ಸಾರಾಂಶ
ಮಹಾತ್ಮರ ಜನ್ಮದಿನಾಚರಣೆಗಳನ್ನು ಸ್ವಂತ ತಮ್ಮ ಕುಟುಂಬದ ಹಬ್ಬದ ರೀತಿಯಲ್ಲಿ ಅತ್ಯಂತ ಹೆಮ್ಮೆ, ಸಂಭ್ರಮಗಳಿಂದ ಆಚರಿಸಬೇಕಿದೆ
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಮಹಾತ್ಮ ಗಾಂಧೀಜಿ ಕೇವಲ ಭಾರತಕ್ಕಷ್ಟೇ ಅಲ್ಲ, ಇಡೀ ವಿಶ್ವಕ್ಕೇ ಶಾಂತಿ, ಸರಳತೆ ಸಂಕೇತವಾಗಿದ್ದು, ಭಾರತೀಯರಾದ ನಾವೆಲ್ಲ ಹೆಮ್ಮೆಪಡುವ ವಿಚಾರವಾಗಿದೆ ಎಂದು ತಹಸೀಲ್ದಾರ್ ಪಟ್ಟರಾಜಗೌಡ ಹೇಳಿದರು.ಅ.2ರಂದು ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮ ದಿನಾಚರಣೆ ಕುರಿತ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂತಹ ಮಹಾತ್ಮರ ಜನ್ಮದಿನಾಚರಣೆಗಳನ್ನು ಸ್ವಂತ ತಮ್ಮ ಕುಟುಂಬದ ಹಬ್ಬದ ರೀತಿಯಲ್ಲಿ ಅತ್ಯಂತ ಹೆಮ್ಮೆ, ಸಂಭ್ರಮಗಳಿಂದ ಆಚರಿಸಬೇಕಿದೆ ಎಂದರು.
ಗಾಂಧೀಜಿ ಈ ಹಿಂದೆ ಸ್ವದೇಶಿ ಚಳವಳಿ ಸಂದರ್ಭ ಹೊನ್ನಾಳಿ ಪ್ರವಾಸಿ ಮಂದಿರಕ್ಕೆ ಭೇಟಿ ನೀಡಿದ್ದರು. ಇದರ ಸವಿನೆನಪಿಗಾಗಿ ಪ್ರಸ್ತುತ ಪ್ರವಾಸಿ ಮಂದಿರದಲ್ಲಿ ಶಿಲೆಯ ಸುಂದರ ಪುತ್ಥಳಿ ಪ್ರತಿಷ್ಠಾಪನೆ ಮಾಡಲಾಗಿದೆ. ಅ.2ರಂದು ಬೆಳಗ್ಗೆ 10.30 ಗಂಟೆಗೆ ತಾಲೂಕು ಆಡಳಿತ ಇದೇ ಪ್ರವಾಸಿ ಮಂದಿರದಲ್ಲಿ ಗಾಂಧೀಜಿ ಪುತ್ಥಳಿ ಸಮ್ಮುಖ ನೆಲದ ಹಾಸಿನ ಮೇಲೆ ಕುಳಿತು ಎಲ್ಲರೂ ಆರ್ಥಪೂರ್ಣವಾಗಿ ಗಾಂಧೀಜಿ, ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಜಿ ಜಯಂತಿ ಆಚರಿಸೋಣ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಶಾಸಕ ಡಿ.ಜಿ.ಶಾಂತನಗೌಡ, ಉಪವಿಭಾಗಾಧಿಕಾರಿ ಅಭಿಷೇಕ್ ಭಾಗವಹಿಸಲಿದ್ದಾರೆ. ತಾಲೂಕುಮಟ್ಟದ ಎಲ್ಲ ಇಲಾಖೆಗಳ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರಬೇಕು. ಉಭಯ ನಾಯಕರಿಗೆ ಪೂಜೆ ಸಲ್ಲಿಸಿ, ನಾಡಗೀತೆ, ಮೀರಾ ಭಜನ್ ಪ್ರಸ್ತುತ ಪಡಿಸಲಾಗುವುದು. ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ. ಗಾಂಧೀಜಿ ಅವರಿಗೆ ಬಹುಪ್ರಿಯವಾದ ಹಾಗೂ ಅಷ್ಟೇ ಸರಳವಾದ ಆಹಾರ ಬೇಯಿಸಿದ ಶೇಂಗಾವನ್ನು ಎಲ್ಲರಿಗೂ ವಿತರಿಸಲಾಗುವುದು ಎಂದು ಹೇಳಿದರು.
ಪೂರ್ವಭಾವಿ ಸಭೆಯಲ್ಲಿ ಗ್ರೇಡ್-2 ತಹಸೀಲ್ದಾರ್ ಸುರೇಶ್, ಬಿಇಒ ನಿಂಗಪ್ಪ, ಅಕ್ಷರ ದಾಸೋಹ ಅಧಿಕಾರಿ ನಾಗೇಂದ್ರಪ್ಪ, ಸಿಡಿಪಿಒ ಜ್ಯೋತಿ, ಕೃಷಿ ಇಲಾಖೆ ಅಧಿಕಾರಿ ಪ್ರತಿಮಾ, ತೋಟಗಾರಿಕಾ ಇಲಾಖೆ ಅಧಿಕಾರಿ ರೇಖಾ, ಆರೋಗ್ಯ ಇಲಾಖೆಯಿಂದ ಗೀತಾ, ಸಮಾಜ ಕಲ್ಯಾಣ ಇಲಾಖೆಯಿಂದ ಉಮಾ, ಸರ್ವೆ ಇಲಾಖೆಯಿಂದ ಜೀವನ್, ಯುಟಿಪಿಯಿಂದ ಇಂಜಿನಿಯರ್ ಮಂಜುನಾಥ್ , ಲೋಕೋಪಯೋಗಿ ಇಲಾಖೆಯ ಕಣುಮಪ್ಪ, ತಾಲೂಕು ಕಚೇರಿ ಶಿರಸ್ತೇದಾರ್ ಮಂಜುನಾಥ್, ರವಿಕುಮಾರ್, ಪೊಲೀಸ್ ಇಲಾಖೆಯ ಎಸ್.ಐ.ನಿರ್ಮಲ, ಅಬಕಾರಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.ಅಧಿಕಾರಿಗಳಿಗಾಗಿ ತಹಸೀಲ್ದಾರ್ ಕಾಯಬೇಕೆ?
ಗಾಂಧೀಜಿ, ಶಾಸ್ತ್ರೀಜಿ ಜಯಂತಿಗಳ ಸಭೆಗಳಲ್ಲಿ ತಪ್ಪದೇ ತಾಲೂಕುಮಟ್ಟದ ಅಧಿಕಾರಿಗಳು ಭಾಗವಹಿಸಬೇಕು. ಆದರೆ ತಮ್ಮ ಕಚೇರಿಯಲ್ಲಿ ಪೂರ್ವಭಾವಿ ಸಭೆಗೆ ಬಹುಪಾಲು ವಿವಿಧ ಇಲಾಖೆಗಳ ಅಧಿಕಾರಿಗಳು ಗೈರಾಗಿದ್ದಾರೆ. ಇದು ವಿಷಾದಕರ ಸಂಗತಿ. ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಬಗ್ಗೆ ಚರ್ಚಿಸಲು ಕರೆದ ಈ ಸಭೆಗೆ ತಹಸೀಲ್ದಾರ್ ಅವರೇ ಅಧಿಕಾರಿಗಳ ಬರುವಿಕೆಗಾಗಿ ಕಾಯಬೇಕಾದ ಪರಿಸ್ಥಿತಿ ಬರಬಾರದು ಎಂದು ತಹಸೀಲ್ದಾರ್ ಪಟ್ಟರಾಜಗೌಡ ಹೇಳಿದರು.