ನಗರಾದ್ಯಂತ ಸುಗ್ಗಿ ಸಂಭ್ರಮದ ಸಂಕ್ರಾಂತಿ ಆಚರಿಸಿ ಎಳ್ಳು, ಬೆಲ್ಲ ವಿತರಿಸಿಕೊಂಡು, ಪೊಂಗಲ್ ಸವಿದು ಜನ ಹಬ್ಬ ಆಚರಿಸಿದರು. ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯ, ಹಲವೆಡೆ ರಾಸುಗಳನ್ನು ಕಿಚ್ಚು ಹಾಯಿಸುವ ಸಂಪ್ರದಾಯ ನಡೆಯಿತು.
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರಾದ್ಯಂತ ಸುಗ್ಗಿ ಸಂಭ್ರಮದ ಸಂಕ್ರಾಂತಿ ಆಚರಿಸಿ ಎಳ್ಳು, ಬೆಲ್ಲ ವಿತರಿಸಿಕೊಂಡು, ಪೊಂಗಲ್ ಸವಿದು ಜನ ಹಬ್ಬ ಆಚರಿಸಿದರು. ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯ, ಹಲವೆಡೆ ರಾಸುಗಳನ್ನು ಕಿಚ್ಚು ಹಾಯಿಸುವ ಸಂಪ್ರದಾಯ ನಡೆಯಿತು.ಗುರುವಾರ ಮುಂಜಾನೆಯಿಂದಲೇ ಬನಶಂಕರಿ, ದೊಡ್ಡಗಣಪತಿ, ಅಭಯ ಆಂಜನೇಯ ದೇವಸ್ಥಾನ, ಗವಿಗಂಗಾಧರೇಶ್ವರ ಸೇರಿ ಶಿವ ದೇವಾಲಯಗಳಲ್ಲಿ ವಿಶೇಷ ಪೂಜೆ ಅಭಿಷೇಕ ಶ್ರದ್ಧಾಭಕ್ತಿಯಿಂದ ನೆರವೇರಿದವು. ಸರ್ಕಾರದ ಆದೇಶದಂತೆ ಹಲವು ದೇಗುಲಗಳಲ್ಲಿ ಭಕ್ತರಿಗೆ ಎಳ್ಳು-ಬೆಲ್ಲ ವಿತರಣೆ ಮಾಡಲಾಯಿತು.
ನಗರದ ಮಾರೇನಹಳ್ಳಿ, ಸುದಾಮ ನಗರ, ಜೆಪಿ ನಗರದ ಕಾಲನಿಗಳಲ್ಲಿ ಜನತೆ ಸಾಮೂಹಿಕವಾಗಿ ಪೊಂಗಲ್ ತಯಾರಿಸುವ ಮೂಲಕ, ಮಕ್ಕಳು ಗಾಳಿಪಟ ಹಾರಿಸುವ ಮೂಲಕ ವರ್ಷದ ಮೊದಲ ಹಬ್ಬವನ್ನು ಸಂಭ್ರಮಿಸಿದರು. ಕನಕನಪಾಳ್ಯ, ಶ್ರೀನಗರ, ರಾಮಸಂದ್ರದಲ್ಲಿ ಸಂಜೆ ಗೋವುಗಳ ಕಿಚ್ಚು ಹಾಯಿಸುವ ಸಂಪ್ರದಾಯ ನಡೆಯಿತು.ಗವಿಗಂಗಾಧರೇಶ್ವರನಿಗೆ
ಭಾಸ್ಕರನ ನಮನ ಕೌತುಕಗವಿಪುರದ ಗವಿಗಂಗಾಧರೇಶ್ವರ ದೇಗುಲದ ಶಿವಲಿಂಗವನ್ನು ಸ್ಪರ್ಶಿಸಿ ಸಮಿಸಿದ ಭಾಸ್ಕರ ಬಳಿಕ ಉತ್ತರಾಯಣಕ್ಕೆ ಪಥ ಬದಲಿಸಿದ. ಸೂರ್ಯರಶ್ಮಿ 6 ಸೆಕುಂಡುವರೆಗೆ ಶಿವಲಿಂಗದ ಮೇಲಿತ್ತು. ಈ ಕ್ಷಣಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು.
ಗುರುವಾರ ಸಂಜೆ ಸಂಜೆ 5.17ರ ವೇಳೆಗೆ ದೇಗುಲದ ಬಲಭಾಗದ ಕಿಂಡಿಯಿಂದ ಸೂರ್ಯ ಕಿರಣ ದೇಗುಲ ಪ್ರವೇಶಿಸಿತು. ಮೊದಲು ಗವಿಗಂಗಾಧರೇಶ್ವರ ದೇವರ ಪಾದ ಸ್ಪರ್ಶಿಸಿತು. ಬಳಿಕ ನಂದಿ ವಿಗ್ರಹದ ಮೂಲಕ ಹಾದು ಶಿವಲಿಂಗವನ್ನು ನಮಿಸಿತು. ಸುಮಾರು ಆರು ನಿಮಿಷಗಳ ಅವಧಿಯಲ್ಲಿ ನಡೆದ ಈ ಪ್ರಕ್ರಿಯೆಯಲ್ಲಿ, ಲಿಂಗದ ಮೇಲೆ 6 ಸೆಕುಂಡುಗಳ ಕಾಲ ಸೂರ್ಯ ರಶ್ಮಿ ಇತ್ತು. ನೇಸರ ನಮಿಸುವ ಅವಧಿಯಲ್ಲಿ ಅರ್ಚಕರು ಶಿವಲಿಂಗಕ್ಕೆ ನಿರಂತರ ಕ್ಷೀರಾಭಿಷೇಕ ನಡೆಸಿದರು. ಸೂರ್ಯರಶ್ಮಿ ನಿರ್ಗಮಿಸಿದ ಬಳಿಕ ಪುನಃ ಶಿವಲಿಂಗಕ್ಕೆ ಅಭಿಷೇಕ ನೆರವೇರಿಸಿ ಪೂಜೆ ಸಲ್ಲಿಸಲಾಯಿತು.ಸೂರ್ಯರಶ್ಮಿ ಶಿವಲಿಂಗವನ್ನು ಸ್ಪರ್ಶಿಸುವ ಅವಧಿಯಲ್ಲಿ ಭಕ್ತರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ದೇವಾಲಯದ ಹೊರಗೆ ಎರಡು ಎಲ್‌ಇಡಿ ಪರದೆಯಲ್ಲಿ ಈ ಕೌತುಕದ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು. ಗಂಗಾಜಲವನ್ನು ಪ್ರೋಕ್ಷಿಸಿ, ಲಿಂಗಕ್ಕೆ ವಿಶೇಷ ಅಲಂಕಾರ ಮಾಡಲಾಯಿತು. ಬಳಿಕ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.
ಹಬ್ಬದ ಪ್ರಯುಕ್ತ ಗವಿಗಂಗಾಧರೇಶ್ವರ ದೇವಾಲಯದಲ್ಲಿ ಭಕ್ತರ ಸಮೂಹ ಹೆಚ್ಚಿನ ಸಂಖ್ಯೆಯಲ್ಲಿ ಬಂದಿತ್ತು. ಗಂಗಾಧರೇಶ್ವರನ ದರ್ಶನ ಪಡೆದರು. ಬೆಳಗ್ಗೆ 5ರಿಂದ ಮಧ್ಯಾಹ್ಮ 12ರವರೆಗೆ ಭಕ್ತರಿಗೆ ಸುಗಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.