ಉತ್ತರ ಕನ್ನಡ ಜಿಲ್ಲೆಯಲ್ಲಿ ಸಂಚಲನ ಮೂಡಿಸಿರುವ ರಿಶೇಲ್ ಡಿಸೋಜಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೆಸರಿನಲ್ಲಿ ಸುಳ್ಳು ಸುದ್ದಿಯನ್ನು ಸೃಷ್ಟಿಸಿ, ವಾಟ್ಸ್‌ಆ್ಯಪ್‌ ಗ್ರೂಪ್‌ಗಳಲ್ಲಿ ಹರಿಬಿಟ್ಟ ಆರೋಪದಡಿ ವ್ಯಕ್ತಿಯೊಬ್ಬನ ವಿರುದ್ಧ ಕದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರವಾರ: ಜಿಲ್ಲೆಯಲ್ಲಿ ಸಂಚಲನ ಮೂಡಿಸಿರುವ ರಿಶೇಲ್ ಡಿಸೋಜಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೆಸರಿನಲ್ಲಿ ಸುಳ್ಳು ಸುದ್ದಿಯನ್ನು ಸೃಷ್ಟಿಸಿ, ವಾಟ್ಸ್‌ಆ್ಯಪ್‌ ಗ್ರೂಪ್‌ಗಳಲ್ಲಿ ಹರಿಬಿಟ್ಟ ಆರೋಪದಡಿ ವ್ಯಕ್ತಿಯೊಬ್ಬನ ವಿರುದ್ಧ ಕದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕದ್ರಾ ಠಾಣೆಯ ಪೊಲೀಸ್ ಕಾನ್‌ಸ್ಟೆಬಲ್‌ ಮಹೇಶ್ ಸಾಂವಸಗಿ ಅವರು ನೀಡಿದ ದೂರಿನನ್ವಯ, ವಾಟ್ಸ್‌ಆ್ಯಪ್‌ ಬಳಕೆದಾರನ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಕಲಂ 353(2) ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಆರೋಪಿತ ವ್ಯಕ್ತಿ ಜ. 20ರಂದು ಬೆಳಗ್ಗೆ ''ಅತಾ ಅಮ್ಚಿ ಸಟಕ್ಲಿ'' (Aata Amachi Satakli) ಎಂಬ ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ "kadra case pdf " ಎಂಬ ಹೆಸರಿನ ಸುಳ್ಳು ವರದಿಯೊಂದನ್ನು ಹರಿಬಿಟ್ಟಿದ್ದ. ಅದರಲ್ಲಿ, ಜ. 18ರಂದು ಎಸ್‌ಪಿ ಅವರು ಪತ್ರಿಕಾಗೋಷ್ಠಿ ನಡೆಸಿದ್ದು, ರಿಶೇಲ್ ಡಿಸೋಜಾಳ 2ನೇ ಮರಣೋತ್ತರ ಪರೀಕ್ಷೆಯಲ್ಲಿ ಆಕೆಯ ಮೇಲೆ ದೈಹಿಕ ಹಲ್ಲೆ ನಡೆದಿರುವುದು ದೃಢಪಟ್ಟಿದೆ. ಆರೋಪಿ ಚಿರಾಗ್ ಕೊಠಾರ್ಕರ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ ಮತ್ತು ಮೃತಳ ಮೊಬೈಲ್‌ನಲ್ಲಿ ವಾಯ್ಸ್ ನೋಟ್ ಸಿಕ್ಕಿದೆ ಎಂಬಿತ್ಯಾದಿ ಸುಳ್ಳು ಮಾಹಿತಿಗಳನ್ನು ನಮೂದಿಸಲಾಗಿತ್ತು.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಪೊಲೀಸರು, 2026 ಜ. 18ರಂದು ಎಸ್‌ಪಿ ಅವರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಪತ್ರಿಕಾಗೋಷ್ಠಿ ನಡೆಸಿಲ್ಲ. ಹಾಗೆಯೇ 2ನೇ ಮರಣೋತ್ತರ ಪರೀಕ್ಷೆಯ ವರದಿಯನ್ನು ವೈದ್ಯರು ಇನ್ನೂ ನೀಡಿಲ್ಲ. ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿರುವ ಸಂದೇಶ ಸಂಪೂರ್ಣ ಸುಳ್ಳು ಮತ್ತು ಕಪೋಲಕಲ್ಪಿತ. ಇದು ಸಾರ್ವಜನಿಕರಲ್ಲಿ ಗೊಂದಲ ಮೂಡಿಸುವ ದುರುದ್ದೇಶದ ಕೃತ್ಯ ಎಂದು ತಿಳಿಸಿದ್ದಾರೆ. ಸುಳ್ಳು ಸುದ್ದಿ ಹಬ್ಬಿಸಿ ಸಾರ್ವಜನಿಕ ಶಾಂತಿಗೆ ಭಂಗ ತರಲು ಯತ್ನಿಸಿದ ಆರೋಪದ ಮೇಲೆ ಕದ್ರಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ರಿಶೆಲ್ ಆತ್ಮಹತ್ಯೆ ಪ್ರಕರಣ, ಚಿರಾಗ್ ಬಂಧನ: ಕಾರವಾರ ತಾಲೂಕಿನ ಕದ್ರಾ ಯುವತಿ ರಿಶೇಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿರುವ ಚಿರಾಗ್ ಎಂಬಾತನನ್ನು ಪೊಲೀಸರು ಚೆನ್ನೈನಲ್ಲಿ ಬಂಧಿಸಿರುವುದಾಗಿ ತಿಳಿದುಬಂದಿದೆ.

ಚೆನ್ನೈನಲ್ಲಿ ಚಿರಾಗ್ ತಮ್ಮ ಚಿಕ್ಕಪ್ಪನ ಮನೆಯಲ್ಲಿ ಇರುವ ಸುಳಿವಿನ ಮೇರೆಗೆ ಪೊಲೀಸರು ಅಲ್ಲಿಗೆ ತೆರಳಿ ಬಂಧಿಸಿದ್ದಾರೆ. 20 ದಿನಗಳಿಂದ ಚಿರಾಗ್‌ಗಾಗಿ ಹುಡುಕಾಟ ನಡೆಸುತ್ತಿದ್ದರು. ಈ ನಡುವೆ ಗುರುವಾರ ಚಿರಾಗ್‌ನ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆಸಿ ತೀರ್ಪನ್ನು ನ್ಯಾಯಾಧೀಶರು ಜ. 31ಕ್ಕೆ ಕಾಯ್ದಿರಿಸಿದ್ದಾರೆ.