ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗದ ಬೇಡಿಕೆ ದಶಕಗಳದ್ದು. ಪರಿಸರ ಹಾಳಾಗದಂತೆ ಪರಿಸ್ಕೃತ ಡಿಪಿಆರ್ ಕಳುಹಿಸಲಾಗಿದೆ. ಯೋಜನೆಯಿಂದ ಕಾರವಾರ ಬಂದರು, ಸೀಬರ್ಡ್ ನೌಕಾ ಯೋಜನೆ, ಕೈಗಾ ಪರಮಾಣು ವಿದ್ಯುತ್ ಸ್ಥಾವರ ಇತ್ಯಾದಿಗಳನ್ನು ಸಂಪರ್ಕಿಸಲು ಅನುಕೂಲವಾಗುತ್ತದೆ.
ಶಿವಾನಂದ ಗೊಂಬಿ
ಹುಬ್ಬಳ್ಳಿ:ಮೊದಲು ಪ್ರತ್ಯೇಕವಾಗಿದ್ದ ರೈಲ್ವೆ ಬಜೆಟ್‌ನ್ನು 11 ವರ್ಷದಿಂದ ಕೇಂದ್ರ ಬಜೆಟ್‌ನಲ್ಲೇ ಸೇರಿಸಿ ಮಂಡಿಸಲಾಗುತ್ತಿದೆ. ಹೀಗಾಗಿ ಫೆ.1ರಂದು ಮಂಡನೆಯಾಗಲಿರುವ ಕೇಂದ್ರ ಬಜೆಟ್‌ನತ್ತ ರೈಲು ಪ್ರಯಾಣಿಕರ ಚಿತ್ತ ನೆಟ್ಟಿದ್ದು ಈ ಭಾಗದ ಬೇಡಿಕೆಗಳು ಗರಿಗೆದರಿವೆ.
ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ, ವಂದೇ ಭಾರತ ರೈಲು ನಿರ್ವಹಣೆಗೆ ವರ್ಕಶಾಪ್ ಸ್ಥಾಪನೆ, ನನೆಗುದಿಗೆ ಬಿದ್ದಿರುವ ಕಾಮಗಾರಿ, ಕಲಬುರಗಿ ವಿಭಾಗ ಸ್ಥಾಪಿಸಿ ನೈಋತ್ಯ ವಲಯದ ವ್ಯಾಪ್ತಿಗೆ ಸೇರಿಸುವುದು, ಇನ್ನಷ್ಟು ವಂದೇ ಭಾರತ ರೈಲು ಪ್ರಾರಂಭಿಸುವುದು ಸೇರಿದಂತೆ ಹತ್ತು-ಹಲವು ನಿರೀಕ್ಷೆಗಳನ್ನು ಈ ಭಾಗದ ಜನತೆ ಇಟ್ಟುಕೊಂಡಿದೆ. ಎನ್‌ಡಿಎ ಸರ್ಕಾರ ಬಂದ ಬಳಿಕ ರೈಲ್ವೆ ಕಾಮಗಾರಿಗಳೆಲ್ಲ ವೇಗ ಪಡೆದಿವೆ. ತಾಳಗುಪ್ಪ-ಶಿರಸಿ-ಹುಬ್ಬಳ್ಳಿ, ಧಾರವಾಡ- ಕಿತ್ತೂರ-ಬೆಳಗಾವಿ, ತುಮಕೂರ-ದಾವಣಗೆರೆ ಮಾರ್ಗಕ್ಕೆ ಮಂಜೂರಾತಿ ದೊರೆತಿವೆ. ಸಮೀಕ್ಷೆಗಳಷ್ಟೇ ನಡೆದು ಅಲ್ಲೇ ಉಳಿದಿವೆ. ಕೆಲವೊಂದು ರೈಲು ಮಾರ್ಗಕ್ಕೆ ಭೂಸ್ವಾಧೀನ ಪ್ರಕ್ರಿಯೆಯ ವಿಳಂಬತೆಯಿಂದ ಅಲ್ಲೇ ನಿಂತಲ್ಲೇ ನಿಂತಿವೆಯೇ ಹೊರತು ಕೆಲಸ ಮಾತ್ರ ಶುರುವಾಗುತ್ತಿಲ್ಲ. ಹಳೇ ಯೋಜನೆಗಳಾದ ಬಾಗಲಕೋಟೆ-ಕುಡಚಿ ಮಾರ್ಗ, ಗಿಣಗೇರ-ರಾಯಚೂರು, ಕಡೂರು-ಸಂಕಲೇಶಪುರ, ಗದಗ-ವಾಡಿ ಕೆಲಸಗಳು ದಶಕಗಳಿಂದಲೇ ನಡೆಯುತ್ತಲೇ ಇವೆ. ಹೊಸ ಮಾರ್ಗಗಳ ಕೆಲಸ ಬೇಗನೇ ಶುರುವಾಗಬೇಕು. ಹಳೆ ಕೆಲಸ ಬೇಗನೆ ಮುಕ್ತಾಯವಾಗಬೇಕು. ಇದಕ್ಕೆ ಹೆಚ್ಚಿನ ಅನುದಾನ ನೀಡಬೇಕು.ಹುಬ್ಬಳ್ಳಿ-ಅಂಕೋಲಾ:
ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗದ ಬೇಡಿಕೆ ದಶಕಗಳದ್ದು. ಪರಿಸರ ಹಾಳಾಗದಂತೆ ಪರಿಸ್ಕೃತ ಡಿಪಿಆರ್ ಕಳುಹಿಸಲಾಗಿದೆ. ಯೋಜನೆಯಿಂದ ಕಾರವಾರ ಬಂದರು, ಸೀಬರ್ಡ್ ನೌಕಾ ಯೋಜನೆ, ಕೈಗಾ ಪರಮಾಣು ವಿದ್ಯುತ್ ಸ್ಥಾವರ ಇತ್ಯಾದಿಗಳನ್ನು ಸಂಪರ್ಕಿಸಲು ಅನುಕೂಲವಾಗುತ್ತದೆ. ಇದು ಅಭಿವೃದ್ಧಿಗೆ ಪೂರಕವಾದ ಯೋಜನೆಯಾಗಿದ್ದು ಜಾರಿಗೊಳಿಸಲು ಬದ್ಧ ಎಂದು ಸದನದಲ್ಲೇ ಸಚಿವ ಅಶ್ವಿನಿ ವೈಷ್ಣವ ಹೇಳಿರುವುದುಂಟು. ಇದೀಗ ಬಜೆಟ್‌ನಲ್ಲಿ ಘೋಷಿಸುವ ಕೆಲಸವಾಗಬೇಕಿದೆ. ಇರುವ ಕಾನೂನಾತ್ಮಕ ಅಡೆ-ತಡೆ ನಿವಾರಣೆಗೆ ಕ್ರಮಕೈಗೊಳ್ಳಬೇಕು ಎಂಬುದು ಜನರ ಬೇಡಿಕೆ.ಕಲಬುರಗಿ ವಿಭಾಗವಾಗಲಿ:
ಕರ್ನಾಟಕದ ಶೇ. 84ರಷ್ಟು ಭಾಗ ನೈಋತ್ಯ ರೈಲ್ವೆ ವಲಯದಲ್ಲೇ ಬರುತ್ತದೆ. ಆದರೆ, ಕಲ್ಯಾಣ ಕರ್ನಾಟಕದ ಕಲಬುರಗಿ ಸೊಲ್ಲಾಪುರ ವಿಭಾಗಕ್ಕೆ, ಬೀದರ ಸಿಕಂದರ್‌ಬಾದ್ ವಿಭಾಗಕ್ಕೆ, ರಾಯಚೂರ, ಯಾದಗಿರಿ ನಿಲ್ದಾಣಗಳು ಗುಂತಕಲ್ ವಿಭಾಗಕ್ಕೆ ಸೇರುತ್ತವೆ. ಈ ನಿಲ್ದಾಣಗಳನ್ನೆಲ್ಲ ಸೇರಿಸಿ ಕಲಬುರಗಿ ವಿಭಾಗವನ್ನಾಗಿ ಪ್ರತ್ಯೇಕಿಸಬೇಕು. ಈ ವಿಭಾಗವನ್ನು ನೈಋತ್ಯ ವಲಯಕ್ಕೆ ಸೇರಿಸಬೇಕು ಎಂಬ ಬೇಡಿಕೆ ಜನರದ್ದು. ಅಂದರೆ ಕರ್ನಾಟಕ ಶೇ. 90ಕ್ಕೂ ಹೆಚ್ಚು ಭಾಗ ನೈಋತ್ಯ ವಲಯಕ್ಕೆ ಸೇರಿದಂತಾಗುತ್ತದೆ ಎಂಬುದು ಹೋರಾಟಗಾರರ ಬೇಡಿಕೆ.ವಂದೇ ಭಾರತ್ ರೈಲು:
ಗದಗ, ಬಳ್ಳಾರಿ ಮೂಲಕ ಹುಬ್ಬಳ್ಳಿ-ತಿರುಪತಿ, ಹುಬ್ಬಳ್ಳಿ-ಬೆಂಗಳೂರು ನಡುವೆ ವಂದೇ ಭಾರತ್ ರೈಲು ಆರಂಭಿಸಬೇಕು. ಇದರಿಂದ ತಿರುಪತಿ ಪ್ರಯಾಣಿಕರಿಗೆ ಹಾಗೂ ಗದಗ, ಬಳ್ಳಾರಿ ಮಾರ್ಗದಿಂದ ಬೆಂಗಳೂರಿಗೆ ತೆರಳುವ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗುತ್ತದೆ. ಜತೆಗೆ ದೆಹಲಿಗೆ ಸ್ಲೀಪರ್ ವಂದೇ ಭಾರತ್ ರೈಲು ಆರಂಭಿಸಬೇಕು. ಉತ್ತರ ಭಾಗದಲ್ಲಿರುವ ವೈಷ್ಣವಿದೇವಿ ಕತ್ರಕ್ಕೆ ವಿಜಯಪುರ, ಬಾಗಲಕೋಟೆ ಜಿಲ್ಲೆಗಳಿಂದ ನೇರ ರೈಲು ಸಂಪರ್ಕವಿಲ್ಲ. ಕತ್ರ- ವಿಜಯಪುರಕ್ಕೆ ಹೊಸ ಎಕ್ಸ್‌ಪ್ರೆಸ್ ರೈಲನ್ನು ಪರಿಚಯಿಸಬೇಕು ಎಂಬುದು ಪ್ರಯಾಣಿಕರ ಬೇಡಿಕೆ.ಲೋಕಲ್ ಟ್ರೈನ್:
ಹುಬ್ಬಳ್ಳಿ-ಧಾರವಾಡ, ಗದಗ-ಹುಬ್ಬಳ್ಳಿ, ಸಂಶಿ-ಹುಬ್ಬಳ್ಳಿ 3 ಕಡೆಗಳಿಂದ ಲೋಕಲ್ ಪ್ಯಾಸೆಂಜರ್ (ಕಾಯ್ದಿರಿಸದ) ಟ್ರೈನ್‌ಗಳನ್ನು ಓಡಿಸಬೇಕು. ಗದಗ, ಅಣ್ಣಿಗೇರಿ, ಕುಂದಗೋಳ, ಸಂಶಿ ಭಾಗಗಳಿಂದ ಪ್ರತಿನಿತ್ಯ ಸಾವಿರಾರು ಜನ ಕೆಲಸಕ್ಕೆಂದು ಹುಬ್ಬಳ್ಳಿಗೆ ಬಂದು ಹೋಗುತ್ತಾರೆ. ಜತೆಗೆ ಹುಬ್ಬಳ್ಳಿ-ಧಾರವಾಡ ಮಧ್ಯೆ ನಿತ್ಯ ಲಕ್ಷಗಟ್ಟಲೇ ಜನ ಓಡಾಡುತ್ತಾರೆ. 3 ನಿಲ್ದಾಣಗಳಿಂದ ಲೋಕಲ್ ಪ್ಯಾಸೆಂಜರ್ ರೈಲು ಓಡಿಸಿದರೆ ಸಾರಿಗೆ ವ್ಯವಸ್ಥೆ ಇನ್ನಷ್ಟು ಸುಧಾರಿಸುತ್ತದೆ ಎಂಬುದು ಸಾರ್ವಜನಿಕರ ಅಂಬೋಣ.ಕಾರ್ಯಾಗಾರ ಸ್ಥಾಪಿಸಿ:
ಹುಬ್ಬಳ್ಳಿಯಲ್ಲಿ ವಂದೇ ಭಾರತ್ ಮತ್ತು ಮೆಮೂ ರೇಕ್‌ಗಳ ಆವರ್ತಕ ಕೂಲಂಕುಷ ಪರೀಕ್ಷೆ ನಿರ್ವಹಣಾ ಕಾರ್ಯಾಗಾರ ಸ್ಥಾಪಿಸಬೇಕು. ಇದರಿಂದ ವಂದೇ ಭಾರತ್, ನಮೋ ಭಾರತ್ ಮತ್ತು ಮೆಮೊ ರೈಲುಗಳ ನಿರ್ವಹಣೆಗೆ ಅನುಕೂಲವಾಗುತ್ತದೆ.ಈ ಎಲ್ಲ ಬೇಡಿಕೆಗಳಿಗೆ ಕೇಂದ್ರ ಸರ್ಕಾರ ಯಾವ ಬಗೆಯಿಂದ ಸ್ಪಂದಿಸುತ್ತದೆ ಎಂಬುದನ್ನು ಕಾಯ್ದು ನೋಡಬೇಕಷ್ಟೇ! ರೈಲ್ವೆ ಆಸ್ಪತ್ರೆ ಮೇಲ್ದರ್ಜೆಗೇರಿಸಿ..
ನೈಋತ್ಯ ರೈಲ್ವೆ ವಲಯದ ಕೇಂದ್ರ ಸ್ಥಾನ ಹುಬ್ಬಳ್ಳಿ. ಇಲ್ಲಿನ ಆಸ್ಪತ್ರೆಯಲ್ಲಿ ಸಕಲ ಸೌಲಭ್ಯಗಳು ಇಲ್ಲ. ಹೀಗಾಗಿ ನೌಕರರು ಕೆಎಂಸಿಆರ್‌ಐಯನ್ನೇ ನೆಚ್ಚಿಕೊಳ್ಳಬೇಕಾದ ಸ್ಥಿತಿ ಇದೆ. ಆದಕಾರಣ ರೈಲ್ವೆ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ ಅತ್ಯಾಧುನಿಕ ಸೌಲಭ್ಯ ಕಲ್ಪಿಸಬೇಕು ಎಂಬುದು ನೌಕರರ ಬೇಡಿಕೆ..