ಹರಿಹರದ ಬಿಜೆಪಿ ಶಾಸಕ ಬಿ.ಪಿ.ಹರೀಶ, ಪುತ್ರ ಹಾಗೂ ಆಪ್ತ ಸಹಾಯಕನ ವಿರುದ್ಧ ದಾವಣಗೆರೆ ಡಿಸಿಆರ್‌ಇ ಪೊಲೀಸ್ ಠಾಣೆಯಲ್ಲಿ ತಾಲೂಕಿನ ಕಾಡಜ್ಜಿ ಗ್ರಾಮದ ರೈತನೊಬ್ಬ ಅವಹೇಳನ ಹಾಗೂ ಜಾತಿ ನಿಂದನೆ ಪ್ರಕರಣವನ್ನು ದಾಖಲು ಮಾಡಿದ್ದಾರೆ.
ಕನ್ನಡಪ್ರಭ ವಾರ್ತೆ ದಾವಣಗೆರೆ
ಹರಿಹರದ ಬಿಜೆಪಿ ಶಾಸಕ ಬಿ.ಪಿ.ಹರೀಶ, ಪುತ್ರ ಹಾಗೂ ಆಪ್ತ ಸಹಾಯಕನ ವಿರುದ್ಧ ದಾವಣಗೆರೆ ಡಿಸಿಆರ್‌ಇ ಪೊಲೀಸ್ ಠಾಣೆಯಲ್ಲಿ ತಾಲೂಕಿನ ಕಾಡಜ್ಜಿ ಗ್ರಾಮದ ರೈತನೊಬ್ಬ ಅವಹೇಳನ ಹಾಗೂ ಜಾತಿ ನಿಂದನೆ ಪ್ರಕರಣವನ್ನು ದಾಖಲು ಮಾಡಿದ್ದಾರೆ.ಕಾಡಜ್ಜಿ ಗ್ರಾಮದ ಭೋವಿ ಕಾಲನಿ ವಾಸಿ, ರೈತ ಎಚ್.ಕಾಂತರಾಜ ತಮ್ಮನ್ನು ಹರಿಹರ ಬಿಜೆಪಿ ಶಾಸಕ ಬಿ.ಪಿ.ಹರೀಶ, ಶಾಸಕರ ಪುತ್ರ ಹಾಗೂ ಆಪ್ತ ಸಹಾಯಕ ಜ.12ರ ಮಧ್ಯಾಹ್ನ 1 ಗಂಟೆ ವೇಳೆ ತಮ್ಮ ಕಾಡಜ್ಜಿ ಗ್ರಾಮದ ಕೆರೆ ಅಂಗಳಕ್ಕೆ ಹೋದಾಗ ಏಕಾಏಕಿ ಬಿಳಿ ಬಣ್ಣದ ಫಾರ್ಚೂನರ್ ಕಾರನ್ನು ಅಡ್ಡಗಟ್ಟಿ ನಿಲ್ಲಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ತಮಗೆ ಅವಹೇಳನ ಮಾಡಿ, ಜಾತಿ ನಿಂದನೆ ಮಾಡಿದ್ದಾರೆ ಎಂದು ಪಿರ್ಯಾದಿ ದೂರಿದ್ದಾರೆ.
ಟ್ರ್ಯಾಕ್ಟರ್ ಚಾಲನೆ ಮಾಡುತ್ತಿದ್ದ ತಾವು ಇಳಿದು, ಯಾಕೆ ಹರೀಶಣ್ಣ ರಸ್ತೆಯಲ್ಲಿ ಅಡ್ಡಗಟ್ಟಿದ್ದೀರಿ ಎಂದು ಪ್ರಶ್ನಿಸಿದಾಗ ಶಾಸಕರು, ಪುತ್ರ, ಆಪ್ತ ಸಹಾಯಕ ಕಾರಿನಿಂದ ಇಳಿದು, ಕೆರೆ ಮಣ್ಣು ತುಂಬಿಕೊಂಡಿದ್ದ ಬಗ್ಗೆ ಅವಾಚ್ಯವಾಗಿ ನಿಂದಿಸಿದರು. ಅಲ್ಲಿಗೆ ಬಂದ ಮಲ್ಲಪ್ಪ, ಪರಸಪ್ಪ, ಉಮೇಶಯ್ಯ, ನಾಗರಾಜಯ್ಯ ಅವರ ಮುಂದೆ ಶಾಸಕರು ನನಗೆ ಅವಾಚ್ಯವಾಗಿ ನಿಂದಿಸಿ, ಜಾತಿ ನಿಂದನೆ ಮಾಡಿದರು. ಅದಕ್ಕಾಗಿ ಶಾಸಕ ಬಿ.ಪಿ.ಹರೀಶರ ವಿರುದ್ಧ ದೂರು ನೀಡಿದ್ದೇನೆ ಎಂದು ಎಚ್.ಕಾಂತರಾಜು ತಿಳಿಸಿದರು. ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದಾರೆ.ಕಾಡಜ್ಜಿ ಗ್ರಾಮಕ್ಕೆ ಭೇಟಿ ನೀಡಿದ್ದ ಶಾಸಕ ಬಿ.ಪಿ.ಹರೀಶ ಮಣ್ಣುಗಾರಿಕೆ ಮಾಡುತ್ತಿದ್ದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಸ್ಥಳೀಯರ ಮಧ್ಯೆ ವಾಗ್ವಾದ ನಡೆದಿದ್ದು, ಕೆಲವರು ಶಾಸಕರಿಗೆ ಘೇರಾವ್ ಹಾಕಿ ಪ್ರತಿಬಟಿಸಿದ್ದರು. ಕಾಡಜ್ಜಿಯಿಂದ ನೇರವಾಗಿ ದಾವಣಗೆರೆ ಜಿಪಂನಲ್ಲಿ ಅದೇ ದಿನ ಮಧ್ಯಾಹ್ನ ನಡೆದ ಕೆಡಿಪಿ ತ್ರೈಮಾಸಿಕ ಸಭೆಗೆ ಶಾಸಕ ಬಿ.ಪಿ.ಹರೀಶ ಧಾವಿಸಿ, ಕೆಡಿಪಿ ಸಭೆಯಲ್ಲಿ ಅಕ್ರಮ ಮಣ್ಣು ಸಾಗಾಣಿಕೆ ವಿಚಾರ ಪ್ರಸ್ತಾಪಿಸಿದ್ದರು. ಶಾಸಕರು ಈ ಬಗ್ಗೆ ಧ್ವನಿ ಎತ್ತಿದ ಮೇಲಷ್ಟೇ ಎಚ್ಚೆತ್ತ ಕೃಷಿ ಇಲಾಖೆ ಅಧಿಕಾರಿಗಳು ಅನಾಮಧೇಯರ ವಿರುದ್ಧ ದೂರು ದಾಖಲು ಮಾಡಿದ್ದಾರೆ.
ಶಾಸಕ ಹರೀಶ ಧ್ವನಿ, ಎಚ್ಚೆತ್ತ ಅಧಿಕಾರಿಗಳಿಂದ ದೂರುಹರಿಹರ ಶಾಸಕ ಬಿ.ಪಿ.ಹರೀಶ ಕಾಡಜ್ಜಿ ಗ್ರಾಮದ ಕೃಷಿ ಇಲಾಖೆ ಜಮೀನಿನ ಮಣ್ಣು ಲೂಟಿ ಬಗ್ಗೆ ಧ್ವನಿ ಎತ್ತಿದ ನಂತರ ಎಚ್ಚೆತ್ತಿರುವ ಕೃಷಿ ಇಲಾಖೆ ಅಧಿಕಾರಿಗಳು ಅಕ್ರಮ ಮಣ್ಣು ಸಾಗಾಣಿಕೆ ಬಗ್ಗೆ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಗೆ ಕಾಡಜ್ಜಿ ಕೃಷಿ ಸಂಶೋಧನಾ ಕೇಂದ್ರದ ಸರ್ಕಾರಿ ಬೀದ ಉತ್ಪಾದಕ ಕೇಂದ್ರದ ವ್ಯವಸ್ಥಾಪಕಿ ಶಬಾನಾ ಅಂಜುಂ ಇದೀಗ ದೂರು ನೀಡಿದ್ದಾರೆ.
ಕಾಡಜ್ಜಿ ಗ್ರಾಮದ ಬೀಜ ಉತ್ಪಾದಕ ಕೇಂದ್ರಕ್ಕೆ ಸೇರಿದ ಜಮೀನಿನಲ್ಲಿ ಸಾವಿರಾರು ಲೋಡ್ ಮಣ್ಣನ್ನು ಅಕ್ರಮವಾಗಿ ಲೂಟಿ ಮಾಡಲಾಗಿದೆಯೆಂದು ಆರೋಪಿಸಿ ಜ.12ರಂದು ಹರಿಹರ ಶಾಸಕ ಬಿ.ಪಿ.ಹರೀಶ ಸ್ಥಳಕ್ಕೆ ಭೇಟಿ ನೀಡಿ, ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರ ಹಾಕಿದ್ದರು.ಹರ ಜಾತ್ರೆಗೆ ಶಾಸಕ ಹರೀಶ ಗೈರು!
ಕಾಡಜ್ಜಿ ಕೃಷಿ ಸಂಶೋಧನಾ ಕೇಂದ್ರದ ಜಮೀನಿನಲ್ಲಿ ಮಣ್ಣು ಅಕ್ರಮ ಸಾಗಾಟ ತಡೆಯಲು ಹೋದ ನಂತರ ತಮ್ಮ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಹರಿಹರ ಶಾಸಕ ಬಿ.ಪಿ.ಹರೀಶ ಬಂಧನದ ಭೀತಿಯಿಂದಾಗಿ ತಮ್ಮದೇ ಕ್ಷೇತ್ರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದಲ್ಲಿ ಗುರುವಾರ ನಡೆದ ಹರ ಜಾತ್ರೆ ಹಾಗೂ ವೀರ ರಾಣಿ ಕಿತ್ತೂರು ಚನ್ನಮ್ನ ಜಯಂತಿಗೆ ಗೈರಾಗಿದ್ದರು.ಹರಿಹರ ಪಂಚಮಸಾಲಿ ಪೀಠದಲ್ಲಿ ನಡೆಯುತ್ತಿರುವ ಹರ ಜಾತ್ರೋತ್ಸವದಲ್ಲಿ ಶಾಸಕ ಬಿ.ಪಿ.ಹರೀಶ ಸಹ ಮುಖ್ಯ ಅತಿಥಿಯಾಗಿದ್ದರು. ಆದರೆ, ಕಾಡಜ್ಜಿ ಗ್ರಾಮದ ಎಚ್.ಕಾಂತರಾಜು ಎಂಬ ರೈತ ಶಾಸಕ ಬಿ.ಪಿ.ಹರೀಶ ವಿರುದ್ಧ ಡಿಸಿಆರ್‌ಇ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ಎಫ್‌ಐಆರ್ ಸಹ ಆಗಿದ್ದರಿಂದ ಬಂಧನದ ಭೀತಿಗೆ ಶಾಸಕರು ಗೈರಾಗಿದ್ದಾರೆಂದು ಹೇಳಲಾಗಿದೆ. ತಮ್ಮ ವಿರುದ್ಧ ದೂರು ದಾಖಲಾದ ನಂತರ ಶಾಸಕ ಹರೀಶ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ.