ಶ್ರೀ ಧರ್ಮಸ್ಥಳ ಸಂಸ್ಥೆಯಿಂದ ಆರ್ಥಿಕ ಪ್ರಗತಿ

| Published : Sep 28 2024, 01:30 AM IST

ಸಾರಾಂಶ

ತೊಂದರೆ ಹೇಳಿಕೊಂಡು ಯಾರೇ ಬಂದರೂ ಅಂತಹವರ ನೆರವಿಗೆ ನಿಲ್ಲುವಲ್ಲಿ ಧರ್ಮಸ್ಥಳ ಸಂಸ್ಥೆ ಮುಂಚೂಣಿಯಲ್ಲಿದೆ ಎಂಬುದು ಗಮನಾರ್ಹ ಸಂಗತಿ

ರೋಣ:ಮಹಿಳೆಯರ ಸ್ವಾವಲಂಬಿ ಬದುಕಿಗೆ ನೆರವಾಗುವುದರ ಜೊತೆಗೆ ಸಮುದಾಯ ಮತ್ತು ಕುಟುಂಬದ ಆರ್ಥಿಕ ಪ್ರಗತಿಗೆ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಕಾರಿಯಾಗಿದೆ ಎಂದು ಗ್ಯಾರಂಟಿ ಯೋಜನೆ ಸಮಿತಿ ತಾಲೂಕು ಅಧ್ಯಕ್ಷ, ಪುರಸಭೆ ಸದಸ್ಯ ಮಿಥುನ ಜಿ. ಪಾಟೀಲ ಹೇಳಿದರು.

ಶುಕ್ರವಾರ ಪಟ್ಟಣದ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ. ಟ್ರಸ್ಟ್ ರೋಣ ತಾಲೂಕು ವತಿಯಿಂದ ಜರುಗಿದ ತಾಲೂಕು ಮಟ್ಟದ ಒಕ್ಕೂಟ ಪದಾಧಿಕಾರಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಸ್ವ-ಸಹಾಯ ಸಂಘಗಳನ್ನು ಸ್ಥಾಪಿಸಿ ಮಹಿಳೆಯರು ಸ್ವಾವಲಂಬಿ ಜೀವನ ಸಾಗಿಸುವಲ್ಲಿ, ಅಡುಗೆ ಮನೆ ಎಂಬ ನಾಲ್ಕು ಗೋಡೆಗಳ ಮಧ್ಯೆ ಬಂಧಿಯಾಗಿರದೆ ತಾನೂ ಪುರುಷನಷ್ಟು ಸರಿ ಸಮಾನವಾಗಿ ದುಡಿಯಬಲ್ಲೆ ಎಂಬುದನ್ನು ಸಾಬೀತು ಮಾಡಿ ತೋರಿಸುವಲ್ಲಿ ಶ್ರೀ ಧರ್ಮಸ್ಥಳ ಸಂಸ್ಥೆ ಪಾತ್ರ ಅತೀ ಪ್ರಮುಖವಾಗಿದೆ. ಜೊತೆಗೆ ಶ್ರೀ ಧರ್ಮಸ್ಥಳ ಸಂಸ್ಥೆ ಸ್ವಚ್ಛತೆ, ಗ್ರಾಮ ನೈರ್ಮಲ್ಯ, ಶುದ್ಧ ಕುಡಿಯುವ ನೀರು, ಆರೋಗ್ಯ, ಶಿಕ್ಷಣ, ರಸ್ತೆ ನಿರ್ಮಾಣ, ಶಿಷ್ಯವೇತನ, ಮನೆ ನಿರ್ಮಾಣ, ನಿರ್ಗತಿಕರಿಗೆ ಸಹಾಯಹಸ್ತ, ಕೆರೆ ನಿರ್ಮಾಣ ಸೇರಿದಂತೆ ಹಲವಾರು ಮಹತ್ವಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಾಜದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡುತ್ತಿರುವುದು ಶ್ಲಾಘನೀಯವಾಗಿದೆ. ವೀರೇಂದ್ರ ಹೆಗ್ಗಡೆ ಅವರ ಸಮಾಜಮುಖಿ ಕಾರ್ಯ ಅತ್ಯಂತ ಶ್ರೇಷ್ಠಕರವಾಗಿದೆ. ತೊಂದರೆ ಹೇಳಿಕೊಂಡು ಯಾರೇ ಬಂದರೂ ಅಂತಹವರ ನೆರವಿಗೆ ನಿಲ್ಲುವಲ್ಲಿ ಧರ್ಮಸ್ಥಳ ಸಂಸ್ಥೆ ಮುಂಚೂಣಿಯಲ್ಲಿದೆ ಎಂಬುದು ಗಮನಾರ್ಹ ಸಂಗತಿ ಎಂದರು.ಪಿಎಸ್‌ಐ ಪ್ರಕಾಶ ಬಣಕಾರ ಮಾತನಾಡಿ, ಧರ್ಮಸ್ಥಳ ಸಂಸ್ಥೆ ಸಮಾಜಮುಖಿ ಕಾರ್ಯ ಮೆಚ್ಚುವಂತದ್ದಾಗಿದೆ. ಸದಾ ಸಮಾಜದ ಏಳ್ಗೆ ಬಯಸುತ್ತಿದೆ. ಆರ್ಥಿಕ ಸಬಲತೆ, ಕುಡಿಯುವ ನೀರು, ಪರಿಸರ ಕಾಳಜಿ, ಗ್ರಾಮ ಸ್ವಚ್ಛತೆ, ಶಿಕ್ಷಣ, ಕೃಷಿ, ಸಮುದಾಯ ಶೌಚಾಲಯ ಹೀಗೆ ಪ್ರತಿಯೊಂದು ಕ್ಷೇತ್ರದ ಪ್ರಗತಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶ್ರಮಿಸುತ್ತಿದೆ ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾದೇಶಿಕ ನಿರ್ದೇಶಕ ಜೆ. ಚಂದ್ರಶೇಖರ, ನರೇಗಲ್ಲ ಶ್ರೀ ಅನ್ನದಾನೇಶ್ವರ ಪಿಯು ಕಾಲೇಜು ಶೈಕ್ಷಣಿಕ ಮಾರ್ಗದರ್ಶಕ ಪ್ರೊ. ಮೃತ್ಯುಂಜಯ ದಡೇಸೂರಮಠ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ. ಟ್ರಸ್ಟ್ ಜಿಲ್ಲಾ ನಿರ್ದೇಶಕ ಯೋಗೇಶ ಎ., ಎಸ್.ಬಿ.ಐ. ಮುಖ್ಯವ್ಯವಸ್ಥಾಪಕ ಹರೀಶ ಮಾತನಾಡಿದರು.

ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷೆ ಗೀತಾ ಮಾಡಲಗೇರಿ, ಎಸ್.ಬಿ.ಐ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಸುಬ್ಬಾರಡ್ಡಿ, ರೋಣ ಶಾಖೆ ಪ್ರಭಂದಕ ಬಿ.ಕೆ. ಮರೆಡ್ಡಿ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಯೋಜನಾಧಿಕಾರಿ ಮಹಾಬಲೇಶ್ವರ ಪಟಗಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಮಹೇಶ ಬ್ರಹ್ಮಶೆಟ್ಟರ ನಿರೂಪಿಸಿದರು.