ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಅರಿವು ಇದ್ದರೆ ಗುರು ಆಗಬಹುದು ಎಂಬುದಕ್ಕೆ ಶ್ರೀ ಮಡಿವಾಳ ಮಾಚಿದೇವ ಅವರೇ ಜ್ವಲಂತ ನಿದರ್ಶನ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದರು.ನಗರದ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಮಡಿವಾಳ ಸಮಾಜ ಸಂಘ ಸಹಯೋಗದಲ್ಲಿ ಗುರುವಾರ ಏರ್ಪಡಿಸಿದ್ದ ಶ್ರೀ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
12ನೇ ಶತಮಾನದಲ್ಲಿ ಜಾತಿ ಪದ್ಧತಿ, ಅಸಮಾನತೆ ಪೆಡಂಭೂತದಂತೆ ಇತ್ತು. ದಾರ್ಶನಿಕರ, ಶರಣರ ಹೋರಾಟ ಪ್ರತಿಭಟನೆಯಿಂದ, ಆ ಧ್ವನಿಯಿಂದಾಗಿ ಇಂದು ನೆಮ್ಮದಿಯಿಂದ ಇದ್ದೇವೆ. ಒಬ್ಬ ವ್ಯಕ್ತಿಯ ಸನ್ನಡತೆ, ಉತ್ತಮ ವ್ಯಕ್ತಿತ್ವದಿಂದ ಮಾನ್ಯನಾಗುತ್ತಾನೆ. ಮಾಚಿದೇವ ಅವರ ಸನ್ನಡತೆಯಿಂದ ಬಿಜ್ಜಳ ಮಹಾರಾಜರೇ ಸ್ವತಃ ಅವರ ಮನೆಗೆ ಬರುತ್ತಾರೆ. ಎಷ್ಟೇ ಕಷ್ಟವಾದರೂ ನುಡಿದಂತೆ ನಡೆದ ಶ್ರೇಷ್ಠ ಪರಂಪರೆ ಮಾಚಿದೇವರ ಅವರದು. ಅಕ್ಕ ಮಹಾದೇವಿ ಸಹ ಮಾಚಿದೇವ ಅವರನ್ನು ತಮ್ಮ ತಂದೆ ಎನ್ನುತ್ತಾರೆ. ಇದು ನಮ್ಮ ಸಂಸ್ಕೃತಿಯ ಹೆಗ್ಗಳಿಕೆ ಎಂದರು.ಆದಿಚುಂಚನಗಿರಿ ಶಾಲಾ ಶಿಕ್ಷಕ ಎಂ.ಎನ್. ಮಧುಕುಮಾರ್ ಉಪನ್ಯಾಸ ನೀಡಿ ಮಾತನಾಡಿ, 12ನೇ ಶತಮಾನದ ದಾರ್ಶನಿಕರು ಮಡಿವಾಳ ಮಾಚಿದೇವರು. ಎಲ್ಲ ಮಹಾಪುರುಷರ ಜನ್ಮದ ಹಿಂದೆ ಒಂದು ಪೌರಾಣಿಕ ಹಿನ್ನೆಲೆ ಇರುತ್ತದೆ. ಅನುಭವ ಮಂಟಪ ಕಟ್ಟುವಲ್ಲಿ ಮಾಚಿದೇವರ ಕಾಯಕ ಅತಿ ಮಹತ್ವದ್ದಾಗಿದ್ದು, ವೀರಗಣಾಚಾರಿ ಹಾಗೂ ವೀರಭದ್ರನ ದೇವಾಂಶ ಸಂಭೂತ, ಅವತಾರ ಪುರುಷ ಎಂದು ಕರೆಯಲಾಗುತ್ತಿತ್ತು. ಬಸವಣ್ಣನೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದ ಇವರು ವಚನಗಳ ಸಂರಕ್ಷಕರಾಗಿದ್ದಾರೆ ಎಂದರು.
ಮಾಚಿದೇವರು ಸುಮಾರು 3,300 ವಚನ ರಚಿಸಿದ್ದಾರೆ ಎಂದು ಹೇಳಲಾಗುತ್ತದೆ. ಆದರೆ, 511 ವಚನಗಳು ಮಾತ್ರ ಲಭ್ಯವಿದೆ. ಕಾರಿಮನೆಯಲ್ಲಿ ಮಾಚಿದೇವರ ಗದ್ದುಗೆ ಇದ್ದು, ದೇವರ ಹಿಪ್ಪರಗಿಯನ್ನು ಮಾಚಿದೇವರ ಹಿಪ್ಪರಗಿ ಎಂದು ಹೆಸರಿಡಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದರು.ಶಾಸಕಿ ಶಾರದಾ ಪೂರ್ಯಾ ನಾಯ್ಕ ಮಾತನಾಡಿ, ಮಡಿವಾಳ ಮಾಚಿದೇವರು ಮಡಿ ಬಟ್ಟೆಗಳನ್ನು ಗಂಟೆ ಬಾರಿಸುತ್ತ, ತಲೆ ಮೇಲೆ ಹೊತ್ತು ತರುವ ಮೂಲಕ ಅತ್ಯಂತ ಶ್ರದ್ಧೆಯಿಂದ ಶ್ರೇಷ್ಠ ಕಾಯಕ ಎಂದು ಅವರು ಮಾಡುತ್ತಿದ್ದರು ಎಂದರು.
ಮಡಿವಾಳ ಸಮಾಜ ಸಂಘದ ಜಿಲ್ಲಾಧ್ಯಕ್ಷ ಎಚ್.ಎಸ್. ಸದಾಶಿವಪ್ಪ ಮಾತನಾಡಿ, ಶೂದ್ರರಿಗೆ ವಿದ್ಯೆ ಸಿಗುವುದು ಕಷ್ಟವಾಗಿದ್ದ ಕಾಲದಲ್ಲಿ ಕ್ರಾಂತಿಕಾರಿ ಗುಣದ ಗುರುಗಳಾದ ಮಲ್ಲಿಕಾರ್ಜುನ ಅವರಲ್ಲಿ ಮಾಚಿದೇವ ಅವರು ವಿದ್ಯೆ ಪಡೆದು, ಮುಂದೆ ಕಲ್ಯಾಣದ ಅನುಭವ ಮಂಟಪದಲ್ಲಿ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಒದಗಿಸುವ ಕ್ರಾಂತಿಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಾರೆ ಎಂದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಉಮೇಶ್ ಸ್ವಾಗತಿಸಿದರು. ಪಾಲಿಕೆ ಆಡಳಿತಾಧಿಕಾರಿ ತುಷಾರ್ ಗಿರಿನಾಥ್, ಸಮಾಜ ಸಂಘದ ಇತರೇ ಪದಾಧಿಕಾರಿಗಳು, ಸದಸ್ಯರು, ಸಮಾಜದ ಮುಖಂಡರು ಹಾಜರಿದ್ದರು.
- - --1ಎಸ್‌ಎಂಜಿಕೆಪಿ14:
ಶಿವಮೊಗ್ಗದ ಕುವೆಂಪು ರಂಗಮಂದರಿದಲ್ಲಿ ಗುರುವಾರ ಏರ್ಪಡಿಸಿದ್ದ ಶ್ರೀ ಮಡಿವಾಳ ಮಾಚಿದೇವ ಜಯಂತಿಯನ್ನು ಶಾಸಕಿ ಶಾರದಾ ಪೂರ್ಯಾ ನಾಯ್ಕ್ ಉದ್ಘಾಟಿಸಿದರು.