ಸಾರಾಂಶ
ಗಜೇಂದ್ರಗಡ: ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೀದಿಬದಿ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಜೀವವನ್ನು ಕೈಯಲ್ಲಿ ಹಿಡಿದು ಸಂಚರಿಸಬೇಕಾದ ದುಸ್ಥಿತಿಯನ್ನು ಬೀದಿ ದನಗಳು ನಿರ್ಮಾಣ ಮಾಡಿವೆ. ಬಿಡಾಡಿ ದನಗಳ ಹಾವಳಿಗೆ ಕಡಿವಾಣ ಹಾಕಲು ಪುರಸಭೆ ವಿಫಲವಾಗಿದೆ ಎಂದು ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪಟ್ಟಣದ ಬಸವೇಶ್ವರ ವೃತ್ತ, ಭಜರಂಗ ವೃತ್ತ, ಸರಾಫ್ ಬಜಾರ, ದುರ್ಗಾ ವೃತ್ತ, ಕಿತ್ತೂರ ರಾಣಿ ಚೆನ್ನಮ್ಮ ವೃತ್ತ ಸೇರಿ ಇಲ್ಲಿನ ತರಕಾರಿ ಮಾರುಕಟ್ಟೆ ಸುತ್ತಲಿನ ಪ್ರದೇಶದಲ್ಲಿ ಮುಂಜಾನೆ ಹಾಗೂ ಸಂಜೆ ಬೀದಿ ದನಗಳ ಗುಂಪಿನಲ್ಲಿ ನಡೆಯುವ ಗುದ್ದಾಟದಿಂದ ಪಾರಾಗುವುದು ಸಾರ್ವಜನಿಕರಿಗೆ ಒಂದು ಸಾಹಸವಾಗಿದೆ. ಪರಿಣಾಮ ಬೀದಿದನಗಳ ಗುಂಪಿನಲ್ಲಿ ಆರಂಭವಾದ ಗುದ್ದಾಟದಿಂದ ವಾಹನಗಳ ಜಖಂ ಸೇರಿ ಐದಾರು ಜನರು ಅದೃಷ್ಟವಶಾತ್ ಕೂದಲೆಳೆಯಲ್ಲಿ ಬದುಕುಳಿದ ಘಟನೆ ಶನಿವಾರ ನಡೆಯಿತು.
ಪಟ್ಟಣದಲ್ಲಿ ಪುರಸಭೆ ಅಧಿಕಾರಿಗಳು ಬಿಡಾಡಿ ದನಗಳ ಮಾಲಿಕರಿಗೆ ತಮ್ಮ ದನಗಳನ್ನು ಹಿಡಿದು ಕಟ್ಟಿಹಾಕಿಕೊಳ್ಳಬೇಕು. ಇಲ್ಲದಿದ್ದರೆ ದಂಡದ ಜತೆಗೆ ಬಿಡಾಡಿ ದನಗಳನ್ನು ಗೋಶಾಲೆಗೆ ಸ್ಥಳಾಂತರಿಸುವ ಎಚ್ಚರಿಕೆ ನೀಡಿದ ವೇಳೆಯಲ್ಲಿ ಕೆಲ ಮಾಲಿಕರು ದನಗಳನ್ನು ಹಿಡಿದು ಆನಂತರದ ದಿನಗಳಲ್ಲಿ ಮತ್ತೆ ದನಗಳನ್ನು ಬೀದಿಗೆ ಬಿಡುತ್ತಿದ್ದಾರೆ. ಪರಿಣಾಮ ಬಿಡಾಡಿ ದನಗಳ ಹಾವಳಿಯು ಪಟ್ಟಣದಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ. ಹೀಗಾಗಿ ಪುರಸಭೆಯು ಪಟ್ಟಣದಲ್ಲಿರುವ ಬಿಡಾಡಿ ದನಗಳ ಮಾಲಿಕರಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಒಂದು ತಿಂಗಳ ಕಾಲವಕಾಶ ನೀಡಿ ನೋಟಿಸ್ ಜಾರಿ ಮಾಡಬೇಕು. ಅಷ್ಟರೊಳಗೆ ಬಿಡಾಡಿ ದನಗಳನ್ನು ಮಾಲಿಕರು ಹಿಡಿಯದಿದ್ದರೆ ಗೋ-ಶಾಲೆಗೆ ಬಿಡಲಾಗುವುದು ಎನ್ನುವ ಖಡಕ್ ನಿರ್ಧಾರದ ಜತೆಗೆ ಅಗತ್ಯ ಕಾನೂನು ಕ್ರಮ ಕೈಗೊಳ್ಳಲು ಅಧಿಕಾರಿಗಳು ಮುಂದಾದರೆ ಮಾತ್ರ ಪಟ್ಟಣದಲ್ಲಿ ಬಿಡಾಡಿ ದನಗಳನ್ನು ಹಾವಳಿಗೆ ಕಡಿವಾಣ ಹಾಕಲು ಸಾಧ್ಯ ಎನ್ನುವುದು ಪ್ರಜ್ಞಾವಂತ ನಾಗರಿಕರ ಅಭಿಪ್ರಾಯವಾಗಿದೆ.ಪಟ್ಟಣದಲ್ಲಿರುವ ಬಿಡಾಡಿ ದನಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ಕುರಿತು ಗಮನಕ್ಕೆ ಬಂದಿದೆ. ಮಾಸಾಂತ್ಯದೊಳಗೆ ಮಾಲಿಕರು ವಶಕ್ಕೆ ಪಡೆಯದಿದ್ದರೆ, ಪಟ್ಟಣದಲ್ಲಿನ ಬಿಡಾಡಿ ದನಗಳನ್ನು ಜಿಲ್ಲಾ ಕೇಂದ್ರದ ಗೋಶಾಲೆಗೆ ರವಾನಿಸಲು ಅವಶ್ಯಕವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುವುದರ ಜತೆಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ ಹೇಳಿದರು.
ಪಟ್ಟಣದಲ್ಲಿ ಬಿಡಾಡಿ ದನಗಳು ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ಗುಂಪಾಗಿ ನಿಲ್ಲುವದು ಹಾಗೂ ಗುದ್ದಾಟದಿಂದಸಾರ್ವಜನಿಕರು ಪ್ರಾಣವನ್ನು ಕೈಯಲ್ಲಿ ಹಿಡಿದು ಸಂಚರಿಸಬೇಕಾಗಿದೆ. ಹೀಗಾಗಿ ಅಹಿತಕರ ಘಟನೆ ನಡೆಯುವ ಮುನ್ನ ಪುರಸಭೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ವರ್ತಕರಾದ ಕೃಷ್ಣಾ ಶಿಂಗ್ರಿ, ಕಳಕೇಶ ಚನ್ನಿ ಹೇಳಿದರು.