ಕುಂದಗೋಳ ಕ್ಷೇತ್ರದಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಗಣನೀಯ ಕಡಿಮೆಯಾಗುತ್ತಿದೆ. 2 ವರ್ಷದಲ್ಲಿ 2 ಸಾವಿರ ಮಕ್ಕಳು ಸರ್ಕಾರಿ ಶಾಲೆ ಬಿಟ್ಟು ಖಾಸಗಿ ಶಾಲೆಗೆ ಹೋಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಶಾಸಕ ಎಂ.ಆರ್. ಪಾಟೀಲ ಹೇಳಿದರು.
ಹುಬ್ಬಳ್ಳಿ:
ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳಿಲ್ಲ. ಕ್ರೀಡಾಂಗಣಗಳಿಲ್ಲ. ಹೀಗಾಗಿ ಮಕ್ಕಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಸರ್ಕಾರ ಏನು ಮಾಡುತ್ತಿದೆ ಎಂದು ಶಾಸಕ ಎಂ.ಆರ್. ಪಾಟೀಲ ಪ್ರಶ್ನಿಸಿದರು.ವಿಧಾನಸಭೆ ಅಧಿವೇಶನದಲ್ಲಿ ಚುಕ್ಕೆ ಗುರುತಿನ ಪ್ರಶ್ನೆ ಕೇಳಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಕುಂದಗೋಳ ಕ್ಷೇತ್ರದಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಗಣನೀಯ ಕಡಿಮೆಯಾಗುತ್ತಿದೆ. 2 ವರ್ಷದಲ್ಲಿ 2 ಸಾವಿರ ಮಕ್ಕಳು ಸರ್ಕಾರಿ ಶಾಲೆ ಬಿಟ್ಟು ಖಾಸಗಿ ಶಾಲೆಗೆ ಹೋಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಏಕೆಂದರೆ ಅಲ್ಲಿ ಶೌಚಾಲಯಗಳಿಲ್ಲ. ಕ್ರೀಡಾಂಗಣಗಳಿಲ್ಲ. ಹೀಗಾಗಿ ಮಕ್ಕಳು ಏಕೆ ಬರಬೇಕು. ವಿದ್ಯಾರ್ಥಿನಿಯರನ್ನು ಕಳುಹಿಸಲು ಪಾಲಕರು ಹಿಂಜರಿಯುತ್ತಿದ್ದಾರೆ. ಶಿಕ್ಷಕಿಯರಿಗೆ ಶೌಚಾಲಯಗಳೇ ಇಲ್ಲ. ಹೇಗೆ ಅವರು ಕರ್ತವ್ಯ ಮಾಡಬೇಕೆಂದು ತರಾಟೆಗೆ ತೆಗೆದುಕೊಂಡರು.ಇನ್ನು ಶೌಚಾಲಯಗಳಿದ್ದರೂ ಪ್ರಯೋಜವಿಲ್ಲ. ಬರೀ ಕಾಗದದಲ್ಲೇ ಇವೆ ಅಷ್ಟೇ ಎಂದ ಪಾಟೀಲ್, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ನೆರವಿನೊಂದಿಗೆ ಸಿಎಸ್‌ಆರ್ ಫಂಡ್‌ನಲ್ಲಿ ನಿರ್ಮಿಸಿರುವ ಶೌಚಾಲಯಗಳು ಹತ್ತು ವರ್ಷವಾದರು ಸುಸ್ಥಿತಿಯಲ್ಲಿವೆ. ಆದರೆ, ಸರ್ಕಾರ ನಿರ್ಮಿಸಿರುವ ಶೌಚಾಲಯ ಎರಡ್ಮೂರು ವರ್ಷಗಳಲ್ಲೇ ಹಾಳಾಗುತ್ತಿವೆ. ಅದ್ಹೇಗೆ ಸರ್ಕಾರ ಸರಿಯಾಗಿ ನಿರ್ಮಿಸುತ್ತಿಲ್ಲವೇ? ಹೀಗಾದರೆ ಸರ್ಕಾರಿ ಶಾಲೆಗಳ ಅಭಿವೃದ್ಧಿ ಹೇಗೆ? ಖಾಸಗಿ ಶಾಲೆಗಳಿಗೆ ಹತ್ತಾರು ಕಂಡಿಷನ್ ಹಾಕುತ್ತೇವೆ. ಆದರೆ, ಸರ್ಕಾರಿ ಶಾಲೆಗಳಲ್ಲಿ ಕ್ರೀಡಾಂಗಣಗಳಿಲ್ಲ. ಇದನ್ನು ಯಾರು ಪ್ರಶ್ನಿಸುವುದು ಎಂದು ಕಿಡಿಕಾರಿದರು.
ಇದಕ್ಕೆ ಉತ್ತರಿಸಿದ ಸಚಿವ ಮಧು ಬಂಗಾರಪ್ಪ, ಶೌಚಾಲಯಗಳ ಸಮಸ್ಯೆ ಇರುವ ಶಾಲೆಗಳಿಗೆ ಅಧಿಕಾರಿಗಳಿಂದ ಪರಿಶೀಲನೆ ಮಾಡಿಸಿ ತಕ್ಷಣವೇ ಕ್ರಮ ಕೈಗೊಳ್ಳಲು ಸೂಚಿಸಲಾಗುವುದು. ಶೌಚಾಲಯ ನಿರ್ಮಾಣಕ್ಕೆ ಹಣಕಾಸಿನ ಸಮಸ್ಯೆಯಿಲ್ಲ. ಆದಷ್ಟು ಬೇಗನೆ ಸಮಸ್ಯೆ ಬಗೆಹರಿಸಲಾಗುವುದು ಎಂದರು.