರಿಯಾಗಿ ಸಂಬಳ ಪಾವತಿಸದ ಏಜೆನ್ಸಿ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಸಚಿವರು ಸೂಚಿಸಿದರು. ಕಿಮ್ಸ್‌ನಲ್ಲಿ ಏಜೆನ್ಸಿಯವರು ದೊಡ್ಡ ಮಟ್ಟದ ಲಾಭಿ ಹೊಂದಿದ್ದು, ಹೊರಗುತ್ತಿಗೆ ಸಿಬ್ಬಂದಿಗೆ ಹೆದರಿಸಿ, ಬೆದರಿಸಿ ಹಣ ಕೀಳುತ್ತಿರುವ ಬಗ್ಗೆ ವ್ಯಾಪಕ ದೂರುಗಳಿವೆ. ಒಂದೊಂದು ತಿಂಗಳು ವೇತನ ಪಡೆದು ವಂಚಿಸುತ್ತಿದ್ದಾರೆ. ಆದಕಾರಣ ನೇರ ವೇತನ ಪಾವತಿಯಡಿ ನೇಮಿಸಿಕೊಳ್ಳುವುದು ಸೂಕ್ತ. ಈ ಬಗ್ಗೆ ಗಂಭೀರ ಚಿಂತನೆ ನಡೆಸಬೇಕೆಂದೂ ಶಾಸಕ ಟೆಂಗಿನಕಾಯಿ ಮನವಿ ಮಾಡಿದರು ಎನ್ನಲಾಗಿದೆ. ಇದಕ್ಕೆ ಸಹಮತ ವ್ಯಕ್ತಪಡಿಸಿದ ಸಚಿವ ಲಾಡ್, ಈ ಬಗ್ಗೆ ಬೆಂಗಳೂರಲ್ಲಿ ಚರ್ಚಿಸಿ ನಿರ್ಧಾರ ಮಾಡೊಣ ಎಂದು ಹೇಳಿದರೆನ್ನಲಾಗಿದೆ.ಹೊರ ಹಾಗೂ ಒಳರೋಗಿಗಳ ವಿಭಾಗ, ವೈದ್ಯಕೀಯ, ಔಷಧ ಪೂರೈಕೆ, ಏಜೆನ್ಸಿಗಳ ಆಟಾಟೋಪ, ಹೊರಗುತ್ತಿಗೆ ಸಿಬ್ಬಂದಿಗೆ ಸರಿಯಾಗಿ ವೇತನ ಬಟವಡೆ ಮಾಡದಿರುವುದು, ಎಬಿಆರ್‌ಕೆ ಹಣ ಬಳಕೆ, ಬಳಕೆದಾರರ ಶುಲ್ಕ ವಿನಿಯೋಗ, ಸಿಎಸ್‌ಆರ್ ಚಟುವಟಿಕೆಗಳು, ಎಸ್ಟೇಟ್ ಅಧಿಕಾರಿ ಹಾಗೂ ಹಣಕಾಸು ಅಧಿಕಾರಿಯ ಕಾರ್ಯವೈಖರಿ ಬಗ್ಗೆ ವ್ಯಾಪಕ ಚರ್ಚೆ ನಡೆಯಿತು.
ಕ್ಯಾಂಪಸ್ ಅಧಿಕಾರಿ ತರಾಟೆಗೆಕಿಮ್ಸ್ ಕ್ಯಾಂಪಸ್ ಮತ್ತು ಚಟುವಟಿಕೆಗಳ ಬಗ್ಗೆ ಸಚಿವರು ಕೇಳಿದ ಮಾಹಿತಿಗೆ ಸಮರ್ಪಕ ಮಾಹಿತಿ ನೀಡದ ಎಸ್ಟೇಟ್ ಅಧಿಕಾರಿ ಉದಯಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡರು. ಸರಿಯಾಗಿ ಮಾಹಿತಿ ತರಲು ಏನು ಸಮಸ್ಯೆ ಎಂದು ಪ್ರಶ್ನಿಸಿದರು. ಕಿಮ್ಸ್ ಬಗ್ಗೆ ಮಾಹಿತಿ ಇಲ್ಲದಿದ್ದರೆ ಎಸ್ಟೇಟ್ ಅಧಿಕಾರಿಯಾಗಿ ಏನು ಮಾಡುತ್ತೀರಿ ಎಂದು ಸಚಿವರು, ಶಾಸಕರು ಕೇಳಿದರು.
ಕಿಮ್ಸ್‌ನಲ್ಲಿ ಎಷ್ಟುಜನ ಸಿಬ್ಬಂದಿ ಕೆಲಸ ಮಾಡುತ್ತಾರೆ ಎಂಬುದನ್ನು ಹೆಡ್ ಕೌಂಟ್ ಮಾಡಿದ್ದೀರಾ ಎಂದು ಕೇಳಿದ ಪ್ರಶ್ನೆಗೆ, ಇಲ್ಲ ಎಂದು ಹಣಕಾಸು ಅಧಿಕಾರಿಗೆ, ಹಾಗಾದರೆ ಸಂಬಳ ಹೇಗೆ ಬಿಡುಗಡೆ ಮಾಡುತ್ತೀರಿ ಎಂದು ದಬಾಯಿಸಿದರು. ದಾಖಲೆಯಲ್ಲಿ 100 ಜನ ಇದ್ದರೆ ವಾಸ್ತವದಲ್ಲಿ 50-60 ಜನ ಮಾತ್ರ ಕೆಲಸ ಮಾಡುತ್ತಿದ್ದಾರೆ ಎಂಬ ಮಾಹಿತಿ ಇದೆ. ಉಳಿದ ಸಿಬ್ಬಂದಿ ಸಂಬಳ ಎಲ್ಲಿ ಹೋಗುತ್ತದೆ ಎಂದು ಶಾಸಕರು, ಸಚಿವರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು ಎಂದು ತಿಳಿದು ಬಂದಿದೆ. ನಾಳೆಯಿಂದ ಸರಿಯಾಗಿ ಸಿಬ್ಬಂದಿ ಲೆಕ್ಕ ಪಡೆದು ಸಂಬಳ ಬಿಡುಗಡೆ ಮಾಡುವಂತೆ ಸೂಚಿಸಿದರು.ರೋಗಿಗಳಿಗೆ ನೀಡುವ ಸೌಲಭ್ಯಗಳಲ್ಲಿ ಯಾವುದೇ ಕೊರತೆಯಾಗಬಾರದು ಹಾಗೂ ಆಸ್ಪತ್ರೆಯಲ್ಲಿ ಶುಚಿತ್ವಕ್ಕೆ ಮಹತ್ವ ನೀಡಬೇಕು ಎಂದು ಸಲಹೆ ಮಾಡಿದರು.
ವಿವಿಧ ಆರೋಗ್ಯ ಯೋಜನೆಗಳ ಅಡಿಯಲ್ಲಿ ಕಿಮ್ಸಗೆ ಸರಕಾರ ನೀಡುತ್ತಿರುವ ಅನುದಾನದಲ್ಲಿ ಬಳಕೆ ಮಾಡಲಾದ ಖರ್ಚು ವೆಚ್ಚಗಳು ಮತ್ತು ನಿರ್ವಹಣೆ ಕುರಿತು ಚರ್ಚೆ ನಡೆಯಿತು.ಆರೋಗ್ಯ ವಿಮೆ ಯೋಜನೆ ಅಡಿಯಲ್ಲಿ ಚಿಕಿತ್ಸೆ ಪಡೆದ ರೋಗಿಗಳಿಗೆ ವಿಮಾ ಸಂಸ್ಥೆಗಳಿಂದ ಸರಿಯಾದ ಸಮಯಕ್ಕೆ ವಿಮಾ ಮೊತ್ತ ದೊರೆಯದಿರುವ ಕುರಿತು ಚರ್ಚಿಸಿ, ಇದರ ಕುರಿತು ಸೂಕ್ತ ಕ್ರಮ ತೆಗೆದುಕೊಳ್ಳಲು ಸಚಿವರು ಸೂಚಿಸಿದರು.
ಸಭೆಯಲ್ಲಿ ಶಾಸಕರಾದ ಮಹೇಶ ಟೆಂಗಿನಕಾಯಿ, ಎನ್.ಎಚ್. ಕೊನರೆಡ್ಡಿ, ಜಿಲ್ಲಾಧಿಕಾರಿ ದಿವ್ಯಪ್ರಭು, ಕಿಮ್ಸ್ ನಿರ್ದೇಶಕ ಡಾ. ಎಸ್.ಎಫ್. ಕಮ್ಮಾರ, ಪ್ರಾಚಾರ್ಯ ಡಾ. ಈಶ್ವರ ಹೊಸಮನಿ ಹಾಗೂ ಇತರರು ಉಪಸ್ಥಿತರಿದ್ದರು.